ಗುರುವಾರ , ಮಾರ್ಚ್ 23, 2023
28 °C
ವಿವಿಧ ಸಂಘಟನೆಗಳಿಂದ ಸಹಾಯ ಹಸ್ತ

ನಿರ್ಗತಿಕರ ನೆರವಿಗೆ ಬಂದ ಸಹೃದಯಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಆ ನಾಲ್ವರು ನಿರ್ಗತಿಕರು. ನಗರದ ಬೀದಿ ಬೀದಿ ತಿರುಗುತ್ತ, ಸಾರ್ವಜನಿಕರು ಕೊಟ್ಟಿದ್ದನ್ನೇ ಸ್ವೀಕರಿಸಿ ಜೀವಿಸುತ್ತಿದ್ದವರು. ಕೆದರಿದ ತಲೆಗೂದಲು, ಮುಖಕ್ಷೌರ ಕಾಣದೇ ಸೊರಗಿದ್ದವರು. ಅವರ ನೆರವಿಗೆ ನಗರದ ವಿವಿಧ ಸಂಘಟನೆಗಳು ಸೋಮವಾರ ಮುಂದೆ ಬಂದವು.

ಜನಶಕ್ತಿ ವೇದಿಕೆ, ಮದರ್ ಥೆರೆಸಾ ಸಂಘಟನೆ, ರೆಡ್‌ಕ್ರಾಸ್‌ನ ಪ್ರಮುಖರು ನಿರ್ಗತಿಕರಿಗೆ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದರು. ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಹಳೆಯ ಮೀನು ಮಾರುಕಟ್ಟೆಯ ಸಮೀಪ ನಾಲ್ವರೂ ನಿರ್ಗತಿಕರನ್ನು ಕರೆಸಿ ಅವರಿಗೆ ಕ್ಷೌರ ಮಾಡಿಸಿದರು. ಸಮೀಪದಲ್ಲೇ ಸ್ನಾನ ಮಾಡಿಸಿ, ಹೊಸ ಬಟ್ಟೆ ನೀಡಿ, ಕೋವಿಡ್ ಪರೀಕ್ಷೆ ಮಾಡಿಸಿದರು. ನಿರಾಶ್ರಿತರಿಗೆ ಹಣ್ಣು, ಉಪಾಹಾರದ ವ್ಯವಸ್ಥೆಯನ್ನೂ ಮಾಡಿದರು.

ಸಿಕ್ಕಿದ ಸಂಬಂಧಿಕರು:

ಮಹಾರಾಷ್ಟ್ರದ ನಾಸಿಕ್‌ನ ಆಶಿಷ್ ಎಂಬುವವರು ಕುಟುಂಬದ ಜೊತೆ ಮನಸ್ತಾಪವಾಗಿ ಲಾರಿ ಹತ್ತಿಕೊಂಡು ಕಾರವಾರಕ್ಕೆ ಬಂದು ನಿರ್ಗತಿಕನಂತೆ ಓಡಾಡುತ್ತಿದ್ದರು. ಅವರಿಗೂ ಕ್ಷೌರ ಮಾಡಿಸಲಾಯಿತು. ಆಗ ತನ್ನ ಬಗ್ಗೆ ಸಂಘಟನೆಗಳ ಮುಖಂಡರ ಜೊತೆ ಹೇಳಿಕೊಂಡರು. ಅವರು ನೀಡಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಸಂಬಂಧಿಕರು ಸಿಕ್ಕಿದರು. ಬಳಿಕ ಅವರನ್ನು ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು.

ಮಾಧವ ನಾಯ್ಕ, ಅನ್ಮೋಲ್ ರೇವಣಕರ್, ಸ್ಯಾಮ್ಸನ್ ಡಿಸೋಜಾ, ಜಗದೀಶ ಬಿರ್ಕೋಡಿಕರ್, ಬಾಬು ಶೇಖ್, ಎಸ್.ಆರ್.ನಾಯ್ಕ, ಸಂದೀಪ ರೇವಣಕರ್, ಎಲ್.ಕೆ.ನಾಯ್ಕ, ಮೋಹನ ನಾಯ್ಕ, ಎಲ್.ಎಸ್.ಫರ್ನಾಂಡಿಸ್, ಶ್ರೀಪಾದ ನಾಯ್ಕ, ಸೂರಜ್ ಕೂರ್ಮಕರ್, ಫಕೀರಪ್ಪ ಭಂಡಾರಿ, ಜಾನಿ ಡಿಕೋಸ್ಟಾ, ಸಿರಿಲ್ ಗೊನ್ಸಾಲ್ವೀಸ್, ರೋಜರ್ ರೋಡ್ರಿಗಸ್ ಇದ್ದರು.

–––––

* ಮೂವರಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ವರದಿ ಬಂದ ನಂತರ ಅವರನ್ನು ಬೆಳಗಾವಿಯ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗುವುದು.

– ಮಾಧವ ನಾಯ್ಕ, ಜನಶಕ್ತಿ ವೇದಿಕೆ ಅಧ್ಯಕ್ಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.