ಬುಧವಾರ, ಸೆಪ್ಟೆಂಬರ್ 22, 2021
29 °C
ಗೋವಾದಲ್ಲಿ ಕಠಿಣ ನಿಯಮ ಜಾರಿ: ಮಾಜಾಳಿಯಲ್ಲಿ ಪ್ರಯಾಣಿಕರ ಮಾಹಿತಿ ಸಂಗ್ರಹ

ಲಾಕ್‌ಡೌನ್: ಉದ್ಯೋಗಿಗಳಿಗೆ ಮತ್ತೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಕೋವಿಡ್ ನಿಯಂತ್ರಣದ ಸಲುವಾಗಿ ರಾಜ್ಯದಲ್ಲಿ ಎರಡು ವಾರಗಳ ಕರ್ಫ್ಯೂ ಹೇರಿದ್ದರೆ, ಅತ್ತ ಸಮೀಪದ ಗೋವಾದಲ್ಲಿ ಮೇ 3ರವರೆಗೆ ಲಾಕ್‌ಡೌನ್‌ ಜಾರಿಯಾಗಿದೆ. ಇದರಿಂದ ಜಿಲ್ಲೆಯ ಸಾವಿರಾರು ಮಂದಿ ಉದ್ಯೋಗಿ ಯುವಕರು ಸಮಸ್ಯೆಗೆ ಸಿಲುಕಿದ್ದಾರೆ.

ಗೋವಾದ ವಿವಿಧ ಕಂಪನಿಗಳಲ್ಲಿ ಕಾರವಾರ ಮತ್ತು ಅಂಕೋಲಾದ ಸಾವಿರಾರು ಯುವಕರು ಉದ್ಯೋಗದಲ್ಲಿದ್ದಾರೆ. ಅವರು ನಿತ್ಯವೂ ಹೋಗಿ ಬಂದು ಮಾಡುತ್ತಾರೆ. ಆದರೆ, ಈಗ ಎರಡೂ ರಾಜ್ಯಗಳಲ್ಲಿ ನಿರ್ಬಂಧಗಳನ್ನು ವಿಧಿಸಿರುವ ಕಾರಣ ಅವರಿಗೆ ಸಮಸ್ಯೆಯಾಗಿದೆ.

ತಾಲ್ಲೂಕಿನ ಮಾಜಾಳಿಯಲ್ಲಿರುವ ಅಂತರರಾಜ್ಯ ಚೆಕ್‌ಪೋಸ್ಟ್‌ನಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳು ಪರಿಶೀಲನೆ ನಡೆಸಿ ಜನ ಸಂಚಾರಕ್ಕೆ ಅವಕಾಶ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ಸದ್ಯದ ಮಾರ್ಗಸೂಚಿ ಪ್ರಕಾರ ಗೋವಾದಿಂದ ಬರುವವರು ಕೋವಿಡ್ ನೆಗೆಟಿವ್ ವರದಿ ತರಬೇಕು ಎಂಬ ನಿಯಮವಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಚೆಕ್‌ಪೋಸ್ಟ್‌ನಲ್ಲಿ ಗೋವಾದಿಂದ ಬರುವವರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ಆರ್.ವಿ.ಕಟ್ಟಿ ತಿಳಿಸಿದ್ದಾರೆ.

15 ಸಾವಿರ ಡೋಸ್ ಲಭ್ಯ:

‘18 ವರ್ಷ ಮೇಲಿನವರಿಗೆ ರಾಜ್ಯದಲ್ಲಿ ಕೋವಿಡ್ ಲಸಿಕೆಯು ಮೇ ತಿಂಗಳ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಲಭ್ಯವಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರವು ಮಾಹಿತಿ ನೀಡಿದೆ. ಹಾಗಾಗಿ ಜಿಲ್ಲೆಯಲ್ಲಿ ಕೂಡ ಮೇ 1ರಿಂದ 18 ವರ್ಷ ಮೇಲಿನ ಹಾಗೂ 45 ವರ್ಷ ಕೆಳಗಿನ ನಾಗರಿಕರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ತಿಳಿಸಿದ್ದಾರೆ.

ಲಸಿಕೆ ಲಭ್ಯವಾದ ಕೂಡಲೇ ಆಶಾ ಕಾರ್ಯಕರ್ತೆಯರು ಹಾಗೂ ಕ್ಷೇತ್ರ ಸಿಬ್ಬಂದಿ ಹಾಗೂ ಮಾಧ್ಯಮಗಳ ಮೂಲಕ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

‘ಪ್ರಸ್ತುತ ಜಿಲ್ಲೆಯಲ್ಲಿ 15 ಸಾವಿರ ಡೋಸ್ ಲಸಿಕೆ ಲಭ್ಯವಿದೆ. ರಾಜ್ಯದಿಂದ ಪೂರೈಕೆಯ ಆಧಾರದ ಮೇಲೆ ಲಸಿಕಾ ಕೇಂದ್ರಗಳಲ್ಲಿ ನೀಡಲಾಗುವುದು. ಕರ್ಫ್ಯೂ ಇರುವ ಕಾರಣ ಲಸಿಕೆ ವಿತರಣಾ ಕೇಂದ್ರಕ್ಕೆ ಹೋಗುವಾಗ ಸಾರ್ವಜನಿಕರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು’ ಎಂದು ತಿಳಿಸಿದ್ದಾರೆ.

ಲಸಿಕಾ ಲಭ್ಯತೆ ಹಾಗೂ ಕೇಂದ್ರಗಳ ಕುರಿತು ಮಾಹಿತಿಯನ್ನು ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕುಗಳಲ್ಲಿರುವ ಕೋವಿಡ್ ವಾರ್ ರೂಮ್‌ಗಳಿಗೆ ನೀಡಲಾಗುತ್ತಿದೆ. ಸಾರ್ವಜನಿಕರು ಈ ಸ್ಥಳಗಳಿಂದ ಮಾಹಿತಿಯನ್ನು ಪಡೆದು ನಂತರ ಲಸಿಕೆ ಪಡೆಯಲು ಹೋಗುವಂತೆ ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ದಂಡ ವಿಧಿಸಿದ ಪೊಲೀಸರು:

ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ನಗರದಲ್ಲಿ ಶುಕ್ರವಾರ ಸಂಚರಿಸುತ್ತಿದ್ದವರನ್ನು ತಡೆದ ಕಾರವಾರ ಪೊಲೀಸರು ದಂಡ ವಿಧಿಸಿದರು. ಅಲ್ಲದೇ ಅವರ ದ್ವಿಚಕ್ರ ವಾಹನಗಳನ್ನೂ ಜಪ್ತಿ ಮಾಡಿ ಎಚ್ಚರಿಕೆ ನೀಡಿದರು. ಈ ಮೂಲಕ ಬೆಳಿಗ್ಗೆ 10ರ ನಂತರವೂ ನಗರದಲ್ಲಿ ಸಂಚರಿಸುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 399 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. 

ಕಾಂಗ್ರೆಸ್ ಅಭಿನಂದನೆ:

ಕೋವಿಡ್ ನಿಯಂತ್ರಣದಲ್ಲಿ ನಿರತರಾಗಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಕಾಂಗ್ರೆಸ್ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಅಭಿನಂದನೆ ಸಲ್ಲಿಸಿದರು.

ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ಅವರ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡಿದರು. ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದರು.

ಲಸಿಕೆಯನ್ನು ತಕ್ಕಮಟ್ಟಿಗೆ ಜಿಲ್ಲೆಯಲ್ಲಿ ಕಾಯ್ದಿರಿಸಿ ಎಲ್ಲರೂ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಬೇಕಾಗಿ ಸಲಹೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ, ನಗರಸಭೆ ಸದಸ್ಯ ಹರೀಶ ಸಾಗೇಕರ, ಪ್ರಮುಖರಾದ ಪ್ರಭಾಕರ ಮಾಳ್ಸೇಕರ, ಕೆ.ಶಂಭು ಶೆಟ್ಟಿ, ವಿನೋದ ನಾಯಕ, ರೋಹಿದಾಸ ವೈಂಗಣಕರ, ಮಚ್ಚೇಂದ್ರ ಮಹಾಲೆ, ಜೀವನ ಪವಾಡ, ನಿತಿನ್ ಶೆಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು