ಅಭ್ಯರ್ಥಿ ಆಯ್ಕೆಗೆ ಸಾಲು ಸಾಲು ಸಭೆ!

7
ನಾಮಪತ್ರ ಸಲ್ಲಿಕೆ ಆರಂಭವಾಗಲು ಇನ್ನು ಮೂರು ದಿನ ಬಾಕಿ: ಎಲ್ಲೆಡೆ ಮುಖಂಡರ ಪ್ರವಾಸ

ಅಭ್ಯರ್ಥಿ ಆಯ್ಕೆಗೆ ಸಾಲು ಸಾಲು ಸಭೆ!

Published:
Updated:

ಕಾರವಾರ: ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳ 200 ವಾರ್ಡ್‌ಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲು ಇನ್ನು ಮೂರು ದಿನಗಳು ಮಾತ್ರ ಉಳಿದಿವೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆಗೆ ಹೆಚ್ಚು ಕಾಲಾವಕಾಶ ಇಲ್ಲದಿರುವ ಕಾರಣ ರಾಜಕೀಯ ಪಕ್ಷಗಳು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿವೆ.

ಪಕ್ಷದ ಚಿಹ್ನೆಗಳ ಅಡಿಯಲ್ಲೇ ಈ ಚುನಾವಣೆ ನಡೆಯುವ ಕಾರಣ ಗೆಲುವು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ. ವಿಧಾನಸಭೆ ಚುನಾವಣೆಯಲ್ಲಿ ಆರು ಕ್ಷೇತ್ರಗಳ ಪೈಕಿ ನಾಲ್ಕನ್ನು ಗೆದ್ದುಕೊಂಡಿರುವ ಬಿಜೆಪಿ ತನ್ನ ಪ್ರಾಬಲ್ಯ ತೋರಿಸಲು ಹಾತೊರೆಯುತ್ತಿದೆ. ಆದರೆ, ಚುನಾವಣೆ ಘೋಷಣೆಯಾಗಿರುವ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಹಾಗಾಗಿ ಗೆಲುವಿನ ಓಟವನ್ನು ಮುಂದುವರಿಸಲು ಪಕ್ಷದ ಮುಖಂಡರೂ ಸಿದ್ಧತೆ ನಡೆಸಿದ್ದಾರೆ. 

ನಾಮಪತ್ರ ಸಲ್ಲಿಸಲು ಈ ತಿಂಗಳ 17 ಕೊನೆಯ ದಿನವಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಹೆಚ್ಚಿನ ದಿನಗಳು ಇಲ್ಲದ ಕಾರಣ ರಾಜಕೀಯ ಮುಖಂಡರು ಜಿಲ್ಲೆಯ ಎಂಟೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಮತ್ತು ಜಿಲ್ಲಾ ಉಸ್ತುವಾರಿ ತಿಂಗಳೆ ವಿಕ್ರಮಾರ್ಜುನ ಹೆಗಡೆ ಅವರ ಪ್ರವಾಸಕ್ಕೆ ಈಗಾಗಲೇ ದಿನಾಂಕ ಮತ್ತು ಸಮಯ ನಿಗದಿಯಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಕೆ.ಜಿ.ನಾಯ್ಕ, ‘ಚುನಾವಣೆಗೆ ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕುಮಟಾ, ಶಿರಸಿ, ಯಲ್ಲಾಪುರಕ್ಕೆ ಭೇಟಿ ನೀಡಿದ್ದೇನೆ. ಉಳಿದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲ ಮುಂದಿನ ಎರಡು ದಿನಗಳಲ್ಲಿ ಸಭೆ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಇದೇ ರೀತಿಯ ಸಿದ್ಧತೆ ಕಾಂಗ್ರೆಸ್ ಪಕ್ಷದಲ್ಲೂ ಕಂಡುಬಂದಿದೆ. ಪಕ್ಷದ ಜಿಲ್ಲಾ ಸಮಿತಿಯ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ‘ಕುಮಟಾ, ಕಾರವಾರ ಮತ್ತ ಅಂಕೋಲಾದಲ್ಲಿ ಸಭೆ ನಡೆಸಲಾಗಿದೆ. ಉಳಿದೆಡೆಗೆ ಇನ್ನೆರಡು ದಿನಗಳಲ್ಲಿ ಭೇಟಿ ನೀಡಿ ಕಾರ್ಯಕರ್ತರ ಮತ್ತು ಆಕಾಂಕ್ಷಿಗಳ ವಿಚಾರ ತಿಳಿದುಕೊಳ್ಳಲಾಗುವುದು’ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತ ಮೊದಲೇ ಪ್ರಚಾರ ಆರಂಭಿಸಿದ್ದ ಜೆಡಿಎಸ್ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಪಕ್ಷದ ಸಿದ್ಧತೆ ಬಗ್ಗೆ ಮುಖಂಡ ಆನಂದ ಅಸ್ನೋಟಿಕರ್ ಅವರನ್ನು ಕೇಳಿದಾಗ, ‘ನಾನು ಆಮೇಲೆ ಮಾತನಾಡುತ್ತೇನೆ’ ಎಂದಷ್ಟೇ ಹೇಳಿದರು. ಪಕ್ಷದಿಂದ ಸಭೆಗಳು ಆಯೋಜನೆಯಾಗುವ ಬಗ್ಗೆ, ಆಕಾಂಕ್ಷಿಗಳ ಭೇಟಿ ಬಗ್ಗೆ ಮಾಹಿತಿ ಸಿಕ್ಕಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಪಕ್ಷ ಸಂಘಟನೆ ಬಗ್ಗೆ ಮೌನವಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.

ಸಮಿತಿಗಳಲ್ಲಿ ಪರಿಶೀಲನೆ: ಬಿಜೆಪಿಯಲ್ಲಿ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಂದು ವಾರ್ಡ್‌ಗೆ ಎರಡಕ್ಕಿಂತ ಹೆಚ್ಚು ಆಕಾಂಕ್ಷಿಗಳಿದ್ದರೆ ಪಕ್ಷದ ಸಮಿತಿಯಲ್ಲಿ ಚರ್ಚಿಸಿ ಮಾತುಕತೆ ಮೂಲಕ ಅಭ್ಯರ್ಥಿ ನಿರ್ಧರಿಸಲಾಗುವುದು. ಹಳಿಯಾಳದಲ್ಲಿ ವಿ.ಎಸ್.ಪಾಟೀಲ್, ಹಳಿಯಾಳದಲ್ಲಿ ಸುನೀಲ ಹೆಗಡೆ, ಉಳಿದೆಡೆ ಶಾಸಕರೇ ಸಮಿತಿಗಳ ಅಧ್ಯಕ್ಷರಾಗಿದ್ದಾರೆ ಎಂದು ಕೆ.ಜಿ.ನಾಯ್ಕ ತಿಳಿಸಿದರು.

ಕಾಂಗ್ರೆಸ್‌ನಲ್ಲೂ ಹಿಂದಿನ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚನೆ ಮಾಡಲಾಗಿದೆ. ತಲಾ ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲು ಮುಖಂಡರಿಗೆ ಸೂಚನೆ ನೀಡಲಾಗಿದೆ. ಕೆಪಿಸಿಸಿಯು ಅಭ್ಯರ್ಥಿಗಳ ಪಟ್ಟಿಯನ್ನು ಆ.15ರೊಳಗೆ ಬಿಡುಗಡೆ ಮಾಡಲಿದೆ ಎಂದು ಭೀಮಣ್ಣ ನಾಯ್ಕ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !