ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಆಕಳಿಗೆ ಕಿವಿಯೋಲೆ: ಹೈನುಗಾರರ ಹಿಂದೇಟು

ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಸಾಗಿದ ಅಭಿಯಾನ: ಮನವೊಲಿಸಿದಾಗ ಅಧಿಕಾರಿಗಳು ಹೈರಾಣ
Last Updated 5 ಅಕ್ಟೋಬರ್ 2020, 15:03 IST
ಅಕ್ಷರ ಗಾತ್ರ

ಕಾರವಾರ: ಆಕಳನ್ನು ಕಟ್ಟಿ ಹಾಕುವ ‍ಪದ್ಧತಿ ಇಲ್ಲದಿರುವುದು ಹಾಗೂ ಅವುಗಳ ಮಾಲೀಕರ ಅಸಹಕಾರದಿಂದ ಜಿಲ್ಲೆಯಲ್ಲಿ ‘ವಿಶಿಷ್ಟ ಗುರುತಿನ ಕಿವಿಯೋಲೆ’ ಅಳವಡಿಸುವ ಕಾರ್ಯಕ್ರಮ ಮಂದಗತಿಯಲ್ಲಿ ಸಾಗಿದೆ. ಇದರಿಂದಾಗುವ ಪ್ರಯೋಜನವನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ರಾಜ್ಯದಲ್ಲೇ ವಿಶಿಷ್ಟವಾಗಿರುವ ಜಾನುವಾರು ತಳಿ ‘ಮಲೆನಾಡು ಗಿಡ್ಡ’ವನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ಸಲಹುವುದು ಕಡಿಮೆ. ಬೆಳಿಗ್ಗೆ ಮತ್ತು ಸಂಜೆ ಹಾಲು ಕರೆದ ಬಳಿಕ, ಮೇವು ಇರುವ ಪ್ರದೇಶಗಳಿಗೆ ಅವುಗಳನ್ನು ಅಟ್ಟುವುದು ಮೊದಲಿನಿಂದಲೂ ಜಾನುವಾರು ಮಾಲೀಕರು ಅನುಸರಿಸುತ್ತಿರುವ ಪದ್ಧತಿಯಾಗಿದೆ. ಆದರೆ, ಈ ರೀತಿ ಮಾಡುವುದರಿಂದ ಅವುಗಳಿಗೆ ಕಿವಿಯೋಲೆ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಈ ಮೂಲಕ ಅವುಗಳ ಮಾಲೀಕರೂ ಹಲವು ಸೌಲಭ್ಯಗಳಿಂದ ದೂರ ಉಳಿಯುವಂತಾಗಿದೆ.

‘ಜಾನುವಾರಿಗೆ ಕಿವಿಯೋಲೆ ಅಳವಡಿಸುವಂತೆ ಕಾಲುಬಾಯಿ ಜ್ವರದಂತಹ ಲಸಿಕೆಗಳನ್ನು ನೀಡಲು ಹೋದಾಗ, ಎದುರು ಸಿಕ್ಕಿದಾಗಲೆಲ್ಲ ಅವರ ಮಾಲೀಕರಿಗೆ ತಿಳಿಸಿದ್ದೇವೆ. ಆಗ ಒಪ್ಪಿಗೆ ಸೂಚಿಸಿ, ನಾವು ಸಿದ್ಧತೆ ಮಾಡಿಕೊಂಡು ಹೋಗುವಾಗ ಹಸುಗಳು ಮೇಯಲು ಹೋಗಿವೆ ಎಂದು ಹೇಳುತ್ತಾರೆ. ಅಲ್ಲದೇ ಕಿವಿಯೋಲೆ ಹಾಕಿದ್ದಕ್ಕೆ ಸರ್ಕಾರದಿಂದ ಎಷ್ಟು ಹಣ ಸಿಗುತ್ತದೆ ಎಂದು ಪ್ರಶ್ನಿಸುತ್ತಾರೆ. ಕೆಲವರು ಮಾತ್ರ ಸ್ವಯಂಪ್ರೇರಿತವಾಗಿ ತಮ್ಮ ಆಕಳಿಗೆ ಕಿವಿಯೋಲೆ ಅಳವಡಿಸಿಕೊಂಡಿದ್ದಾರೆ’ ಎಂದು ಕಾರವಾರ ತಾಲ್ಲೂಕಿನ ಪಶು ವೈದ್ಯ ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಕೆಲವರಂತೂ ಆಕಳಿಗೆ ನೋವು ಮಾಡಬೇಡಿ. ಅದು ಹಾಲು ಕೊಡುವುದನ್ನು ನಿಲ್ಲಿಸುತ್ತದೆ ಎಂದು ವಾದಿಸುತ್ತಾರೆ. ಹಾಲು ಉತ್ಪಾದನೆಗೂ ಕಿವಿಯೋಲೆ ಅಳವಡಿಕೆಗೂ ಸಂಬಂಧವೇ ಇಲ್ಲ ಎಂದರೂ ಕೇಳುವುದಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಕಿವಿಯೋಲೆ ಅಳವಡಿಕೆಗೆ ಹಿನ್ನಡೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಸೌಲಭ್ಯಗಳಿಗೆ ಕಡ್ಡಾಯ’:

‘12 ಅಂಕೆಗಳಿರುವ ವಿಶಿಷ್ಟ ಕಿವಿಯೋಲೆಯನ್ನು ಜಾನುವಾರಿಗೆ ಅಳವಡಿಸಲಾಗುತ್ತದೆ. ಅದರ ವಿವರವನ್ನು ‘ಇನಾಫ್’ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ಜಾನುವಾರಿನ ಲಸಿಕೆ, ಕೃತಕ ಗರ್ಭಧಾರಣೆ, ಕರು ಹಾಕಿದ ವಿವರ, ಕಾಲು ಬಾಯಿ ರೋಗ, ಕಳೆದು ಹೋದರೆ, ನೆರೆಯಲ್ಲಿ ಮೃತಪಟ್ಟ ಮಾಹಿತಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಡಾ.ನಂದಕುಮಾರ ಪೈ.

‘ನಮಗೆ ಆಧಾರ್ ಕಾರ್ಡ್ ಎಷ್ಟು ಮುಖ್ಯವೋ ಜಾನುವಾರಿಗೆ ವಿಶಿಷ್ಟ ಕಿವಿಯೋಲೆಯೂ ಅಷ್ಟೇ ಮುಖ್ಯ. ಹೈನುಗಾರರಿಗೆ ಮುಂದಿನ ದಿನಗಳಲ್ಲಿ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳಿಗೂ ಇದು ಕಡ್ಡಾಯವಾಗುವ ಸಾಧ್ಯತೆಯಿದೆ’ ಎಂದು ಮಾಹಿತಿ ನೀಡಿದರು.

–––––

* ಜಿಲ್ಲೆಯಲ್ಲಿ ಕಿವಿಯೋಲೆ ಅಳವಡಿಸಿದ ಜಾನುವಾರಿನ ಸಂಖ್ಯೆ ಹೆಚ್ಚಿದೆ. ಆದರೆ, ತಾಂತ್ರಿಕ ಕಾರಣಗಳಿಂದ ಅವುಗಳನ್ನು ತಂತ್ರಾಂಶದಲ್ಲಿ ನೋಂದಣಿ ಮಾಡುವುದು ತಡವಾಗಿದೆ.

– ಡಾ.ನಂದಕುಮಾರ ಪೈ, ಉಪ ನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT