ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಕುಂಟುತ್ತ ಸಾಗಿದ ಮಳೆಗಾಲದ ಸಿದ್ಧತೆ

ಮುಂಜಾಗೃತಾ ಕ್ರಮಗಳಿಗೆ ವೇಗ ನೀಡದ ಸ್ಥಳೀಯ ಸಂಸ್ಥೆಗಳು
Last Updated 8 ಮೇ 2022, 14:09 IST
ಅಕ್ಷರ ಗಾತ್ರ

ಕಾರವಾರ: ಮಳೆಗಾಲ ಶುರುವಾಗಲು ದಿನಗಣನೆ ಶುರುವಾಗಿದೆ. ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಪೂರ್ವಭಾವಿ ಸಿದ್ಧತೆಗಳನ್ನು ಶುರು ಮಾಡಲಾಗಿದೆ. ಆದರೆ, ಕೆಲವೆಡೆ ಈ ಹಿಂದಿನ ‘ಪಾಠ’ಗಳಿದ್ದರೂ ತಡೆಯಬಹುದಾದ ಸಮಸ್ಯೆಗಳನ್ನು ಎದುರಿಸಲು ಸಜ್ಜಾಗಿಲ್ಲ.

ಕಾರವಾರ ನಗರಸಭೆಯ ವ್ಯಾಪ್ತಿಯಲ್ಲಿ ಪ್ರತಿ ಮಳೆಗಾಲವೂ ಜೋರು ವರ್ಷಧಾರೆಯಾದಾಗ ವಿವಿಧ ಬಡಾವಣೆಗಳಲ್ಲಿ ರಸ್ತೆಗಳು ಜಲಾವೃತವಾಗುವುದು ಸಾಮಾನ್ಯ ಸಂಗತಿಯಾಗಿತ್ತು. ಎರಡು ವರ್ಷಗಳಿಂದ ಮಳೆಗಾಲಕ್ಕೂ ಮೊದಲೇ ಸಿದ್ಧತೆ ನಡೆಸುತ್ತಿರುವ ಕಾರಣ ಈ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಹಳೆಯ ಮತ್ತು ಹೊಸ ಕೆ.ಎಚ್.ಬಿ ಕಾಲೊನಿ, ಹಬ್ಬುವಾಡ, ಸೋನಾರವಾಡ, ಸಂಕ್ರಿವಾಡ ಮುಂತಾದ ಪ್ರಮುಖ ಪ್ರದೇಶಗಳಲ್ಲಿ ಚರಂಡಿಗಳನ್ನು ಈಗಾಗಲೇ ಒಂದು ಸುತ್ತಿನ ಸ್ವಚ್ಛತೆ ಕೈಗೊಳ್ಳಲಾಗಿದೆ. ವರ್ಷವಿಡೀ ಚರಂಡಿ, ಖಾಲಿ ನಿವೇಶನಗಳ ಸ್ವಚ್ಛತೆಗೆಂದು ನಗರಸಭೆಯಿಂದ ತಂಡವನ್ನು ರಚಿಸಲಾಗಿದೆ.

ಆದರೆ, ಈ ರೀತಿಯ ಸಿದ್ಧತೆಯು ಹೊರ ವಲಯದ ಗ್ರಾಮಗಳಲ್ಲಿ ಕಂಡುಬಂದಿಲ್ಲ. ಅಸ್ನೋಟಿ, ಅಮದಳ್ಳಿಯಲ್ಲಿ ಪ್ರತಿ ಮಳೆಗಾಲವೂ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತದೆ. ಈ ಬಾರಿ ಹೂಳೆತ್ತುವ ಕಾರ್ಯ ಇನ್ನಷ್ಟೇ ಶುರುವಾಗಬೇಕಿದೆ.

ಶಿರಸಿಯಲ್ಲಿ ಹಂಚಿಕೆ ವಿಳಂಬ:

ಶಿರಸಿ ನಗರದಲ್ಲಿ ಮಳೆಗಾಲದ ಪೂರ್ವಸಿದ್ಧತೆ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸಲಾಗುತ್ತಿದೆ. ಮಳೆಗಾಲಕ್ಕೆ ಕೆಲವೇ ದಿನ ಬಾಕಿ ಇದ್ದರೂ ಕಾಮಗಾರಿ ಹರಾಜು ಕರೆದು ಹಂಚಿಕೆ ಮಾಡುವಲ್ಲಿ ತಡವಾಗುತ್ತಿದೆ.

ಕಸ್ತೂರಬಾ ನಗರ, ನೆಹರೂ ನಗರ, ದುಂಡಶಿ ನಗರ, ಪಡ್ತಿಗಲ್ಲಿ, ಅಶೋಕ ನಗರ ಸೇರಿದಂತೆ ಹಲವೆಡೆ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಈಚೆಗೆ ಸುರಿದ ಅಕಾಲಿಕ ಮಳೆಗೆ ಜಲಾವೃತ್ತ ಸಮಸ್ಯೆಯೂ ಕೆಲವು ಕಡೆ ಉಂಟಾಗಿತ್ತು.

‘ಮಳೆಗಾಲಕ್ಕೆ ಮುನ್ನ ಅಪಾಯಕಾರಿ ಮರ, ಟೊಂಗೆಗಳನ್ನು ತೆರವುಗೊಳಿಸಬೇಕಿದೆ. ಚರಂಡಿಗಳ ಹೂಳೆತ್ತುವ ಕೆಲಸವೂ ನಗರದಲ್ಲಿ ನಡೆದಿಲ್ಲ. ಮಳೆ ಮುಂಚಿತವಾಗಿ ಆರಂಭಗೊಂಡರೆ ನಗರದಲ್ಲಿ ಜಲಾವೃತ ಸಮಸ್ಯೆ ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ ಅಶೋಕ ನಗರದ ಎ.ನರಸಿಂಹ.

ನಗರ ಮಾತ್ರವಲ್ಲದೆ ತಾಲ್ಲೂಕಿನ ಹಲವು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಮಳೆಗಾಲದ ಪೂರ್ವಸಿದ್ಧತೆಗಳನ್ನು ಕೈಗೆತ್ತಿಕೊಂಡಿಲ್ಲ ಎಂಬ ದೂರುಗಳಿವೆ. ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಶಿರಸಿ–ಕುಮಟಾ ರಸ್ತೆಯಲ್ಲಿ ವ್ಯವಸ್ಥಿತ ಚರಂಡಿ ಇಲ್ಲ. ಕಳೆದ ಮಳೆಗಾಲದಲ್ಲಿ ಜಲಾವೃತ ಸಮಸ್ಯೆಯಿಂದ ಹಲವು ಬಾರಿ ಇಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

ಹೊನ್ನಾವರ:

ಮುಗ್ವಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆರೋಳ್ಳಿ ಸಮೀಪ ಹೆದ್ದಾರಿ ಪಕ್ಕ ಗಟಾರದಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ತುಂಬಿದ್ದು ನೀರು ಹೆದ್ದಾರಿಗೆ ನುಗ್ಗುವಂತಾಗಿದೆ.

ಮಳೆಗಾಲದ ಮೊದಲು ಇಲ್ಲಿನ ಪಟ್ಟಣ ಪಂಚಾಯ್ತಿ ಕೆಲವು ಭಾಗಗಳಲ್ಲಿ ಗಟಾರ ಸ್ವಚ್ಛಗೊಳಿಸಲು ಮುಂದಾಗಿದೆ ಯಾದರೂ ಎಲ್ಲ ಕಡೆಗೆ ಕೆಲಸ ನಡೆದಿಲ್ಲ. ಗ್ರಾಮ ಪಂಚಾಯಿತಿಗಳು ಮಳೆಗಾಲದ ಪೂರ್ವ ತಯಾರಿಯ ಭಾಗವಾಗಿ ಗಟಾರ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವುದು ಅಪರೂಪ. ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮುಗ್ಗರಿಸಿದ್ದು ಗ್ರಾಮೀಣ ಭಾಗಗಳಲ್ಲೂ ಚರಂಡಿ ತ್ಯಾಜ್ಯಮಯವಾಗಿದೆ.

ಕುಮಟಾ:

ಪಟ್ಟಣದ ಚರಂಡಿ ಹಾಗೂ ಗಟಾರ ಶುಚಿ ಕಾರ್ಯವನ್ನು ಏಪ್ರಿಲ್ ಎರಡನೇ ವಾರದಿಂದ ಪುರಸಭೆ ಸಿಬ್ಬಂದಿ ಆರಂಭಿಸಿದ್ದು ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಪುರಸಭೆಯ ಒಟ್ಟೂ 23 ವಾರ್ಡ್ ಗಳ ಪೈಕಿ ಆಗಲೇ 12 ವಾರ್ಡ್ ಗಳಲ್ಲಿ ಗಟಾರ, ಮೋರಿ ಶುಚಿ ಕಾರ್ಯ ಮುಗಿದಿದೆ. ಉಳಿದ 13 ವಾರ್ಡ್ ಗಳ ಕೆಲಸ ಇನ್ನಷ್ಟೆ ಆಗಬೇಕಿದೆ. ಮುಚ್ಚಿ ಹೋದ ಪಟ್ಟಣದ ರಾಜಕಾಲುವೆ ಹೂಳೆತ್ತುವ ಕಾರ್ಯ ಸಹ ನಡೆಸಲಾಗುತ್ತಿದೆ.

‘ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಳೆಗಾಲದ ಮುಂಜಾಗೃತಾ ಕಾಮಗಾರಿ ಪೂರ್ಣಗೊಂಡ ಬಗ್ಗೆ ಅವರಿಂದ ದೃಢೀಕರಣ ಪತ್ರ ಪಡೆಯಲಾಗುವುದು. ನಂತರ ಅವುಗಳನ್ನು ಪರಿಶೀಲಿಸಲಾಗುವುದು. ಜೂನ್ 15 ರವರೆಗೆ ಕಾಮಗಾರಿ ಮುಂದುವರಿಯಲಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಟಿ. ನಾಯ್ಕ ಮಾಹಿತಿ ನೀಡಿದರು.

ಹಳಿಯಾಳ:

ಪುರಸಭೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಕಾಲುವೆಗಳ ಹೂಳೆತ್ತುವ ಕಾರ್ಯವನ್ನು ಹಂತ ಹಂತವಾಗಿ ನಡೆಸಲಾಗುತ್ತಿದೆ.

ಪಟ್ಟಣದಲ್ಲಿ ಒಟ್ಟೂ 23 ವಾರ್ಡ್ ಗಳಲ್ಲಿ ಸುಮಾರು 73 ಕಿ.ಮೀ ನಷ್ಟು ಉದ್ದದ ಚರಂಡಿ ಇದೆ. ಮಳೆಗಾಲ ಪ್ರಾರಂಭವಾಗುವ ಮುನ್ನ ಎಲ್ಲ ವಾರ್ಡ್ ವ್ಯಾಪ್ತಿಯ ಚರಂಡಿಗಳನ್ನು ಹೂಳೆತ್ತಿ, ಶುಚಿಗೊಳಿಸಲು ನೀಲನಕ್ಷೆ ತಯಾರಾಗಿದೆ.

‘ಈ ಹಿಂದೆ ಕಾಲುವೆಗಳ ಹೂಳೆತ್ತುವ ಕಾಮಗಾರಿಗಾಗಿ ಟೆಂಡರ್ ಕರೆಯಲಾಗುತ್ತಿತ್ತು. ಈ ಬಾರಿ ಪುರಸಭೆಯಿಂದ ಹೆಚ್ಚುವರಿಯಾಗಿ 12 ಜನರನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕಮಾಡಲಾಗಿದೆ. ಅಗತ್ಯ ಕಾಮಗಾರಿಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಲಾಗುವುದು’ ಎಂದು ಪುರಸಭೆ ಎಂಜಿನಿಯರ್ ಅರ್ಪಿತಾ.ಪಿ.ಎಸ್ ಹೇಳಿದರು.

ಮುಂಡಗೋಡ:

ಮಳೆಗಾಲ ಆರಂಭಕ್ಕೂ ಮುನ್ನ ಪಟ್ಟಣ ವ್ಯಾಪ್ತಿಯ ದೊಡ್ಡ ಗಟಾರಗಳನ್ನು ಸ್ವಚ್ಛಗೊಳಿಸುವ ಕೆಲಸ ಇನ್ನಷ್ಟೇ ಆಗಬೇಕಾಗಿದೆ.

ಮುಖ್ಯ ರಸ್ತೆ ಹೊರತುಪಡಿಸಿ, ವಾರ್ಡಿನಲ್ಲಿರುವ ಸಣ್ಣ ಗಟಾರಗಳನ್ನು ತಿಂಗಳಿಗೊಮ್ಮೆ ಅಥವಾ ಎರಡು ಸಲದಂತೆ ಪೌರ ಸಿಬ್ಬಂದಿ ಸ್ವಚ್ಛಗೊಳಿಸುತ್ತಾರೆ. ಆದರೆ, ಮುಖ್ಯ ರಸ್ತೆಯ ದೊಡ್ಡ ಗಟಾರಗಳಲ್ಲಿ ಮಳೆಗಾಲದ ನೀರು ಸರಾಗವಾಗಿ ಹರಿಯುವುದಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಗಟಾರ ಸ್ವಚ್ಛತೆ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ.

‘ಪಟ್ಟಣದ ಪ್ರಮುಖ ನಾಲ್ಕು ರಸ್ತೆಗಳ ಎಡಬಲ ಭಾಗದಲ್ಲಿ ನಿರ್ಮಿಸಿರುವ ದೊಡ್ಡ ಗಟಾರಗಳಲ್ಲಿ ಮಣ್ಣು, ಪ್ಲಾಸ್ಟಿಕ್‌ ಸೇರಿದಂತೆ ತ್ಯಾಜ್ಯ ಸಂಗ್ರಹಗೊಂಡಿದೆ. ದೊಡ್ಡ ಮಳೆಯಾದಾಗ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ನೀರು ಗಟಾರದಲ್ಲಿ ಹರಿಯುತ್ತದೆ. ಅಲ್ಲದೇ, ರಸ್ತೆ ಮೇಲೆ ಸಂಗ್ರಹಗೊಳ್ಳುವ ಮಳೆಯ ನೀರು ಗಟಾರನಲ್ಲಿ ಸೇರಲು ಸಾಧ್ಯವಾಗುತ್ತಿಲ್ಲ. ನೀರು ಸೇರಲು ಬಿಟ್ಟಿದ್ದ ದೊಡ್ಡ ರಂಧ್ರಗಳು ಮಣ್ಣಿನಿಂದ ಮುಚ್ಚಿಹೋಗಿವೆ. ಇದರಿಂದ ಮಳೆಯ ನೀರು ಗಟಾರನಲ್ಲಿ ಹರಿಯದೇ, ರಸ್ತೆ ಮೇಲೆ ನಿಲ್ಲುತ್ತದೆʼ ಎನ್ನುತ್ತಾರೆ ಬಂಕಾಪುರ ರಸ್ತೆ ನಿವಾಸಿ ಪ್ರಕಾಶ.

ಭಟ್ಕಳ:

ಪುರಸಭೆಯಿಂದ ಪಟ್ಟಣದ ನೆರೆಪೀಡಿತ ವಾರ್ಡಗಳಲ್ಲಿ ಹೊಳೆತ್ತಲಾಗಿದೆ. ಉಳಿದ ವಾರ್ಡಗಳಲ್ಲಿ ಆದ್ಯತೆಯ ಮೇರೆಗೆ ಹೂಳೆತ್ತಲಾಗುತ್ತಿದೆ. ಮಳೆಗಾಲದಲ್ಲಿ ನೀರು ತುಂಬಿಕೊಳ್ಳುವ ರಂಗಿನಕಟ್ಟಾ, ಶಂಸುದ್ದಿನ್ ಸರ್ಕಲ್ ಹಾಗೂ ಮಣ್ಕುಳಿ ಭಾಗದಲ್ಲಿ ಈಗಾಗಲೆ ಪುರಸಭೆ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ.

ರಾಷ್ಟ್ರೀಯಯ ಹೆದ್ದಾರಿ ಎರಡು ಇಕ್ಕೇಲಗಳಲ್ಲಿ ಇರುವ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಅದನ್ನು ತಕ್ಷಣಕ್ಕೆ ಸ್ವಚ್ಚಗೊಳಿಸದೆ ಹೋದರೆ ಮಳೆಗಾಲದಲ್ಲಿ ರಸ್ತೆಯ ಇಕ್ಕೆಲಗಳ ಮನೆಗಳಿಗೆ ನೀರು ನುಗ್ಗುತ್ತದೆ.

ಸಿಬ್ಬಂದಿ ಕೊರತೆ ಸಮಸ್ಯೆ:

ಸಿಬ್ಬಂದಿ ಕೊರತೆ ಸಮಸ್ಯೆಯಿಂದ ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ ಮಳೆಗಾಲದ ಮುನ್ನೆಚ್ಚರಿಕೆ ಕಾಮಗಾರಿಗೆ ಅಡ್ಡಿಯಾಗುತ್ತಿದೆ.

ನಗರದ ಪ್ರಮುಖ ನಾಲಾಗಳನ್ನು ಮಳೆಗಾಲ ಮೊದಲು ಸ್ವಚ್ಛಗೊಳಿಸಲು ಮುಂದಾಗಲಾಗಿದೆ. ಮಾರುತಿ ನಗರ, ಗಾಂಧಿ ನಗರದಲ್ಲಿ ಚರಂಡಿ ಸ್ವಚ್ಛಗೊಳಿಸುವ ಕೆಲಸ ಪ್ರಗತಿಯಲ್ಲಿದೆ.

‘ಗಾಂಧಿ ನಗರ, ಮಿರಾಶಿ ಗಲ್ಲಿ, ವಿನಾಯಕ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ಜಲಾವೃತ ಸಮಸ್ಯೆ ಇದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಚರಂಡಿಗಳಿಗೆ ಕಾಂಕ್ರೀಟ್ ಮುಚ್ಚಳ ಅಳವಡಿಸಬೇಕು’ ಎಂಬುದು ಸ್ಥಳೀಯ ನಿವಾಸಿಗಳ ಒತ್ತಾಯ.

‘ಸಿಬ್ಬಂದಿ ಕೊರತೆಯಿಂದಾಗಿ ಕೆಲಸದ ವೇಗಕ್ಕೆ ತೊಂದರೆ ಆಗಿದೆ. ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಂಡು ಮಳೆಗಾಲದ ಮುಂಜಾಗೃತಾ ಕಾಮಗಾರಿ ನಿಗದಿತ ಅವಧಿಗೆ ಪೂರ್ಣಗೊಳಿಸಲಾಗುವುದು’ ಎನ್ನುತ್ತಾರೆ ನಗರಸಭೆ ಆರೋಗ್ಯ ವಿಭಾಗದ ಅಧಿಕಾರಿ ವಿಲಾಸ ದೇವಕರ.

------------

ಪ್ರತಿ ಹತ್ತು ವಾರ್ಡ್‍ಗೆ ತಂಡವೊಂದನ್ನು ನಿಯೋಜಿಸಿ ಮಳೆಗಾಲದ ಮುನ್ನೆಚ್ಚರಿಕೆ ಕುರಿತ ಕಾಮಗಾರಿಯ ಬಗ್ಗೆ ನಿಗಾ ವಹಿಸಲಾಗುತ್ತಿದೆ.

ಕೇಶವ ಚೌಗುಲೆ

ಶಿರಸಿ ನಗರಸಭೆ ಪೌರಾಯುಕ್ತ

*****

ಪ್ಲಾಸ್ಟಿಕ್ ಗೆ ಕಡಿವಾಣ ಹಾಕಲು ನಿರ್ಲಕ್ಷ್ಯ ತಾಳಿರುವುದರಿಂದ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಚರಂಡಿ ಸೇರುತ್ತಿದೆ. ಇದರಿಂದ ಮಳೆಗಾಲದಲ್ಲಿ ಜಲಾವೃತ್ತ ಸಮಸ್ಯೆ ಹೆಚ್ಚುವ ಆತಂಕವಿದೆ.

ಜೀವನ್ ಮೇಸ್ತ

ಹೊನ್ನಾವರ

*****

ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿರುವ ಗಟಾರ, ಮೋರಿಗಳನ್ನು ಶುಚಿಗೊಳಿಸಿ ಮಳೆನೀರು ಸರಾಗ ಹರಿಯುಂತೆ ಕ್ರಮ ಕೈಕೊಳ್ಳಲು ಪಿ.ಡಿ.ಒ ಹಾಗೂ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.

ಸಿ.ಟಿ.ನಾಯ್ಕ

ಕುಮಟಾ ತಾ.ಪಂ.ಇ

*****

ಪ್ರತಿ ವಾರ್ಡಿನಲ್ಲಿರುವ ಗಟಾರಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದ್ದು, ದೊಡ್ಡ ಗಟಾರ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು.

ಶಂಕರ ದಂಡಿನ

ಮುಂಡಗೋಡ ಪಟ್ಟಣ ಪಂಚಾಯಿತಿ ಕಿರಿಯ ಎಂಜಿನಿಯರ್‌

–––––––––

ಪ್ರಜಾವಾಣಿ ತಂಡ:

ಸದಾಶಿವ ಎಂ.ಎಸ್., ಗಣಪತಿ ಹೆಗಡೆ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ಸಂತೋಷಕುಮಾರ ಹಬ್ಬು, ಪ್ರವೀಣಕುಮಾರ್ ಸುಲಾಖೆ, ಮೋಹನ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT