ಭಾನುವಾರ, ನವೆಂಬರ್ 17, 2019
24 °C
ಮರ ಕಡಿದರೆ ಕಠಿಣ ಶಿಕ್ಷೆಯ ಎಚ್ಚರಿಕೆ

ಮಾರಿಕಾಂಬಾ ಜಾತ್ರೆಯಲ್ಲಿ ಮರ ಕಡಿಯುವ ಸಂಪ್ರದಾಯಕ್ಕೆ ಪೂರ್ಣ ವಿರಾಮ ?

Published:
Updated:
Prajavani

ಶಿರಸಿ: ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ರಥ ಕಟ್ಟಲು ಕಾಡಿನ ಮರ ಕಡಿಯುವುದು ಸಂಪ್ರದಾಯ. ಆದರೆ ಇನ್ನು ಮುಂದಿನ ಜಾತ್ರೆಯಿಂದ ಮರ ಕಡಿಯುವ ಪದ್ಧತಿ ಕೊನೆಯಾಗಲಿದೆಯೇ ಎಂಬ ಸಂಗತಿ ಚರ್ಚಿತವಾಗುತ್ತಿದೆ.

2018ರಲ್ಲಿ ನಡೆದ ಜಾತ್ರೆಯ ಸಂದರ್ಭದಲ್ಲಿ ತಾಲ್ಲೂಕಿನ ಬಿನಕಳ್ಳಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅನಧಿಕೃತ ಪ್ರವೇಶ ಮಾಡಿ ತಾರೆ, ನಂದಿ, ಮತ್ತಿ, ಕಿಂದಳ ಮರಗಳನ್ನು ಕಡಿದು ನಾಟಾ ಹಾಗೂ ಜಲಾವು ಮಾಡಿದ ಸಂಬಂಧ ಶಿರಸಿ ವಲಯ ಅರಣ್ಯಾಧಿಕಾರಿ, ದೇವಾಲಯದ ಧರ್ಮದರ್ಶಿ ಮಂಡಳಿಯ ಮೇಲೆ ಪ್ರಕರಣ ದಾಖಲಿಸಿ, ದಂಡ ವಿಧಿಸಿದ್ದಾರೆ. ಅರಣ್ಯ ಇಲಾಖೆ ಈ ಸಂಬಂಧ ದಾಖಲಿಸಿರುವ ಪ್ರಕರಣದ ಮುದ್ರಿತ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸುವುದು, ಅಮೂಲ್ಯ ಮರ, ಗಿಡಗಳನ್ನು ನಾಶಪಡಿಸುವುದು ಅವುಗಳನ್ನು ಆಶ್ರಯಿಸಿರುವ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಇದು ಗಂಭೀರ ಪ್ರಕರಣವಾಗಿದೆ. ಅಲ್ಲದೇ, ಜಾಮೀನುರಹಿತ ಪ್ರಕರಣ ದಾಖಲಿಸುವಂತಹ ಅಪರಾಧವೂ ಆಗಿದೆ. ಮತ್ತೆ ಇಂತಹ ಪ್ರಕರಣ ನಡೆದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 24 (ಇ), ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಇನ್ನು ಮುಂದೆ ಜಾತ್ರೆ ಅಥವಾ ಇನ್ನಾವುದೇ ಸಂಪ್ರದಾಯದ ಹೆಸರಿನಲ್ಲಿ ಕಾಯ್ದಿಟ್ಟ ಅರಣ್ಯದಲ್ಲಿ ಅನಧಿಕೃತ ಪ್ರವೇಶ ಮಾಡಬಾರದು’ ಎಂದು ಅರಣ್ಯ ಇಲಾಖೆಯು ದೇವಾಲಯಕ್ಕೆ ಎಚ್ಚರಿಕೆ ನೀಡಿದೆ.

‘ಒಂದೊಮ್ಮೆ ಈ ಪ್ರಕರಣ ಮರುಕಳಿಸಿದಲ್ಲಿ ವೃತ್ತಿಪರ ಗುನ್ನೆದಾರರು ಎಂದು ಪರಿಗಣಿಸಿ, ಧರ್ಮದರ್ಶಿ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸುವುದು ಅನಿವಾರ್ಯ’ ಎಂದು ನೋಟಿಸ್ ನೀಡಿರುವ ವಲಯ ಅರಣ್ಯಾಧಿಕಾರಿ, ಹಿಂದಿನ ಜಾತ್ರೆಯ ವೇಳೆ 16 ಫೆಬ್ರುವರಿ 2018ರಂದು ಮರ ಕಡಿದ ಕಾರಣಕ್ಕೆ ₹ 80ಸಾವಿರ ದಂಡವನ್ನು ತುಂಬಿಸಿಕೊಂಡಿದ್ದಾರೆ.

‘ಈ ಎಲ್ಲ ವಿಷಯಗಳ ಬಗ್ಗೆ ದೇವಾಲಯದ ಆಂತರಿಕ ವಲಯದಲ್ಲಿ ಈಗಾಗಲೇ ಚರ್ಚೆ ನಡೆದಿದೆ. ಈವರೆಗಿನ ಸಂಪ್ರದಾಯದಂತೆ ದೇವಾಲಯದ ಬಾಬುದಾರ ಕುಟುಂಬದವರು, ಧರ್ಮದರ್ಶಿ ಮಂಡಳದ ಸದಸ್ಯರು, ಪಾರುಪತ್ಯಗಾರರು ಕಾಡಿನ ಮರವನ್ನು ಪೂಜಿಸಿ, ಕಚ್ಚು ಹಾಕಿ ಕಡಿದು ನಂತರ ಅದನ್ನು ಮೆರವಣಿಗೆಯಲ್ಲಿ ದೇವಾಲಯಕ್ಕೆ ತರುತ್ತಿದ್ದರು. ಆದರೆ, ಮುಂದಿನ ದಿನಗಳಲ್ಲಿ ಏನಾಗಬಹುದೆಂದು ನೋಡಬೇಕಾಗಿದೆ’ ಎಂದು ಬಾಬುದಾರರೊಬ್ಬರು ಮಾಹಿತಿ ನೀಡಿದರು. 

‘ಪ್ರತಿ ಜಾತ್ರೆಯಲ್ಲಿ ಕಡಿಯುವ ಮರಗಳು ಯಾವ ಪ್ರಮಾಣದಲ್ಲಿ ರಥಕ್ಕೆ ಬಳಕೆಯಾಗುತ್ತಿವೆ. ಉಳಿದ ಕಟ್ಟಿಗೆಗಳನ್ನು ಹೇಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಕೂಡ ಚರ್ಚೆಯಾಗುತ್ತಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.

ಈ ಕುರಿತು ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ ಅವರು ಸಂಪರ್ಕಿಸಿದಾಗ, ‘ಅರಣ್ಯ ಇಲಾಖೆಯಿಂದ ದೇವಾಲಯಕ್ಕೆ ನೋಟಿಸ್ ಬಂದಿರುವುದು ನಿಜ. ಈ ಬಗ್ಗೆ ದೇವಾಲಯದ ಪ್ರಮುಖರ ನಡುವೆ ಹಲವು ಸುತ್ತುಗಳಲ್ಲಿ ಮಾತುಕತೆ ನಡೆದಿದೆ’ ಎಂದಷ್ಟೇ ಹೇಳಿದರು.

ಅರಣ್ಯ ಇಲಾಖೆ ವೃತ್ತಿಪರ ಗುನ್ನೆದಾರರೆಂಬ ಗಂಭೀರ ಪ್ರಕರಣ ದಾಖಲಿಸಿರುವುದರಿಂದ ಮುಂದಿನ ಜಾತ್ರೆಯಿಂದ ಮರ ಕಡಿಯುವ ಪದ್ಧತಿ ನಿಲ್ಲಿಸಲು ನಿರ್ಧರಿಸಲಾಗಿದೆ
–ವೆಂಕಟೇಶ ನಾಯ್ಕ,
ಮಾರಿಕಾಂಬಾ ಧರ್ಮದರ್ಶಿ ಮಂಡಳಿ ಅಧ್ಯಕ್ಷ

 

 

ಪ್ರತಿಕ್ರಿಯಿಸಿ (+)