ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಅಡಿಕೆ ನಾಡಿನಲ್ಲಿ ಮಾವಿನ ಕಂಪು

ಹೊಸತನದ ಕೃಷಿಗೆ ತೆರೆದುಕೊಂಡ ಭೈರಿಮನೆ ದತ್ತಣ್ಣ
Last Updated 9 ಜೂನ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ಅಡಿಕೆ ಬೆಳೆ ಪ್ರಾಧಾನ್ಯವಾಗಿರುವ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಮಾವಿನ ಹಣ್ಣಿನ ಬೆಳೆಗೆ ಒತ್ತು ನೀಡಿರುವ ರೈತರೊಬ್ಬರು ಹೊಸತನದ ಕೃಷಿಗೆ ತೆರೆದುಕೊಂಡಿದ್ದಾರೆ.

ಭೈರಿಮನೆ ಗ್ರಾಮದ ದತ್ತಾತ್ರೇಯ ವೆಂಕಟಾಚಲ ಹೆಗಡೆ ವಾರ್ಷಿಕವಾಗಿ ದೊಡ್ಡ ಪ್ರಮಾಣದಲ್ಲಿ ಮಾವು ಬೆಳೆಯುತ್ತಿರುವ ರೈತರಾಗಿದ್ದಾರೆ. ಹತ್ತು ಎಕರೆ ಜಾಗದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ಬೆಳೆದಿರುವ ಅವರು ಮೂರು ಎಕರೆಯನ್ನು ಮಾವಿನ ಹಣ್ಣು, ಅಪ್ಪೆಮಿಡಿ ಗಿಡಗಳಿಗೆ ಮೀಸಲಿಟ್ಟಿದ್ದಾರೆ.

ಭೈರಿಮನೆ ದತ್ತಣ್ಣ ಎಂದೇ ಪ್ರಸಿದ್ಧಿಯಾಗಿರುವ ಅವರ ತೋಟದಲ್ಲಿ ಮಲ್ಲಿಕಾ, ವರಟೆ ಗಿಡ್ಡ, ಪೈರಿ, ಆಮ್ರಪಾಲಿ, ಚಂದ್ರಮ, ಕರಿ ಇಷಾಡ, ಬೆನೆತ್, ಗೋವಾ ಮಂಕೂರ್ ಸೇರಿದಂತೆ 40 ವೈವಿಧ್ಯದ ಸಿಹಿ ಮಾವಿನ ಹಣ್ಣಿನ ಮರಗಳಿವೆ.

ಮಾವಿನಕಟ್ಟಾ ಅಪ್ಪೆ, ನಂದಗಾರ ಅಪ್ಪೆ, ಮಾಳಂಜಿ ಅಪ್ಪೆ, ಹಳದೋಟ ಅಪ್ಪೆ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಅಪ್ಪೆಮಿಡಿ ಗಿಡಗಳು ಆಳೆತ್ತರದವರೆಗೆ ಬೆಳೆದು ಕಾಯಿ ನೀಡುತ್ತಿವೆ. ವಾರ್ಷಿಕವಾಗಿ ಎರಡೂವರೆ ಟನ್ ಮಾವಿನ ಹಣ್ಣು, ಆರು ಟನ್‍ನಷ್ಟು ಅಪ್ಪೆಮಿಡಿ ಬೆಳೆಯುವ ದತ್ತಣ್ಣ ಇವುಗಳನ್ನು ಶಿರಸಿ ಮತ್ತು ಸುತ್ತಮುತ್ತಲಿನ ಹಳ್ಳಿ ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ.

‘90ರ ದಶಕದಲ್ಲಿ ಮಾವು ಕೃಷಿಯತ್ತ ಒಲವು ಬೆಳೆಸಿಕೊಂಡಿದ್ದೆ. 17 ಎಕರೆ ಮಾಲ್ಕಿ ಬೇಣದ ಜಾಗದಲ್ಲಿ 7 ಎಕರೆ ಅಡಿಕೆ ತೋಟಕ್ಕೆ ಮೀಸಲಿಟ್ಟು, ಉಳಿದ ಜಾಗದಲ್ಲಿ ಹಣ್ಣಿನ ಗಿಡ ಬೆಳೆಸಲು ಆರಂಭಿಸಿದೆವು. ಗೇರು ಗಿಡಗಳನ್ನು ಬೆಳೆಸಿದ್ದರೂ ಅವು ನಿರೀಕ್ಷಿತ ಲಾಭ ನೀಡದ ಕಾರಣ ಅವುಗಳನ್ನು ತೆಗೆದು ಕಾಳುಮೆಣಸು ಬೆಳೆಸುತ್ತಿದ್ದೇವೆ’ ಎಂದು ದತ್ತಾತ್ರೇಯ ಹೆಗಡೆ ಹೇಳಿದರು.

‘2003ರಿಂದ ಈವರೆಗೆ ನೂರಾರು ಕ್ವಿಂಟಲ್ ಮಾವಿನ ಹಣ್ಣು ಬೆಳೆದು ಮಾರಾಟ ಮಾಡಿದ್ದೇವೆ. ಉತ್ತಮ ಆದಾಯವನ್ನೂ ಗಳಿಸಿದ್ದೇವೆ. ಏಕ ಬೆಳೆಯ ಕೃಷಿಯ ಬದಲು ಬಹುಬೆಳೆಯ ಪದ್ಧತಿಯಲ್ಲಿ ಆಸಕ್ತಿ ಇದೆ. ಇದು ರೈತರಿಗೆ ಎಲ್ಲ ಕಾಲದಲ್ಲೂ ಆದಾಯ ಗಳಿಕೆಗೆ ಸುಲಭದ ಮಾರ್ಗವೂ ಆಗಿದೆ’ ಎನ್ನುತ್ತಾರೆ ಅವರು.

ಅಪ್ಪೆಮಿಡಿಗೆ ಹೆಚ್ಚು ಬೇಡಿಕೆ
‘ದೇಶದ ವಿವಿಧ ಭಾಗದಿಂದ ತಂದ ಅಪ್ಪೆಮಿಡಿ ಗಿಡಗಳನ್ನು ತೋಟದಲ್ಲಿ ಬೆಳೆಸಿದ್ದು, ಅವುಗಳಿಂದ ದೊರೆಯುವ ಫಸಲಿಗೆ ಪ್ರತಿ ವರ್ಷ ಉತ್ತಮ ಬೆಡಿಕೆ ಸಿಗುತ್ತಿದೆ. ಕಳೆದ ಎರಡು ವರ್ಷಗಳವರೆಗೆ ಸ್ಥಳೀಯ ಮಹಿಳಾ ಸ್ವಸಹಾಯ ಸಂಘದವರೇ ಉಪ್ಪಿನಕಾಯಿ ಸಿದ್ಧಪಡಿಸುತ್ತಿದ್ದರು. ಹೆಚ್ಚಿನ ಪ್ರಮಾಣದ ಅಪ್ಪೆಮಿಡಿ ಅವರಿಗೆ ಪೂರೈಕೆಯಾಗುತ್ತಿತ್ತು. ಈಗ ರಾಜ್ಯದ ವಿವಿಧ ಭಾಗಗಳಿಂದ ಬೇಡಿಕೆ ಬರುತ್ತಿದೆ. ಶಿರಸಿಯಲ್ಲೇ ಹೆಚ್ಚು ಮಾರಾಟವಾಗುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿ ಆದಾಯವೂ ಗಳಿಕೆಯಾಗುತ್ತಿದೆ’ ಎನ್ನುತ್ತಾರೆ ದತ್ತಾತ್ರೇಯ ಹೆಗಡೆ.

***

ಶಿರಸಿ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿ ಮಾವು ಬೆಳೆಗೆ ಒತ್ತು ನೀಡುವುದು ಕಡಿಮೆ. ಹೊಸಬಗೆಯ ಕೃಷಿ ಮಾಡಬೇಕು ಎಂಬ ತುಡಿತ ಈಗ ದೊಡ್ಡ ಪ್ರಮಣದಲ್ಲಿ ಮಾವು ಬೆಳೆಯಲು ನೆರವಾಗಿದೆ.
-ದತ್ತಾತ್ರೇಯ ಹೆಗಡೆ ಭೈರಿಮನೆ,ಮಾವು ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT