ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿಯದ ವಾಹನ; ಮನೆಯಲ್ಲೇ ಉಳಿದ ಜನ

ಲಾಕ್‌ಡೌನ್‌ಗೆ ಉತ್ತಮ ಸ್ಪಂದನೆ
Last Updated 24 ಮೇ 2020, 11:03 IST
ಅಕ್ಷರ ಗಾತ್ರ

ಶಿರಸಿ: ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಭಾನುವಾರ ಘೋಷಿಸಿದ್ದ ಲಾಕ್‌ಡೌನ್‌ಗೆ ತಾಲ್ಲೂಕಿನ ಜನರು ಸಕಾರಾತ್ಮಕವಾಗಿ ಸ್ಪಂದಿಸಿದರು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳು ಸಂಪೂರ್ಣ ಸ್ತಬ್ದಗೊಂಡಿದ್ದವು.

ಬಟ್ಟೆ ಅಂಗಡಿ, ಕಿರಾಣಿ, ಬೇಕರಿ, ಕ್ಷೌರದ ಅಂಗಡಿ ಸೇರಿದಂತೆ ಎಲ್ಲ ಮಳಿಗೆಗಳೂ ಸಂಪೂರ್ಣ ಬಾಗಿಲು ಮುಚ್ಚಿದ್ದವು. ಸಾರಿಗೆ ಬಸ್ ಸಂಚಾರ ಕೂಡ ಇರಲಿಲ್ಲ. ಆಟೊರಿಕ್ಷಾ, ಟ್ಯಾಕ್ಸಿ, ಖಾಸಗಿ ವಾಹನಗಳು ಕೂಡ ರಸ್ತೆಗಿಳಿಯಲಿಲ್ಲ. ಕೆಲವೇ ಕೆಲವು ಔಷಧ ಅಂಗಡಿಗಳು ಮಾತ್ರ ಬಾಗಿಲು ತೆರೆದಿದ್ದವು. ಬಸ್‌ ನಿಲ್ದಾಣ ವೃತ್ತ, ಶಿವಾಜಿ ಸರ್ಕಲ್, ರಾಘವೇಂದ್ರ ಮಠ ವೃತ್ತ, ಅಶ್ವಿನಿ ಸರ್ಕಲ್, ದೇವಿಕೆರೆ ಹೀಗೆ ಎಲ್ಲ ಪ್ರಮುಖ ವೃತ್ತಗಳು ಬಿಕೋ ಎನ್ನುತ್ತಿದ್ದವು. ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.

ಜನಸಂಚಾರ ತೀರಾ ವಿರಳವಾಗಿತ್ತು. ಬಹುತೇಕರು ಇಡೀ ದಿನವನ್ನು ಮನೆಯಲ್ಲಿ ಕುಟುಂಬ ಸದಸ್ಯರ ಜೊತೆ ಕಳೆದರು. ಹೋಟೆಲ್‌ಗಳೂ ಬಂದಾಗಿದ್ದರಿಂದ, ಮಧ್ಯಾಹ್ನದ ಊಟ ಸಿಗದೇ ಕೆಲವರು ತೊಂದರೆ ಅನುಭವಿಸಿದರು. ಮಟನ್, ಚಿಕನ್ ಅಂಗಡಿಗಳಲ್ಲಿ ಬೆಳಿಗ್ಗೆ ಕೆಲಹೊತ್ತು ಮಾತ್ರ ವ್ಯಾಪಾರ ನಡೆಯಿತು. ನಂತರ ಅವು ಕೂಡ ಬಂದಾಗಿದ್ದವು.

ಸೋಮವಾರ ಮುಸ್ಲಿಮರ ಈದ್ ಉಲ್ ಫಿತ್ರ್ ಇರುವುದರಿಂದ, ಹಬ್ಬದ ಮುನ್ನಾ ದಿನ ಭಾನುವಾರ ಪೇಟೆಯಲ್ಲಿ ಖರೀದಿಯ ಭರಾಟೆ ಜೋರಾಗಿರುತ್ತಿತ್ತು. ಆದರೆ, ಈ ಬಾರಿ ಪೇಟೆ ಬಂದಾಗಿದ್ದರಿಂದ ಮತ್ತು ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಇರುವುದರಿಂದ ಹಬ್ಬವನ್ನು ಸರಳವಾಗಿ ಆಚರಿಸಲು ಸಮುದಾಯದ ಮುಖಂಡರು ಕರೆಕೊಟ್ಟಿದ್ದಾರೆ. ಹೀಗಾಗಿ, ಮುಸ್ಲಿಂ ಸಮುದಾಯದವರು ಮನೆಯಲ್ಲೇ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT