ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕಾಂಡ್ಲಾ ಹೂವರಳುವ ಸಮಯ!

ಪರಿಸರ ಪ್ರಿಯರ ಆಕರ್ಷಿಸುವ ಸುವಾಸನೆ ಭರಿತ ಬಿಳಿಯ ಹೂಗೊಂಚಲು
Last Updated 24 ಜನವರಿ 2021, 19:30 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ನದಿಗಳ ಅಳಿವೆಯಲ್ಲಿರುವ ಕಾಂಡ್ಲಾ ಸಸಿಗಳಲ್ಲಿ ಈಗ ಹೂವರಳುವ ಸಮಯ. ಬಿಳಿ ಬಣ್ಣದ, ಸಣ್ಣ ಹೂಗಳು ಕಾಂಡ್ಲಾ ವನದ ಸುತ್ತಲಿನ ಇಡೀ ಪ್ರದೇಶವನ್ನೇ ಸುವಾಸನೆ ಭರಿತವಾಗಿಸಿವೆ.

ಕಾಂಡ್ಲಾದಲ್ಲಿ ಹಲವಾರು ಪ್ರಭೇದಗಳಿದ್ದು, ವಿಶೇಷವಾಗಿ ‘ಏಜಿಸೆರಸ್ ಕೊರ್ನಿಕುಲಟಮ್’ ಜಾತಿಯ ಸಸಿಗಳು ಸುಂದರವಾದ, ಹೂಗಳಿಗೆ ಪ್ರಸಿದ್ಧವಾಗಿವೆ. ಸುರಗಿ ಹೂವಿನ ರೀತಿಯಲ್ಲೇ ಪರಿಮಳ ಹೊಂದಿದ್ದು, ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮಾಲೆ ಹೆಣೆದು ಮುಡಿಗೇರಿಸಿಕೊಳ್ಳುತ್ತಾರೆ.

ಈ ಹೂಗಳು ಸುಮಾರು 10 ದಿನಗಳವರೆಗೂ ತಾಜಾತನ ಕಾಯ್ದುಕೊಳ್ಳುತ್ತವೆ. ಹಾಗಾಗಿ ಅವುಗಳ ಮಾಲೆಗೆ ನೀರು ಚಿಮುಕಿಸಿ ಮರುಬಳಕೆ ಮಾಡಿದರೂ ಸುಂದರವಾಗಿರುತ್ತವೆ. ಹೂಗಳು ಒಣಗಿದ ಮೇಲೂ ಸುವಾಸನೆ ಬೀರುತ್ತವೆ. ಕಾರವಾರ, ಹೊನ್ನಾವರ, ಕರ್ಕಿ ಸೇರಿದಂತೆ ಕರಾವಳಿಯ ವಿವಿಧ ಭಾಗಗಳಲ್ಲಿ ಇವು ಹೆಚ್ಚಿನ ಪ್ರಮಾಣದಲ್ಲಿ ಅರಳುವ ಮೂಲಕ ಪರಿಸರ ಪ್ರಿಯರನ್ನು ಸೆಳೆಯುತ್ತವೆ. ಗೊಂಚಲು ಗೊಂಚಲಾಗಿ ಅರಳುವ ಕಾರಣ ಜೇನುಹುಳಗಳೂ ಆಕರ್ಷಿತವಾಗಿ ಜೇನು ಉತ್ಪಾದನೆಗೆ ತನ್ನದೇ ಆದ ಕೊಡುಗೆ ನೀಡುತ್ತವೆ.

‘ಕಾಂಡ್ಲಾದ ಹೂಗಳು ಗೊಂಚಲಾಗಿರುವ ಕಾರಣ ಮಾಲೆ ಮಾಡುವುದು ಬಹಳ ಸುಲಭ. ಅದರ ಗಾಢವಾದ ಪರಿಮಳ ಕೆಲವರಿಗೆ ಅಲರ್ಜಿಯಾಗುತ್ತದೆ. ಹಾಗಾಗಿ ಮಹಿಳೆಯರ ಅಲಂಕಾರಕ್ಕಾಗಿ ಅವುಗಳ ಬಳಕೆ ಇತ್ತೀಚೆಗೆ ಕಡಿಮೆಯಾಗಿದೆ. ಮಳೆಗಾಲ ಮುಗಿದ ಬಳಿಕ ಅರಳಲು ಶುರುವಾಗಿ ಇಡೀ ಪ್ರದೇಶದಲ್ಲಿ ವಾತಾವರಣವನ್ನೇ ಬದಲಿಸುತ್ತವೆ’ ಎನ್ನುತ್ತಾರೆ ರಾಜ್ಯ ಜೀವ ವೈವಿಧ್ಯ ಮಂಡಳಿಯ ಸದಸ್ಯ ಡಾ.ಪ್ರಕಾಶ ಮೇಸ್ತ.

‘ಜಿಲ್ಲೆಯ ಕರಾವಳಿಯಲ್ಲಿ, ಪಶ್ಚಿಮಘಟ್ಟದಲ್ಲಿ ವೈವಿಧ್ಯಮಯ ಹೂಗಳಿವೆ. ಅಲ್ಲದೇ ಕಾಂಡ್ಲಾ ಹೂವನ್ನು ನೀರಿನಲ್ಲಿ ಸಾಗಿ ಸಂಗ್ರಹಿಸಬೇಕು. ಇದೂ ಕೂಡ ಅವುಗಳ ಬಗ್ಗೆ ಜನರ ಆಸಕ್ತಿ ಕಡಿಮೆಯಾಗಲು ಕಾರಣವಾಗಿರಬಹುದು’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಸುಗಂಧದ ಎಣ್ಣೆ ತಯಾರಿ:

‘ಏಜಿಸೆರಸ್ ಕೊರ್ನಿಕುಲಟಮ್’ ಸಸ್ಯದ ಹೂಗಳು ರಾಜ್ಯದಲ್ಲೇ ಅತಿ ಹೆಚ್ಚು ಪರಿಮಳವಿರುವ ಕಾಂಡ್ಲಾ ಹೂಗಳಾಗಿವೆ. ದೇಶದ ಬೇರೆ ಕರಾವಳಿ ರಾಜ್ಯಗಳಲ್ಲೂ ಈ ರೀತಿಯ ಸಸ್ಯಗಳಿವೆ. ಕೇರಳದಲ್ಲಿ ಇದರ ಹೂಗಳಿಂದ ಸುಗಂಧ ತೈಲ (ಪರ್ಫ್ಯೂಮ್) ತಯಾರಿಸಲಾಗುತ್ತದೆ. ನಮ್ಮ ರಾಜ್ಯದಲ್ಲೂ ವಾಣಿಜ್ಯ ಬಳಕೆಗೆ ಗಮನ ಹರಿಸಲು ಅವಕಾಶವಿದೆ. ಆದರೆ, ಅದಕ್ಕೆ ಕಾನೂನುಬದ್ಧ ವ್ಯವಸ್ಥೆಗಳು ಆಗಬೇಕಿದೆ’ ಎಂದು ಡಾ.ಪ್ರಕಾಶ ಮೇಸ್ತ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT