ಸೋಮವಾರ, ಜೂನ್ 21, 2021
30 °C
ಗೋಕರ್ಣದಲ್ಲಿ ಭಕ್ತರ ಹರ್ಷೋದ್ಗಾರದ ನಡುವೆ ವಿಜೃಂಭಣೆಯಿಂದ ಸಾಗಿದ ತೇರು

ಗೋಕರ್ಣದಲ್ಲಿ ಮಹಾಬಲೇಶ್ವರನ ರಥೋತ್ಸವದ ಸಡಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಪುರಾಣ ಪ್ರಸಿದ್ಧ ಗೋಕರ್ಣ ಮಹಾಶಿವರಾತ್ರಿಯ ಅಂಗವಾಗಿ ಮಹಾಬಲೇಶ್ವರದ ದೇವರ ಬ್ರಹ್ಮರಥೋತ್ಸವವನ್ನು ಸೋಮವಾರ ಅದ್ಧೂರಿಯಾಗಿ ನೆರವೇರಿಸಲಾಯಿತು. ಸೇರಿದ್ದ ಸಾವಿರಾರು ಭಕ್ತರು ಶಿವನಾಮ ಸ್ಮರಣೆಯೊಂದಿಗೆ ತೇರನ್ನು ಎಳೆದು ಸಂಭ್ರಮಿಸಿದರು.

ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ, ಕೈವಲ್ಯ ಮಠಾಧೀಶರಾದ ಶಿವಾನಂದ ಸರಸ್ವತಿ ಸ್ವಾಮೀಜಿ ರಥಕಾಣಿಕೆ ನೆರವೇರಿಸಿದರು.

ರಥಬೀದಿಯಲ್ಲಿ ನಡೆದ ಆಕರ್ಷಕ ರಥೋತ್ಸದಲ್ಲಿ ಕ್ಷೇತ್ರದ ಮುಖ್ಯದೇವರಾದ ಮಹಾಬಲೇಶ್ವರನ ಮೂರ್ತಿಯನ್ನು ಅಲಂಕರಿಸಿ ಪ್ರತಿಷ್ಠಾಪಿಸಲಾಗಿತ್ತು. ವೆಂಕಟ್ರಮಣ ದೇವಸ್ಥಾನದವರೆಗೆ ತೇರನ್ನು ಎಳೆದ ಭಕ್ತರು, ತಿರುಗಿ ಮೂಲಸ್ಥಾನಕ್ಕೆ ಬಂದು ನಿಲ್ಲಿಸಿದರು. ಎತ್ತರದ ರಥ ಎಂದೇ ಪ್ರಸಿದ್ಧಿ ಪಡೆದ, ಅತಿ ಪುರಾತನವಾದ ಈ ರಥವನ್ನು ಬಣ್ಣಬಣ್ಣದ ಬಾವುಟಗಳಿಂದ, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.

ಸುತ್ತಮುತ್ತಲೂ ಸಹಸ್ರಾರು ಜನರು ನಿಂತು ರಥೋತ್ಸವವನ್ನು ನೋಡಿ ಆನಂದಿಸಿದರು. ರಥಬೀದಿಯುದ್ದಕ್ಕೂ ‘ಹರ ಹರ ಮಹಾದೇವ’, ‘ಜಯ ಜಯ ಶಂಕರ’, ‘ಹರ ಹರ ಶಂಕರ’ ಎಂಬ ಶಿವಸ್ತುತಿಗಳನ್ನು ಭಕ್ತರು ಉದ್ಗರಿಸಿದರು. 

ಗೋಕರ್ಣದ ರಥಬೀದಿ ಜನರಿಂದ ತುಂಬಿ ತುಳಕಿದ್ದು, ಸಾವಿರಾರು ಮಂದಿ ಸಾಕ್ಷಿಯಾದರು. ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು, ಯಾವುದೇ ಅವಘಡ ಆಗದಂತೆ ನೋಡಿಕೊಂಡರು. ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದರು. 

ವಿದೇಶಿಯರ ಸಂಭ್ರಮ: ಗೋಕರ್ಣದ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರೂ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ರಸ್ತೆಯ ಎರಡೂ ಬದಿಯ ಮನೆಗಳ ಮಹಡಿಗಳ ಮೇಲೆ ನಿಂತು ಕಣ್ತುಂಬಿಕೊಂಡರು. ಗಂಭೀರವಾಗಿ ಸಾಗುತ್ತಿದ್ದ ರಥದ ಫೋಟೊ, ವಿಡಿಯೊ ಮಾಡಿಕೊಂಡರು. ರಥದ ಹಿನ್ನೆಲೆ ಕಾಣುವಂತೆ ಸೆಲ್ಫಿಯನ್ನೂ ತೆಗೆದುಕೊಂಡು ಖುಷಿಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು