ಒತ್ತಾಯದ ಸಂಬಂಧ: ಬೆಳೆದೀತೆ ಅನುಬಂಧ

ಶುಕ್ರವಾರ, ಏಪ್ರಿಲ್ 26, 2019
35 °C
ಹೊಗೆಯಾಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ; ಮನವೊಲಿಕೆಯಲ್ಲಿ ಜೆಡಿಎಸ್

ಒತ್ತಾಯದ ಸಂಬಂಧ: ಬೆಳೆದೀತೆ ಅನುಬಂಧ

Published:
Updated:

ಶಿರಸಿ: ಕಾರ್ಯಕರ್ತರ ಬಲವಿಲ್ಲದ ಜೆಡಿಎಸ್‌ಗೆ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಸಮಾಧಾನದ ಹೊಗೆ ತಣಿಸುವುದರಲ್ಲೇ ಜೆಡಿಎಸ್ ಮುಖಂಡರು ಹೈರಾಣಾಗಿದ್ದಾರೆ. ‌

ಚುನಾವಣೆಗೆ ಇನ್ನು 19 ದಿನಗಳು ಮಾತ್ರ ಉಳಿದಿವೆ. ಆದರೆ, ಮೈತ್ರಿಕೂಟದ ಪ್ರಚಾರವೇ ಇನ್ನೂ ಆರಂಭವಾಗಿಲ್ಲ. ಪಕ್ಷದ ವರಿಷ್ಠರ ಆದೇಶದಂತೆ ಕಾಂಗ್ರೆಸ್ ಜಿಲ್ಲಾ ನಾಯಕರು, ಮೇಲ್ನೋಟಕ್ಕೆ ಹೊಂದಾಣಿಕೆಯ ಮಾತನಾಡುತ್ತಿದ್ದಾರೆ. ಸೀಟು ಹಂಚಿಕೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವು ಜೆಡಿಎಸ್‌ ಪಾಲಾಗಿರುವುದನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಇದೇ ಮೊದಲ ಬಾರಿಗೆ ‘ಹಸ್ತ’ದ ಚಿಹ್ನೆಯಿಲ್ಲದೇ ಚುನಾವಣೆ ನಡೆಯುತ್ತಿದೆಯೆಂಬ ಆಕ್ರೋಶವನ್ನು ಪ್ರತಿ ಸಭೆಯಲ್ಲಿ ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ.

ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ವಿರುದ್ದ ಇರುವ ಅಸಮಾಧಾನವನ್ನು ಚುನಾವಣೆಯ ನೇತೃತ್ವ ವಹಿಸಿರುವ ಜಿಲ್ಲಾ
ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರೇ ಮಂಗಳವಾರ ಶಿರಸಿಯಲ್ಲಿ ನಡೆದ ಸಭೆಯಲ್ಲಿ ಹೊರಹಾಕಿದ್ದಾರೆ. ‘ನಾಲ್ಕು ತಿಂಗಳ ಹಿಂದೆ ನನ್ನ ಬಗ್ಗೆ ಆಡಿರುವ ಮಾತನ್ನು ನೆನಪಿಸಿಕೊಂಡರೆ, ನನಗೆ ಪ್ರಚಾರಕ್ಕೆ ಹೋಗುವುದು ಕಷ್ಟ’ ಎಂದು ಆನಂದ ಹೆಸರು ಉಲ್ಲೇಖಿಸಿದೇ ಹೇಳಿದ್ದಾರೆ. ಅವರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಸಹ
ಅನುಮಾನ ಎಂಬುದನ್ನು ಕಾಂಗ್ರೆಸ್ ಕಾರ್ಯಕರ್ತರೇ ಹೇಳುತ್ತಾರೆ.

‘ಜಿಲ್ಲೆಯ ಯಾವ ತಾಲ್ಲೂಕಿಗೆ ಭೇಟಿ ನೀಡಿದರೂ ಇದೇ ಪರಿಸ್ಥಿತಿ ಎದುರಿಸುವಂತಾಗಿದೆ. ಭಿನ್ನಮತ ಶಮನ ಮಾಡುವುದರಲ್ಲೇ ದಿನ ಕಳೆದು ಹೋಗುತ್ತಿದೆ. ಪ್ರಚಾರದ ಸಿದ್ಧತೆ ಮಾಡಿಕೊಳ್ಳಲು ಸಮಯ ಸಿಗುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಕೈಜೋಡಿಸದಿದ್ದರೆ ಕ್ಷೇತ್ರದ ಎಲ್ಲ ಮತದಾರರನ್ನು ತಲುಪಲು ಅಸಾಧ್ಯ’ ಎನ್ನುತ್ತಾರೆ ಜೆಡಿಎಸ್ ಕಾರ್ಯಕರ್ತರೊಬ್ಬರು.

‘ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಚುರುಕಾಗಿ ಕೆಲಸ ಮಾಡಿ, ಜೆಡಿಎಸ್ ಪರ ಮತಯಾಚಿಸಿದರೆ, ಬರುವ ಚುನಾವಣೆಗಳಲ್ಲಿ ದುರ್ಬಲವಾಗಿರುವ ಜೆಡಿಎಸ್ ಬಲಗೊಳ್ಳುತ್ತದೆ, ಕಾಂಗ್ರೆಸ್‌ ಬಡವಾಗುತ್ತದೆ. ಈಗ ಪರಿವರ್ತನೆಯಾಗುವ ಮತಗಳಲ್ಲಿ ಶೇ 40ರಷ್ಟು ನಮಗೆ ಮತ್ತೆ ಬರುವ ಸಾಧ್ಯತೆ ಇರುವುದಿಲ್ಲ. ಈ ಆತಂಕ ಕಾಂಗ್ರೆಸ್‌ ವಲಯದಲ್ಲಿ ವ್ಯಾಪಕವಾಗಿರುವುದರಿಂದ
ಪ್ರಚಾರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ ಕಾರ್ಯಕರ್ತರೊಬ್ಬರು.

ಲಾಭಪಡೆಯುವಲ್ಲಿ ವಿಫಲ: ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿ ಅನಂತಕುಮಾರ್ ಹೆಗಡೆ ವಿರುದ್ಧ ಕಾರ್ಯಕರ್ತರಿಗಿರುವ ಅಸಮಾಧಾನದ ಲಾಭವನ್ನು ಪಡೆಯುವಲ್ಲಿ ಮೈತ್ರಿಕೂಟ ವಿಫಲವಾಗಿದೆ. ಮೈತ್ರಿಕೂಟದ ಬಿಕ್ಕಟ್ಟು ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವುದರಿಂದ ಅನಂತಕುಮಾರ್ ಬೆಂಬಲಿಗರ ಆತ್ಮವಿಶ್ವಾಸ ಇಮ್ಮಡಿಸಿದೆ.

ನೋಟಾದತ್ತ ಹೆಚ್ಚಿದ ಒಲವು
‘ಬಿಜೆಪಿ ಪರ ಇರುವ ಮತದಾರರಿಗೆ ಬೇರೆ ಚಿಹ್ನೆಗೆ ಮತ ಹಾಕಲು ಮನಸ್ಸಾಗುವುದಿಲ್ಲ. ಒಂದೊಮ್ಮೆ ವಿಚಾರ ಬದಲಾಯಿಸುವ ನಿರ್ಧಾರ ತಳೆದರೂ, ಈ ಬಾರಿ ವಿರೋಧಿ ಅಭ್ಯರ್ಥಿಯ ಬಗ್ಗೆಯೂ ಅಷ್ಟೊಂದು ಒಲವು ಇಲ್ಲ. ಹೀಗಾಗಿ, ನೋಟಾ ಮತ ಹೆಚ್ಚು ಚಲಾವಣೆಯಾಗುವ ಸಾಧ್ಯತೆಯಿದೆ’ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಕಾರ್ಯಕರ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !