ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಯಾಳ: ವಿವಾದಕ್ಕೀಡಾದ ‘ಲೋಗೋ’

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶಿವಾಜಿ ವೃತ್ತದಲ್ಲಿ ಅಳವಡಿಕೆ
Last Updated 15 ಆಗಸ್ಟ್ 2022, 16:37 IST
ಅಕ್ಷರ ಗಾತ್ರ

ಹಳಿಯಾಳ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪುರಸಭೆ ಕಚೇರಿ ಮುಂಭಾಗದ ಶಿವಾಜಿ ವೃತ್ತದಲ್ಲಿ ಅಳವಡಿಸಿದ ಲಾಂಛನವು ವಿವಾದಕ್ಕೆ ಕಾರಣವಾಗಿದೆ. ಒಂದೇ ಧರ್ಮಕ್ಕೆ ಸಂಬಂಧಿಸಿದ ಸ್ಮಾರಕಗಳ ಪ್ರತಿಕೃತಿಗಳನ್ನು ಬಳಸಲಾಗಿದೆ ಎಂದು ಆಕ್ಷೇಪಿಸಿ, ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಭಾನುವಾರ ತಡರಾತ್ರಿ ಪ್ರತಿಭಟಿಸಿದರು.

ತಾಜ್‌ ಮಹಲ್, ಕುತುಬ್‌ ಮಿನಾರ್, ಕಮಲ ಮಹಲ್‌ಗಳ ಪ್ರತಿಕೃತಿಗಳನ್ನು ಒಳಗೊಂಡ ಲಾಂಛನದಲ್ಲಿ (ಲೋಗೋ) ಒಂದೇ ಧರ್ಮದ ಸ್ಮಾರಕವನ್ನು ಬಿಂಬಿಸಲಾಗಿದೆ. ಇದನ್ನು ಬದಲಿಸಬೇಕು. ಇಲ್ಲದಿದ್ದರೆ ಮಸಿ ಬಳಿಯುವುದಾಗಿ ಪ್ರತಿಭಟನಕಾರರು ಆಗ್ರಹಿಸಿ ಮುನ್ನುಗ್ಗಿದರು. ಪೋಲಿಸರು ಧಾವಿಸಿ ಅವರನ್ನು ತಡೆದರು. ನಂತರ ಪ್ರತಿಭಟನಕಾರರು ರಸ್ತೆಯಲ್ಲಿಯೇ ಧರಣಿ ನಡೆಸಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪುರಸಭೆಯಿಂದ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿ ಸಮಿತಿಗಳನ್ನು ರಚಿಸಲಾಗಿತ್ತು. ಸಮಿತಿಯಿಂದ ಅಶೋಕ ಚಕ್ರ, ತಾಜಮಹಲ್‌, ಇಂಡಿಯಾ ಗೇಟ್‌, ಕೆಂಪುಕೋಟೆ, ಕುತುಬ್ ಮಿನಾರ್‌ನ ಪ್ರತಿಕೃತಿಯನ್ನು ನಿರ್ಮಿಸಲಾಗಿತ್ತು. ಲೋಗೋವನ್ನು ನಿರ್ಮಿಸಿದ ಸ್ಥಳದಲ್ಲಿ ಶನಿವಾರ ಹಾಗೂ ಭಾನುವಾರ ಅನೇಕರು ಬಂದು ‘ಸೆಲ್ಫಿ’ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಹಾಗಾಗಿ, ಆ ಸ್ಥಳವು ‘ಸೆಲ್ಫಿ ಪಾಯಿಂಟ್‌’ ಎಂದೂ ಬಿಂಬಿತವಾಗತೊಡಗಿತು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಬಗ್ಗೆ ಚರ್ಚಿಸಲು ಪುರಸಭೆ ಅಧ್ಯಕ್ಷ ಅಜರ್ ಬಸರಿಕಟ್ಟಿ ನೇತೃತ್ವದಲ್ಲಿ ಭಾನುವಾರ ಸಭೆ ನಡೆಯಿತು. ಆಗ ಹಲವರು, ‘ಮೊಗಲರ ಸಂಸ್ಕೃತಿಯನ್ನು ಬಿಂಬಿಸುವ ಸ್ಮಾರಕಗಳಾದ ತಾಜ್ ಮಹಲ್, ಕುತುಬ್ ಮಿನಾರ್‌ಗಳನ್ನು ಕೂಡಲೇ ತೆರವುಗೊಳಿಸಬೇಕು. ಸಂಸತ್‌ ಭವನ ಹಾಗೂ ವಿಧಾನಸೌಧದ ಪ್ರತಿಕೃತಿ ಅಳವಡಿಸಬೇಕು’ ಎಂದು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಅಜರ್, ‘ಲೋಗೋ ನಿರ್ಮಾಣ ಮಾಡುವ ಮುಂಚೆ ಸಮಿತಿ ರಚಿಸಲಾಗಿತ್ತು. ಆಗ ಯಾವುದೇ ಸಲಹೆ ನೀಡದೇ ಈಗ ಬದಲಾವಣೆಗೆ ಆಗ್ರಹಿಸುತ್ತಿದ್ದೀರಿ. ಅಲ್ಲೇ ಬೇರೆ ಸೆಲ್ಫಿ ಪಾಯಿಂಟ್‌ ನಿರ್ಮಿಸಿ ಅವಕಾಶ ಮಾಡಿಕೊಡಲಾಗುವುದು’ ಎಂದು ಸಮಜಾಯಿಷಿ ನೀಡಿದ್ದರು. ಆದರೆ, ಇದರಿಂದ ಸಮಾಧಾನಗೊಳ್ಳದ ಬಿ.ಜೆ.ಪಿ ಸದಸ್ಯರು ಸಭಾತ್ಯಾಗ ಮಾಡಿದ್ದರು.

ನಂತರ ಸಂಜೆ, ಮಾಜಿ ಶಾಸಕ ಸುನೀಲ ಹೆಗಡೆ ನೇತೃತ್ವದಲ್ಲಿ ತಹಶೀಲ್ದಾರ್ ಪ್ರಕಾಶ ಗಾಯಕವಾಡ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕುತುಬ್ ಮಿನಾರ್ ಹಾಗೂ ತಾಜ್‌ ಮಹಲ್‌ ಪ್ರತಿಕೃತಿಗಳನ್ನು ತೆರವು ಮಾಡುವುದಾಗಿ ಪುರಸಭೆ ಮುಖ್ಯಾಧಿಕಾರಿ ಭರವಸೆ ನೀಡಿದ್ದರು. ಆದರೆ, ರಾತ್ರಿ 9 ಗಂಟೆಯಾದರೂ ಪ್ರತಿಕೃತಿ ತೆರವಾಗಿರಲಿಲ್ಲ.

ಇದರಿಂದ ಆಕ್ರೋಶಗೊಂಡ ಪ್ರತಿಭಟನಕಾರರು, ಪ್ರತಿಕೃತಿ ತೆರವುಗೊಳಿಸಲು ಮುಂದಾದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ಉಂಟಾಯಿತು. ತಡರಾತ್ರಿ ಮತ್ತೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಲೋಗೋದ ಮುಂದೆ ಭಾನುವಾರ ಸಾಯಂಕಾಲದಿಂದ ಬಿಗಿ ಪೋಲಿಸ್‌ ಕಾವಲು ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT