ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿ ನದಿಯಲ್ಲಿ ಕಾಂಡ್ಲಾ ನಡಿಗೆ

ಕಾರವಾರದ ಕಾಳಿ ಮಾತಾ ನಡುಗಡ್ಡೆಯಲ್ಲಿ ಅರಣ್ಯ ಇಲಾಖೆಯ ಕಾಮಗಾರಿ
Last Updated 18 ಮಾರ್ಚ್ 2021, 14:20 IST
ಅಕ್ಷರ ಗಾತ್ರ

ಕಾರವಾರ: ನಗರದ ಕೋಡಿಬಾಗದ ಸಮೀಪ ಕಾಳಿ ನದಿಯಲ್ಲಿರುವ ‘ಕಾಳಿ ಮಾತಾ ನಡುಗಡ್ಡೆ’ಯ ಕಾಂಡ್ಲಾ ವನದಲ್ಲಿ ಇನ್ನು ಮುಂದೆ ವಾಯುವಿಹಾರ ಮಾಡಬಹುದು. ಸಸ್ಯ ಜಗತ್ತಿನಲ್ಲಿ ಹೆಜ್ಜೆ ಹಾಕುತ್ತ ಸಂಭ್ರಮಿಸಬಹುದು.

ಕೇಂದ್ರ ಅನುದಾನವನ್ನು ಬಳಸಿಕೊಂಡು ಅರಣ್ಯ ಇಲಾಖೆಯು ₹10 ಲಕ್ಷ ವೆಚ್ಚದಲ್ಲಿ ‘ಕಾಂಡ್ಲಾ ನಡಿಗೆ’ ಪಥವನ್ನು ನಿರ್ಮಾಣ ಮಾಡಿದೆ. 240 ಮೀಟರ್ ಉದ್ದ ಹಾಗೂ ಸುಮಾರು ಐದು ಅಡಿಗಳಷ್ಟು ಅಗಲದ ಪಥವನ್ನು ಸಿದ್ಧಪಡಿಸಲಾಗಿದೆ. ದ್ವೀಪದಲ್ಲಿರುವ ಕಾಳಿಕಾ ಮಾತಾ ದೇವಸ್ಥಾನದ ಸಮೀಪದಲ್ಲೇ ಇದ್ದು, ನಗರದ ಪ್ರವಾಸೋದ್ಯಮಕ್ಕೆ ಮತ್ತೊಂದು ಆಕರ್ಷಣೆಯಾಗಿ ಸೇರ್ಪಡೆಯಾಗಿದೆ.

ಕಾಳಿ ನದಿಯಲ್ಲಿ ರ‍್ಯಾಫ್ಟಿಂಗ್, ದೋಣಿ ವಿಹಾರದ ಜೊತೆಗೆ ಹೊಸದಾಗಿ ಕಾಂಡ್ಲಾ ನಡಿಗೆಯೂ ಆರಂಭವಾಗುತ್ತಿರುವುದು ನಾಗರಿಕರ ಸಂತಸಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯು ಹೊನ್ನಾವರದಲ್ಲಿ ಶರಾವತಿ ನದಿ ಹಿನ್ನೀರಿನಲ್ಲಿ ಎರಡು ವರ್ಷಗಳ ಹಿಂದೆಯೇ ಕಾಂಡ್ಲಾ ನಡಿಗೆ ಆರಂಭಿಸಿದೆ. ಅದಕ್ಕೆ ಸಾಕಷ್ಟು ಉತ್ತಮ ಸ್ಪಂದನೆಯು ಜನರಿಂದ ಬರುತ್ತಿದೆ. ಅದೇ ಸಮಯದಲ್ಲಿ ಕಾಳಿ ನದಿಯ ದ್ವೀಪದಲ್ಲೂ ಶುರು ಮಾಡಲು ಜಿಲ್ಲೆಯ ಅಧಿಕಾರಿಗಳಿಂದ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು.

ಜೌಗು ಮಣ್ಣಿನಲ್ಲಿ ಸಿಮೆಂಟ್ ಕಂಬಗಳನ್ನು ಭದ್ರವಾಗಿ ಹುಗಿದು, ಅವುಗಳ ಮೇಲೆ ಮರದ ಹಲಗೆಗಳನ್ನು ಅಳವಡಿಸಲಾಗುತ್ತದೆ. ಎರಡೂ ಬದಿಗಳಲ್ಲಿ ಸುರಕ್ಷತೆಗೆ ಬೇಲಿಗಳಿರುತ್ತವೆ.

ಕಾಂಡ್ಲಾ ಸಸ್ಯಗಳು ಮಣ್ಣಿನ ಸವಕಳಿಯನ್ನು ತಡೆಯುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನೂ ಹೊರ ಸೂಸುತ್ತವೆ. ಕಾಂಡ್ಲಾ ಸಸ್ಯಗಳ ಸುತ್ತಮುತ್ತ ನೀರು ಕೂಡ ತಣ್ಣಗಿರುವ ಕಾರಣ ಮೀನುಗಳೂ ಹೆಚ್ಚಾಗಿ ಕಂಡುಬರುತ್ತವೆ.

ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಕಾಂಡ್ಲಾ ಗಿಡಗಳು ಮಹತ್ವದ ಪಾತ್ರ ವಹಿಸುತ್ತವೆ. ಹಾಗಾಗಿ ಈ ಸಸ್ಯ ಪ್ರಭೇದವನ್ನು ರಕ್ಷಿಸುವ ಬಗ್ಗೆ, ಜಲಚರಗಳ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಈ ಯೋಜನೆಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT