ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ದಾಖಲೆಗಳಿಲ್ಲದೇ ₹2 ಕೋಟಿ ಸಾಗಣೆ: ಯುವಕನ ಬಂಧನ

Last Updated 9 ಜೂನ್ 2022, 18:55 IST
ಅಕ್ಷರ ಗಾತ್ರ

ಕಾರವಾರ: ಆತ ಟಿಕೆಟ್ ತೆಗೆದುಕೊಳ್ಳದೇ ಮುಂಬೈನಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ರೈಲಿನ ಟಿ.ಟಿ. ಅವನ ಬಳಿ ಟಿಕೆಟ್ ಕೇಳಿದಾಗ ಬಯಲಾಗಿದ್ದು, ಅಕ್ರಮವಾಗಿ ಹಣ ಸಾಗಿಸುವ ದಂಧೆ. ಆತನ ಬಳಿ ಸಿಕ್ಕಿದ್ದು ಬರೋಬ್ಬರಿ ₹ 2 ಕೋಟಿ ನಗದು!

ಹಣ ಅಕ್ರಮ ಸಾಗಣೆಯ ಕೃತ್ಯದಲ್ಲಿ ತೊಡಗಿರುವ ಯುವಕನನ್ನು ರೈಲ್ವೆ ಪೊಲೀಸರು ಇಲ್ಲಿನ ಶಿರವಾಡ ರೈಲು ನಿಲ್ದಾಣದಲ್ಲಿ ಬುಧವಾರ ರಾತ್ರಿ ಬಂಧಿಸಿದ್ದಾರೆ. ರಾಜಸ್ಥಾನದ ಸೂಂತ್ರಿಯ ಚೇನ್ ಸಿಂಗ್ (22) ಬಂಧಿತ ಆರೋಪಿ.

ಆತ ಮುಂಬೈನಿಂದ ಮಂಗಳೂರಿಗೆ ಹೋಗುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ರೈಲಿನ ಟಿ.ಟಿ ಪ್ರಯಾಣಿಕರ ಬಳಿ ಟಿಕೆಟ್‌ ತಪಾಸಣೆ ಮಾಡುತ್ತಿರುವಾಗ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಪರಿಶೀಲಿಸಿದಾಗ ಆತ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿರುವುದು ಗೊತ್ತಾಯಿತು.

ಯುವಕನ ಬಳಿಯಿದ್ದ ಬಾಕ್ಸ್ ಬಗ್ಗೆ ವಿಚಾರಿಸಿದಾಗ ಸರಿಯಾಗಿ ಉತ್ತರಿಸಲಿಲ್ಲ. ಇದರಿಂದ ಅನುಮಾನಗೊಂಡ ಟಿಕೆಟ್ ಪರಿಶೀಲನಾ ಸಿಬ್ಬಂದಿ, ಕೊಂಕಣ ರೈಲ್ವೆಯ ಮುಖ್ಯ ಭದ್ರತಾ ಇನ್‌ಸ್ಪೆಕ್ಟರ್ ಎಚ್.ಕೆ.ಪ್ರಸನ್ನ ಅವರಿಗೆ ಮಾಹಿತಿ ನೀಡಿದರು. ಬಾಕ್ಸ್ ತೆರೆದು ನೋಡಿದಾಗ ನೋಟುಗಳು ಕಂಡುಬಂದವು.

ಆರೋಪಿ ಮತ್ತು ಬಾಕ್ಸ್ ವಶಕ್ಕೆ ಪಡೆದ ರೈಲ್ವೆ ಪೊಲೀಸರು, ಟಿಕೆಟ್‌ರಹಿತ ಪ್ರಯಾಣಕ್ಕಾಗಿ ₹ 1,060 ದಂಡ ವಿಧಿಸಿದರು. ಬಳಿಕ ಆತನನ್ನು ಮತ್ತು ಹಣವನ್ನು ಕಾರವಾರ ಗ್ರಾಮೀಣ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದರು. ನೋಟಿನ ಕಂತೆಗಳನ್ನು ಎಣಿಸಿದಾಗ ₹ 2 ಕೋಟಿ ಪತ್ತೆಯಾಗಿದೆ.

ತನಿಖೆಯ ವೇಳೆ ಆತ, ತಾನು ಮುಂಬೈನ ಭರತ್ ಭಾಯ್ ಉರುಫ್‌ ಪಿಂಟು ಎಂಬುವವರ ಜೊತೆ ಕೆಲಸ ಮಾಡುತ್ತಿದ್ದು, ತಿಂಗಳಿಗೆ ₹ 15 ಸಾವಿರ ಕೊಡುತ್ತಾರೆ. ತಾನು ಸಾಗಿಸುವ ಹಣವನ್ನು ಮಂಗಳೂರಿನ ರಾಜು ಎಂಬುವವರಿಗೆ ಕೊಡಬೇಕಿತ್ತು ಎಂದು ತಿಳಿಸಿದ್ದಾಗಿ ರೈಲ್ವೆ ರಕ್ಷಣಾ ಪಡೆಯ ಇನ್‌ಸ್ಪೆಕ್ಟರ್ ವಿಪಿನ್ ಸಿಂಗ್ ರಾಣಾ ತಿಳಿಸಿದ್ದಾರೆ.

ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT