ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನೆಗುದಿಗೆ ಬಿದರಿ ಆರ್ಟ್‌ ಗ್ಯಾಲರಿ

ಬೀದರ್‌: ಸರ್ಕಾರದ ಖಜಾನೆಯಲ್ಲಿ ಕೊಳೆಯುತ್ತಿರುವ ₹10 ಕೋಟಿ
Last Updated 4 ಜೂನ್ 2018, 10:59 IST
ಅಕ್ಷರ ಗಾತ್ರ

ಬೀದರ್: ರಾಜ್ಯ ಸರ್ಕಾರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹಾಗೂ ಬಿದರಿ ಕಲೆಯ ಉಳಿವಿಗಾಗಿ ಮೂರು ವರ್ಷಗಳ ಹಿಂದೆ ₹ 10 ಕೋಟಿ ಬಿಡುಗಡೆ ಮಾಡಿದರೂ ಬಿದರಿ ಆರ್ಟ್‌ ಗ್ಯಾಲರಿ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದೆ.

ಬಿದರಿ ಕಲಾಕೃತಿಗಳು ಬೀದರ್‌ನಲ್ಲಿ ತಯಾರಾಗುತ್ತಿದ್ದರೂ ಅವುಗಳಿಗೆ ಮಾರುಕಟ್ಟೆ ಇರುವುದು ಹೈದರಾಬಾದ್‌ನಲ್ಲಿ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿದರಿ ಕಲಾಕೃತಿಗಳಿಗೆ ಹೆಚ್ಚಿನ ಬೇಡಿಕೆ ಇದ್ದರೂ ಇಲ್ಲಿನ ಕುಶಲಕರ್ಮಿಗಳಿಗೆ ಬೇಡಿಕೆ ಇರುವಷ್ಟು ಉತ್ಪನ್ನಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ದಲ್ಲಾಳಿಗಳೇ ಲಾಭ ಬಾಚಿಕೊಳ್ಳುತ್ತಿರುವ ಕಾರಣ ಕುಶಲಕರ್ಮಿಗಳ ಸಂಖ್ಯೆ ಕುಸಿದಿದೆ.

ರಾಜ್ಯ ಸರ್ಕಾರ ನೌಬಾದ್‌ನಲ್ಲಿ ಬಿದರಿ ಕಲೆಯ ತರಬೇತಿ ಕೇಂದ್ರ ತೆರೆದಿತ್ತು. ಈ ಕೇಂದ್ರ ಬಾಗಿಲು ಮುಚ್ಚಿ 15 ವರ್ಷಗಳಾಗಿವೆ. ಕುಶಲಕರ್ಮಿಗಳ ಸಮಸ್ಯೆಗಳನ್ನು ಆಲಿಸುವವರೇ ಇಲ್ಲವಾಗಿದ್ದಾರೆ. ನಗರದಲ್ಲಿ 150 ಬಿದರಿ ಕಲಾವಿದರು ಇದ್ದರೂ ಅದರಲ್ಲಿ ನುರಿತ ಕಲಾವಿದರ ಸಂಖ್ಯೆ 10ಕ್ಕಿಂತ ಹೆಚ್ಚಿಲ್ಲ.

ಬಿದರಿ ಕಲೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಜಿಲ್ಲಾ ಆಡಳಿತವು ನಗರದಲ್ಲೇ ಆರ್ಟ್‌ ಗ್ಯಾಲರಿ ಸ್ಥಾಪಿಸಿ ಕಲಾಕೃತಿಗಳ ತಯಾರಿಕೆ, ಪ್ರದರ್ಶನ ಹಾಗೂ ಯುವಕರಿಗೆ ತರಬೇತಿ ಒದಗಿಸಲು ಯೋಜನೆ ರೂಪಿಸಿತ್ತು. ಅನುರಾಗ ತಿವಾರಿ ಅವರು ಜಿಲ್ಲಾಧಿಕಾರಿ ಆಗಿದ್ದಾಗಲೇ ₹ 10 ಕೋಟಿ ಬಿಡುಗಡೆಯಾಗಿತ್ತು. ಜಾಗದ ವಿವಾದದಿಂದಾಗಿ ಗ್ಯಾಲರಿ ಆರಂಭವಾಗಲಿಲ್ಲ.

ಹೈದರಾಬಾದ್‌ ರಸ್ತೆಯಲ್ಲಿ ನೂರ್‌ ಕಾಲೇಜು ಸಮೀಪ ಗ್ಯಾಲರಿ ನಿರ್ಮಾಣಗೊಳ್ಳಬೇಕಿತ್ತು. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರಾಸಕ್ತಿಯ ಪರಿಣಾಮ ಗ್ಯಾಲರಿಯ ಶಂಕುಸ್ಥಾಪನೆಯೂ ನೆರವೇರಲಿಲ್ಲ. ಅನುರಾಗ ತಿವಾರಿ ಅವರು ಹೈದರಾಬಾದ್‌ ರಸ್ತೆಯಲ್ಲಿ ಲಾಡಗೇರಿ ಸಮೀಪ ಬಿದರಿ ಕಲಾಕೃತಿಯನ್ನು ಪ್ರತಿಷ್ಠಾಪಿಸಿದರು. ಅಷ್ಟೇ ಅಲ್ಲ ರೈಲ್ವೆ ಕೆಳ ಸೇತುವೆ ಮೇಲಿನ ಗೋಡೆಗಳ ಮೇಲೂ ಬಿದರಿ ಕಲಾಕೃತಿಗಳನ್ನು ಚಿತ್ರಗಳಲ್ಲಿ ಬಿಂಬಿಸಿದರು. ಅವರ ವರ್ಗಾವಣೆಯ ನಂತರ ಎಲ್ಲ ಕಾರ್ಯಗಳು ಸ್ಥಗಿತಗೊಂಡವು. ನಂತರ ವರ್ಗವಾಗಿ ಜಿಲ್ಲೆಗೆ ಬಂದ ಜಿಲ್ಲಾಧಿಕಾರಿಗಳು ಈ ವಿಷಯದಲ್ಲಿ ಆಸಕ್ತಿ ತೋರಿಸಲಿಲ್ಲ.

‘ಬಿದರಿ ಕಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಕುಶಲ ಕರ್ಮಿಗಳು ಅಸಂಘಟಿತರಾಗಿರುವ ಕಾರಣ ಹೆಚ್ಚು ಸಮಸ್ಯೆ ಎದುರಿಸುವಂತಾಗಿದೆ. ರಾಜ್ಯ ಸರ್ಕಾರ ಬಿದರಿ ಆರ್ಟ್‌ ಗ್ಯಾಲರಿ ಸ್ಥಾಪಿಸುವ ಭರವಸೆ ನೀಡಿ ಹಣವನ್ನೂ ಬಿಡುಗಡೆ ಮಾಡಿದೆ. ಆದರೆ, ಅಧಿಕಾರಿಗಳು ನಿರಾಸಕ್ತಿ ವಹಿಸಿದ್ದಾರೆ’ ಎಂದು ಬಿದರಿ ಕಲಾವಿದ ರಸೀದ್‌ ಖಾದ್ರಿ ವಿಷಾದ ವ್ಯಕ್ತಪಡಿಸುತ್ತಾರೆ.

‘ಜಿಲ್ಲೆಗೆ ಬರುವ ಪ್ರವಾಸಿಗರನ್ನು ಸುಲಭವಾಗಿ ಸೆಳೆಯಲು ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಆರ್ಟ್ ಗ್ಯಾಲರಿ ನಿರ್ಮಿಸುವ ಪ್ರಸ್ತಾವ ಇತ್ತು. ನಂತರ ಅದನ್ನು ನಗರದಲ್ಲಿ ನಿರ್ಮಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಇದರೊಂದಿಗೆ ಮಹಮೂದ್‌ ಗವಾನ್‌ ಸಂಶೋಧನಾ ಕೇಂದ್ರವನ್ನೂ ಪ್ರಾರಂಭಿಸುವ ಯೋಜನೆ ಇತ್ತು. ಎಲ್ಲ ಯೋಜನೆಗಳು ಕಡತಗಳಲ್ಲೇ ಉಳಿದುಕೊಂಡಿವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬಿದರಿ ಕಲಾವಿದರು.

‘ಬೀದರ್‌ನಲ್ಲಿ ₹19 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ಮಟ್ಟದ ಆರ್ಟ್‌ ಗ್ಯಾಲರಿ ನಿರ್ಮಿಸುವ ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ಕುಶಲ ಕರ್ಮಿಗಳ ಸಂಖ್ಯೆಗೆ ಅನುಗುಣವಾಗಿ ಕೆಲವು ಮಾರ್ಪಾಡು ಮಾಡಲು ನಿರ್ಧರಿಸಲಾಗಿದೆ. ಕಲಾಕೃತಿಗಳ ತಯಾರಿಕೆ ಹಾಗೂ ಪ್ರದರ್ಶನಕ್ಕೆ ಒಂದೇ ಕಡೆ ವ್ಯವಸ್ಥೆ ಮಾಡುವ ಯೋಜನೆ ಇದೆ. ಪರಿಷ್ಕೃತ ಯೋಜನೆಗೆ ಒಪ್ಪಿಗೆ ಪಡೆಯಬೇಕಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಶಿಕಾಂತ ಮಳ್ಳಿ ಹೇಳುತ್ತಾರೆ.

ಬಿದರಿ ಕಲಾಕೃತಿಗಳ ಪ್ರದರ್ಶನ

ಬೀದರ್: ನೆರೆಯ ತೆಲಂಗಾಣದ ಹೈದರಾಬಾದ್‌ನಲ್ಲಿ ಜೂನ್‌ ಕೊನೆಯ ವಾರದಲ್ಲಿ ಬಿದರಿ ಕಲೆಗಳ ಪ್ರದರ್ಶನ ಏರ್ಪಡಿಸಲಾಗಿದೆ.

ವಿಶ್ವದ 10 ಪ್ರಮುಖ ರಾಷ್ಟ್ರಗಳ ಪ್ರತಿನಿಧಿಗಳು ಅಲ್ಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಪ್ರವಾಸೋದ್ಯಮ ಸಂಸ್ಥೆಯೊಂದು ಇದಕ್ಕಾಗಿಯೇ ಇನ್ನೋವಾ ಕಾರುಗಳನ್ನು ಬುಕ್‌ ಮಾಡುತ್ತಿದ್ದು, ಹೈದರಾಬಾದ್‌ನ  ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುತ್ತಿದೆ.

ಬೀದರ್‌ನಲ್ಲಿರುವ ಕುಶಲಕರ್ಮಿಗಳು ಹೈದರಾಬಾದ್‌ ಮಾರುಕಟ್ಟೆಗೆ ಕಲಾಕೃತಿಗಳನ್ನು ಪೂರೈಸುತ್ತಿರುವ ಕಾರಣ ಪ್ರತಿನಿಧಿಗಳು ಬೀದರ್‌ಗೂ ಭೇಟಿ ಕೊಡುವ ಸಾಧ್ಯತೆ ಇದೆ.

**
14ನೇ ಶತಮಾನದಲ್ಲಿ ಬಿದರಿ ಕಲೆ ಅಭಿವೃದ್ಧಿ ಹೊಂದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಈ ಕಲೆಯನ್ನು ಉಳಿಸಿಕೊಳ್ಳಬೇಕಿದೆ
ಸಮದ್ ಭಾರತಿ, ಇತಿಹಾಸಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT