ಗುರುವಾರ , ಆಗಸ್ಟ್ 5, 2021
26 °C
ಗ್ಲುಕೋಸ್ ಬಾಟಲಿಗಳ ಜೊತೆ ಕ್ಯಾನ್‌ಗಳಲ್ಲಿ ತುಂಬಿಡಲಾಗಿತ್ತು

ಅಕ್ರಮವಾಗಿ ಸ್ಪಿರಿಟ್ ಸಾಗಣೆ: ಲಾರಿ ಚಾಲಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಗ್ಲುಕೋಸ್ ಬಾಟಲಿಗಳ ಜೊತೆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಪಿರಿಟ್ ಅನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶನಿವಾರ ಜಪ್ತಿ ಮಾಡಿದ್ದಾರೆ. ಚಾಲಕನನ್ನು ಬಂಧಿಸಿದ್ದು, 4,375 ಲೀಟರ್ ಸ್ಪಿರಿಟ್ ಮತ್ತು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಮುಂಜಾನೆ ಆರು ಗಂಟೆಯ ಸುಮಾರಿಗೆ ಬಂದ ಲಾರಿಯಲ್ಲಿ ಮೇಲ್ನೋಟಕ್ಕೆ ಗ್ಲುಕೋಸ್ ಬಾಟಲಿಗಳನ್ನು ಪೆಟ್ಟಿಗೆಗಳಲ್ಲಿ ತುಂಬಿರುವುದು ಕಂಡುಬಂತು. ಚೆಕ್‌‍ಪೋಸ್ಟ್‌ನ ಸಿಬ್ಬಂದಿ ಅನುಮಾನಗೊಂಡು ಮತ್ತಷ್ಟು ಪ‍ರಿಶೀಲಿಸಿದಾಗ ಸ್ಪಿರಿಟ್ ತುಂಬಿದ ಕ್ಯಾನ್‌ಗಳನ್ನು ಪೆಟ್ಟಿಗೆಗಳಲ್ಲಿ ತುಂಬಿದ್ದು ಪತ್ತೆಯಾಯಿತು. ಸ್ಪಿರಿಟ್ ವಾಸನೆ ಬಾರದಂತೆ ಕ್ಯಾನ್‌ಗಳ ಮುಚ್ಚಳಕ್ಕೆ ಒಳಗಿನಿಂದ ಬಲೂನ್‌ಗಳನ್ನು ಕಟ್ಟಲಾಗಿತ್ತು.

‘ತಲಾ 35 ಲೀಟರ್‌ಗಳ 125 ಕ್ಯಾನ್‌ಗಳನ್ನು ಈ ರೀತಿ ಸಾಗಿಸಲಾಗುತ್ತಿತ್ತು. ಇದರ ಮೌಲ್ಯ ₹ 2.53 ಲಕ್ಷವಾಗಿದೆ. ಲಾರಿಯಲ್ಲಿ ₹ 7.14 ಲಕ್ಷ ಮೌಲ್ಯದ, ಒಂದು ಸಾವಿರ ಗ್ಲುಕೋಸ್ ಬಾಟಲಿಗಳಿವೆ. ಲಾರಿಯೂ ಸೇರಿದಂತೆ ಒಟ್ಟು ₹ 30.47 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತೆ ಎಂ.ವನಜಾಕ್ಷಿ ಮಾಹಿತಿ ನೀಡಿದರು.

ಲಾರಿಯು ಗೋವಾದ ‍ಪೋಂಡಾದಿಂದ ಕೇರಳದ ಕೊಚ್ಚಿಯ ತಮ್ನಮ್‌ಗೆ ಹೋಗುತ್ತಿತ್ತು. ಚಾಲಕ ಜಿಷ್ಣು ಒ.ಕೆ (40) ಎಂಬಾತನನ್ನು ಅಬಕಾರಿ ಇಲಾಖೆ ‍ಅಧಿಕಾರಿಗಳು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪ ಅಧೀಕ್ಷಕಿ ಸುವರ್ಣಾ ಬಿ ನಾಯ್ಕ, ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕ ಬಸವರಾಜ್, ಮಾಜಾಳಿ ಚೆಕ್‌ಪೋಸ್ಟ್‌ನ ಅಬಕಾರಿ ಉಪ ನಿರೀಕ್ಷಕ ಪಿ.ಕೆ.ಹರ್ಡನಕರ್, ಸಿಬ್ಬಂದಿ ಎಂ.ಎಂ.ನಾಯ್ಕ, ಕೆ.ಜಿ ಬಂಟ್, ಎನ್.ಎನ್.ಖಾನ್, ಕುಂದಾ ಬಿ ನಾಯ್ಕ, ವಿಶಾಲ್ ನಾಯ್ಕ, ಮತ್ತು ಆನಂದ ಕೊಂಡೇಕರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು