ಭಾನುವಾರ, ಮೇ 29, 2022
30 °C
ಮಾಜಾಳಿ: ನೀರು ನಿಂತಲ್ಲೇ ನಿಂತು ಹಲವು ಸಮಸ್ಯೆ

ಮೈನಹೊಳೆಗೆ ನದಿಯ ಗೇಟು ತೆರೆಯಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಮೈನಹೊಳೆಗೆ ಸಣ್ಣ ನೀರಾವರಿ ಇಲಾಖೆಯು ಒಟ್ಟು 37 ಗೇಟುಗಳನ್ನು ಅಳವಡಿಸಿ ನೀರಿನ ಹರಿವನ್ನು ತಡೆದಿದೆ. ಇದರಿಂದ ಸಮೀಪದ ನಿವಾಸಿಗಳಿಗೆ ಹತ್ತಾರು ಸಮಸ್ಯೆಗಳಾಗುತ್ತಿವೆ. ಹಾಗಾಗಿ ಆರೇಳು ಗೇಟುಗಳನ್ನು ತೆರೆದು ನೀರು ಹರಿಯಲು ಬಿಡಬೇಕು ಎಂದು ತಾಲ್ಲೂಕಿನ ಮಾಜಾಳಿ ಮತ್ತು ಕೊಠಾರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂಬಂಧ ಸಣ್ಣ ನೀರಾವರಿ ಇಲಾಖೆಯ ಮುಖ್ಯ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

‘ಈ ನದಿಗೆ ಹಿಂದಿನಿಂದಲೂ ಗೇಟ್‌ಗಳನ್ನು ಮುಚ್ಚಿರಲಿಲ್ಲ. ಈ ವರ್ಷ ಮುಚ್ಚಿದ ಬಳಿಕ ಕೊಠಾರ ಭಾಗದ ಜನರಿಗೆ ನದಿಯ ನೀರು ಸಿಗುತ್ತಿಲ್ಲ. ನದಿಯಲ್ಲಿ ಮತ್ತು ಸುತ್ತಮುತ್ತ ನೀರು ಸಂಗ್ರಹವಾಗಿರುವ ಕಾರಣ ಡೆಂಗಿ, ಮಲೇರಿಯಾ, ಚರ್ಮರೋಗದಂಥ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ’ ಎಂದು ದೂರಿದ್ದಾರೆ.

‘ನದಿಯಲ್ಲಿ ನೀರು ನಿಂತಿರುವ ಕಾರಣ ದುರ್ವಾಸನೆ ಬೀರುತ್ತಿದ್ದು, ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಈ ಭಾಗದ 80ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆಯನ್ನೇ ಜೀವನೋಪಾಯವಾಗಿ ನಂಬಿವೆ. ಇದರಿಂದಾಗಿ ಮೀನುಗಾರಿಕೆ ಮಾಡಲೂ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.

ಕೊಠಾರ ಭಾಗದಲ್ಲಿ ನದಿಯ ಎರಡೂ ಕಡೆಗಳಲ್ಲಿ ಪಿಚ್ಚಿಂಗ್ ನಿರ್ಮಿಸಿದರೆ ಸಮೀಪದ ಜಮೀನಿಗೆ ನೀರು ಹರಿಯುವುದಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ ಮತ್ತು ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಅದನ್ನು ಶೀಘ್ರವೇ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲೀನಾ ಕೊಠಾರಕರ, ಸದಸ್ಯರಾದ ಚಂದ್ರಹಾಸ ಕೊಠಾರಕರ, ಕಿರಣ.ಎಚ್, ದೀಪಕ್.ಎಸ್, ಶ್ವೇತಾ.ಎಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.