ಮಂಗಳವಾರ, ಅಕ್ಟೋಬರ್ 15, 2019
28 °C
ಸವಿತಾ ಸಮಾಜದಿಂದ ಪ್ರತಿಭಟನಾ ಮೆರವಣಿಗೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ

‘ಹೈಟೆಕ್’ ಕ್ಷೌರದಂಗಡಿ ನಿಯಂತ್ರಿಸಲು ಆಗ್ರಹ

Published:
Updated:
Prajavani

ಕಾರವಾರ: ಹೆಚ್ಚಿನ ಬಂಡವಾಳ ಹೂಡಿ, ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಹೈಟೆಕ್ ಕ್ಷೌರದಂಗಡಿಗಳನ್ನು ನಿಯಂತ್ರಿಸಬೇಕು. ಅವುಗಳಿಗೆ ಅನುಮತಿ ನೀಡುವ ಮೊದಲು ಸವಿತಾ ಸಮಾಜದಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಸವಿತಾ ಸಮಾಜದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು.

ಮಾಲಾದೇವಿ ಮೈದಾನದಿಂದ ಮೆರವಣಿಗೆಯಲ್ಲಿ ಸಾಗಿದ ಸಮಾಜದ ನೂರಾರು ಸದಸ್ಯರು, ತಮ್ಮ ಮೂಲವೃತ್ತಿಗೆ ತೊಂದರೆ ಮಾಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

‘ಈ ವೃತ್ತಿಗೆ ಸಂಬಂಧ ಪಡದವರೂ ಈಚಿನ ದಿನಗಳಲ್ಲಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಸೆಲೂನ್‌ಗಳನ್ನು ತೆರೆಯುತ್ತಿದ್ದಾರೆ. ಅವುಗಳಲ್ಲಿ ಬಿಹಾರ, ರಾಜಸ್ತಾನ, ಉತ್ತರಪ್ರದೇಶ ರಾಜ್ಯಗಳು ಹಾಗೂ ಬಾಂಗ್ಲಾದೇಶದ ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ, ಅವರಲ್ಲಿ ಹಲವರ ಹಿನ್ನೆಲೆ ಯಾರಿಗೂ ತಿಳಿದಿರುವುದಿಲ್ಲ. ಹಾಗಾಗಿ ಅವರ ಬಗ್ಗೆ ಸೂಕ್ತ ದಾಖಲೆಗಳನ್ನು ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಅಂತಹ ಅಂಗಡಿಗಳನ್ನು ತೆರೆಯಬಾರದು’ ಎಂದು ಮನವಿಯಲ್ಲಿ ಆಗ್ರಹಿಸಿದರು. 

‘ಈ ಮೊದಲು ಆಯಾ ಊರಿನ ಜನಸಂಖ್ಯೆಗೆ ಅನುಗುಣವಾಗಿ ಕ್ಷೌರದ ಅಂಗಡಿಗಳಿದ್ದವು. ಆದರೆ, ಈಗ ಅವುಗಳ ಸಂಖ್ಯೆ ಹೆಚ್ಚಿದೆ. ಅಲ್ಲದೇ ಆನ್‌ಲೈನ್ ಮೂಲಕ ತಿಳಿಸಿದರೆ ಗ್ರಾಹಕರಿದ್ದಲ್ಲಿಗೇ ಬಂದು ಕ್ಷೌರದ ಸೇವೆ ಕೊಡುವ ಕಂಪನಿಗಳೂ ಆರಂಭವಾಗುತ್ತಿವೆ. ಅವುಗಳಿಗೆ ಇಲ್ಲಿ ಆಸ್ಪದ ಕೊಡಬಾರದು’ ಎಂದು ಒತ್ತಾಯಿಸಿದರು.

ಸವಿತಾ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಹಣ ಕಾಯ್ದಿರಿಸಬೇಕು ಎಂದೂ ಇದೇ ವೇಳೆ ಮನವಿ ಮಾಡಿದರು. 

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಸಮಾಜದ ಬೇಡಿಕೆಗಳಲ್ಲಿ ಕಾನೂನು ಪ್ರಕಾರ ಸಾಧ್ಯವಿರುವುದನ್ನು ಜಿಲ್ಲಾಮಟ್ಟದಲ್ಲಿ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಸಮಾಜದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ವೆಂಕಟೇಶ ವೆಲ್ಕೂರ, ರವಿ ಕಡೂರ, ಜಿ.ಮುರಳೀಧರ, ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಮಹಾಲೆ, ಉಪಾಧ್ಯಕ್ಷ ಮಹೇಶ ಮಹಾಲೆ, ಪ್ರಧಾನ ಕಾರ್ಯದರ್ಶಿ ಕೆ.ಎನ್ ಮಂಜು, ಕಾರ್ಯಾದ್ಯಕ್ಷ ಸತೀಶ ಕೊಡಿಯಾ ಹಾಗೂ ವಿವಿಧ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಇದ್ದರು.

Post Comments (+)