ಗುರುವಾರ , ನವೆಂಬರ್ 14, 2019
23 °C

’ಕಾರ್ಮಿಕರ ನೋಂದಣಿ ಸರಳೀಕರಿಸಿ’

Published:
Updated:
Prajavani

ಶಿರಸಿ: ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರ ನೋಂದಣಿಗೆ ಇರುವ ನಿಯಮಾವಳಿ ಸರಳೀಕರಿಸಬೇಕು ಎಂದು ಒತ್ತಾಯಿಸಿ, ಗೃಹ ನಿರ್ಮಾಣ ಕಾರ್ಮಿಕರ ಸಂಘದ ಸದಸ್ಯರು ಬುಧವಾರ ಇಲ್ಲಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

‘ಸಂಘದಲ್ಲಿ ಸುಮಾರು 600 ಸದಸ್ಯರಿದ್ದಾರೆ. ಅವರಲ್ಲಿ 400ರಷ್ಟು ಜನರು ವಿಮೆ ನೋಂದಣಿ ಮಾಡಿದ್ದಾರೆ. ಉಳಿದ ಸದಸ್ಯರ ವಿಮಾ ನೋಂದಣಿ ಒಂಭತ್ತು ತಿಂಗಳುಗಳಿಂದ ನಡೆಯುತ್ತಿಲ್ಲ. ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಜೋಡಿಸಿ, ಮೊಬೈಲ್‌ಗೆ ಒಟಿಪಿ ಕಳುಹಿಸುವ ಮೂಲಕ ಆನ್‌ಲೈನ್ ನೋಂದಣಿ ಮಾಡಲಾಗುತ್ತದೆ. ಆದರೆ, ಹಲವರಿಗೆ ಒಟಿಪಿ ಬರುವುದೇ ಇಲ್ಲ. ಇದರಿಂದಾಗಿ ನೋಂದಣಿ ಸಹ ಆಗುತ್ತಿಲ್ಲ. ಎರಡು ವರ್ಷಗಳಿಂದ ಕಾರ್ಮಿಕರ ಮಕ್ಕಳು ಶೈಕ್ಷಣಿಕ ಸಹಾಯಧನದಿಂದ ವಂಚಿತರಾಗಿದ್ದಾರೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕಾರ್ಮಿಕ ನಿರೀಕ್ಷಕರ ಹುದ್ದೆ ಖಾಲಿಯಿದೆ. ಕಾರ್ಮಿಕರಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದೆ. ಕಾರ್ಮಿಕರ ಬೇಡಿಕೆಗಳನ್ನು ಆದಷ್ಟು ಶೀಘ್ರ ಈಡೇರಿಸಬೇಕು’ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಸಂಘಟನೆ ಅಧ್ಯಕ್ಷ ಮಹೇಶ ನಾಯ್ಕ, ಗೌರವಾಧ್ಯಕ್ಷ ಚೂಡಾಮಣಿ ಜೋಗಳೇಕರ, ಖಜಾಂಚಿ ಶಂಕರ ಮುದ್ಗಲ್, ಪ್ರಮುಖರಾದ ದೀಪಕ್ ಕಾನಡೆ, ಮಾರುತಿ ನಾಯ್ಕ ಇದ್ದರು.

ಪ್ರತಿಕ್ರಿಯಿಸಿ (+)