ಪರಿಸರ ಪ್ರೀತಿ ಸಾರಿದ ‘ಮಾಯದ ಕೊಡಲಿ’ ನಾಟಕ

7

ಪರಿಸರ ಪ್ರೀತಿ ಸಾರಿದ ‘ಮಾಯದ ಕೊಡಲಿ’ ನಾಟಕ

Published:
Updated:
Deccan Herald

ಸಿದ್ದಾಪುರ ತಾಲ್ಲೂಕಿನ ರಂಗ ಸೌಗಂಧ ತಂಡ ಸ್ಥಳೀಯ ಪ್ರಶಾಂತಿ ಸಭಾಂಗಣದಲ್ಲಿ ಗುರುವಾರ ಪ್ರದರ್ಶಿಸಿದ ‘ಮಾಯದ ಕೊಡಲಿ’ ನಾಟಕ, ಸಮೃದ್ಧ ಕಾಡು ಹಾಗೂ ಹರಿಯುವ ನದಿಗಳಿರುವ ಉತ್ತಮ ಪರಿಸರವನ್ನು ಉಳಿಸಿಕೊಳ್ಳುವ ಮಹತ್ವವನ್ನು ಸರಳವಾಗಿ ನಿರೂಪಿಸುವಲ್ಲಿ ಯಶಸ್ವಿಯಾಯಿತು.

‘ಅರಮನೆಯ ಮುಂದೆ ಇರುವ ಮರ ಕಡಿಯಿರಿ, ಅಲ್ಲಿಯೇ ನೀರಿಗಾಗಿ ಬಾವಿ ತೋಡಿರಿ’ ಎಂದು ಹೇಳುವ, ಆ ಕೆಲಸದಲ್ಲಿ ಯಶಸ್ವಿಯಾಗುವವರಿಗೆ ಅರ್ಧ ರಾಜ್ಯವನ್ನೇ ಕೊಡುವ ಘೋಷಣೆ ಮಾಡುವ ಮೂರ್ಖ ರಾಜನೊಬ್ಬನಿಗೆ, ತೀರಾ ಸಾಮಾನ್ಯ ವ್ಯಕ್ತಿಯೊಬ್ಬ ಪರಿಸರದ ಮಹತ್ವವನ್ನು ಮನವರಿಕೆ ಮಾಡಿಸುವುದು. ಇದರಿಂದ ಬದಲಾಗುವ ರಾಜ, ‘ಒಂದು ಮರ ಕಡಿಯಲು ಎರಡು ಗಿಡ ನೆಡಬೇಕು ಹಾಗೂ ಬೀಳುವ ನೀರನ್ನು ನೆಲದಲ್ಲಿ ಇಂಗಿಸಬೇಕು’ ಎಂಬ ನಿಯಮವನ್ನು ರಾಜ್ಯದಲ್ಲಿ ಜಾರಿ ಮಾಡುವುದು ಈ ನಾಟಕದ ಸಂಕ್ಷಿಪ್ತ ಕಥಾವಸ್ತು.

ಇಂತಹ ಸಾದಾ ಕಥೆಯನ್ನು ಪರಿಣಾಮಕಾರಿಯಾಗಿ ಹೇಳಲು ಸರಳ ರಂಗ ಪರಿಕರಗಳು ಹಾಗೂ ಉತ್ತಮ ರಂಗ ವಿನ್ಯಾಸದೊಂದಿಗೆ, ಹಾಡು ಹಾಗೂ ನೃತ್ಯವನ್ನು ಬಳಸಿಕೊಂಡಿದ್ದು ವಿಶೇಷವಾಗಿತ್ತು. ಕಾಲೇಜು ವಿದ್ಯಾರ್ಥಿಗಳಿಗೆ ಪಾತ್ರ ಹಾಕಿಸಿ, ಅವರಲ್ಲಿ ರಂಗಾಸಕ್ತಿ ಬೆಳೆಸಲು ಪ್ರಯತ್ನ ನಡೆಸಿರುವುದೂ ಕೂಡ ಮುಖ್ಯವಾಗಿ ಕಂಡಿತು.

ರಂಗ ಸೌಗಂಧದ ಸಂಚಾಲಕ ಗಣಪತಿ ಹೆಗಡೆ ಹುಲಿಮನೆ ಅವರು ಐ.ಕೆ.ಬೋಳುವಾರು ಅವರ ಕಿರು ಪ್ರಹಸನವನ್ನಾಧರಿಸಿದ ಈ ನಾಟಕವನ್ನು ನಿರ್ದೇಶಿಸಿದ್ದರು. ಶ್ರೀಪಾದ ಹೆಗಡೆ ಕೋಡನಮನೆ (ವಿನ್ಯಾಸ), ರಾಜೇಂದ್ರ ಕೊಳಗಿ (ಗೀತ ರಚನೆ, ಸಂಗೀತ ನಿರ್ದೇಶನ), ಜಯರಾಮ ಭಟ್ಟ ಹೆಗ್ಗಾರಳ್ಳಿ, ನಾಗಪತಿ ಭಟ್ಟ ವಡ್ಡಿನಗದ್ದೆ, ಶಶಿಧರ ನಾಯ್ಕ ಕೊಂಡ್ಲಿ (ಸಂಗೀತ ನಿರ್ವಹಣೆ), ಉದಯ ಶಿರಸಿ, ನಾಗರಾಜ ಭಂಡಾರಿ ಶಿರಸಿ (ಧ್ವನಿ ಬೆಳಕು) ಸಹಕಾರ ನೀಡಿದ್ದರು.

ಪಾತ್ರಧಾರಿಗಳಾಗಿ ಪಲ್ಲವಿ ಹೆಗಡೆ ಹುಲಿಮನೆ, ಶಮಂತ ಹೆಗಡೆ ಶಿರಳಗಿ, ಅಕ್ಷಯ ಹೆಗಡೆ ಬೈಲಳ್ಳಿ, ವೆಂಕಟೇಶ ಹೆಗಡೆ ಕಬ್ಬೆ, ಭರತ ಹೆಗಡೆ ಉಪ್ಪಡಿಕೆ, ದರ್ಶನ ಭಟ್ಟ ಕುಳಿಬೀಡು, ಮನೋಜ ಹೆಗಡೆ ಸಿದ್ದಾಪುರ, ಪೂರ್ಣಚಂದ್ರ ಹೆಗಡೆ ಹುಲಿಮನೆ, ವಿನಾಯಕ ಹೆಗಡೆ ಸುಂಗೋಳಿಮನೆ ಭಾಗವಹಿಸಿದ್ದರು. ನಾಟಕಕ್ಕೆ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಹಕಾರ ನೀಡಿತ್ತು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !