ಕರಾವಳಿಯಲ್ಲಿ ವಲಸೆ ಹಕ್ಕಿಗಳ ಕಲರವ

7
ಮಾಜಾಳಿ ಕಡಲತೀರದಲ್ಲಿ ಕಾಣಿಸಿಕೊಂಡ ಉಂಗುರ ಅಳವಡಿಸಿದ ಪಕ್ಷಿಗಳು: ಪಕ್ಷಿಪ್ರಿಯರ ಸಂತಸ

ಕರಾವಳಿಯಲ್ಲಿ ವಲಸೆ ಹಕ್ಕಿಗಳ ಕಲರವ

Published:
Updated:
Prajavani

ಕಾರವಾರ: ನಜಿಲ್ಲೆಯ ಕರಾವಳಿಗೆ ವಲಸೆ ಪಕ್ಷಿಗಳ ದಂಡು ಬರಲು ಆರಂಭಿಸಿದ್ದು, ಹೊಸ ವರ್ಷದ ಆರಂಭದ ದಿನಗಳಲ್ಲೇ ಪಕ್ಷಿಪ್ರಿಯರು ಸಂತಸಗೊಂಡಿದ್ದಾರೆ. ಅಂಡಮಾನ್ ನಿಕೋಬಾರ್ ದ್ವೀಪಗಳ ಸುತ್ತಮುತ್ತ ವಾಸಿಸುವ ‘ಸಣ್ಣ ಚೊಟ್ಟಿನ ರಿವಾ’ (Lesser Crested Tern) ಪಕ್ಷಿಗಳು ಮಾಜಾಳಿ ಸಮೀಪ ಕಾಣಿಸಿಕೊಂಡಿವೆ.

ಅವುಗಳ ಕಾಲಿಗೆ ವಿಶಿಷ್ಟ ಸಂಖ್ಯೆಯುಳ್ಳ ಉಂಗುರವನ್ನು ಅಳವಡಿಸಲಾಗಿದೆ. ಪಕ್ಷಿಪ್ರಿಯರೂ ಆಗಿರುವ ಕೈಗಾದ ಅಣುವಿದ್ಯುತ್ ಸ್ಥಾವರದ ವೈಜ್ಞಾನಿಕ ಅಧಿಕಾರಿ ಕೆ.ಪುಟ್ಟರಾಜು ‘ಪ್ರಜಾವಾಣಿ’ ಜತೆ ಮಾಹಿತಿ ಹಂಚಿಕೊಂಡರು.

‘ಆ ಪಕ್ಷಿಯ ಹುಟ್ಟಿನ ಸ್ಥಳ, ಅದನ್ನು ಹಿಡಿದ ದಿನಾಂಕ, ಪಕ್ಷಿ ಪ್ರಿಯರ ದೂರವಾಣಿ ಸಂಖ್ಯೆ, ಇ–ಮೇಲ್ ವಿಳಾಸಗಳು ಆ ಉಂಗುರಗಳಲ್ಲಿ ಇರುತ್ತವೆ. ಇದು ಪಕ್ಷಿಗಳ ಅಧ್ಯಯನಕ್ಕೆ ಸಹಕಾರಿ. ಈ ವರ್ಷ ಇದೇ ಮೊದಲ ಬಾರಿಗೆ ಉಂಗುರ ಅಳವಡಿಸಿದ ಪಕ್ಷಿಗಳು ಕಾಣಿಸಿಕೊಂಡಿವೆ. ಜ.3ರಿಂದ 12ರವರೆಗೆ ಈ ಪಕ್ಷಿಗಳ ಹಿಂಡು ಮಾಜಾಳಿ ಕಡಲತೀರದ ಸುತ್ತಮುತ್ತ ಇದ್ದವು’ ಎಂದು ತಿಳಿಸಿದರು. 

‘ಸಣ್ಣ ಚೊಟ್ಟಿನ ರಿವಾ’ ಪಕ್ಷಿಗಳು ಸಮುದ್ರದ ನೀರಿನತ್ತ ಎತ್ತರದಿಂದ ವೇಗವಾಗಿ ಹಾರಿಬಂದು ಮುಳುಗುವ ಸಾಮರ್ಥ್ಯ ಹೊಂದಿವೆ. ಸಣ್ಣ ಮೀನುಗಳು, ಒದ್ದೆ ಮರಳಿನಲ್ಲಿರುವ ಏಡಿಯಂತಹ ಜೀವಿಗಳು ಅವುಗಳ ಆಹಾರವಾಗಿವೆ ಎಂದು ಅವರು ಹೇಳಿದರು. 

ಇವು ಗೂಡು ಕಟ್ಟುವುದಿಲ್ಲ: ‘ವಲಸೆ ಪಕ್ಷಿಗಳು ನಮ್ಮ ಕರಾವಳಿಗೆ ಹಾಗೂ ಕಾಳಿ ನದಿಯ ದಡದತ್ತ ಸಾಮಾನ್ಯವಾಗಿ ನವೆಂಬರ್‌ ನಂತರ ಬರುತ್ತವೆ. ಕೆಲವು ಪಕ್ಷಿಗಳು ಜೂನ್‌ನಲ್ಲೂ ಬರುತ್ತವೆ. ಸಣ್ಣ ಚೊಟ್ಟಿನ ರಿವಾಗಳು ಆಸ್ಟ್ರೇಲಿಯಾ, ಫೆಸಿಫಿಕ್ ಮಹಾಸಾಗರ ಭಾಗದಿಂದಲೂ ಬರುತ್ತವೆ ಎಂದು ಅರಣ್ಯ ಇಲಾಖೆಯ ವನ್ಯಜೀವಿ ತಜ್ಞ ಗೋಪಾಲ್ ನಾಯ್ಕ ವಿವರಿಸಿದರು.

ಅಸ್ಸಾಂ ಭಾಗದಲ್ಲಿ ಸಂತಾನೋತ್ಪತ್ತಿ ಮಾಡಿದ ನಂತರ ಕರಾವಳಿಯತ್ತ ಹಾರುತ್ತವೆ. ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಈ ಭಾಗದಲ್ಲಿ ಕಾಣಸಿಗುತ್ತವೆ. ಈ ಜಾತಿಯ ಪಕ್ಷಿಗಳು ಗೂಡು ಕಟ್ಟುವುದಿಲ್ಲ ಎಂಬುದು ಗಮನಾರ್ಹ. ದ್ವೀಪಗಳ ತಪ್ಪಲಿನಲ್ಲಿ ಮೊಟ್ಟೆ ಇಡುತ್ತವೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಕರಾವಳಿಗೆ ಹಾಗೂ ನದಿ ತಟಗಳಿಗೆ ಸೈಬೀರಿಯಾ, ಆಸ್ಟ್ರೇಲಿಯಾ, ಶ್ರೀಲಂಕಾ, ಉತ್ತರ ಭಾರತದಿಂದ ಪಕ್ಷಿಗಳು ವಲಸೆ ಬರುತ್ತವೆ. ಅವುಗಳ ಮೂಲ ಸ್ಥಳದಲ್ಲಿ ಹವಾಮಾನ ಬದಲಾದಂತೆ ವಲಸೆ ಆರಂಭಿಸುತ್ತವೆ. ಮುಂಗಾರು ಆರಂಭಕ್ಕೂ ಮೊದಲು  ಮರಿ ಮಾಡಿಕೊಳ್ಳುತ್ತವೆ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !