ಭಾನುವಾರ, ಜನವರಿ 19, 2020
22 °C
ಜಿ.ಪಂ. ಪ್ರಗತಿ ಪ‍ರಿಶೀಲನಾ ಸಭೆ

ಬಸ್ ನಿಲ್ದಾಣದ ನಕ್ಷೆಯೊಂದಿಗೆ ಬನ್ನಿ: ಅಧಿಕಾರಿಗಳಿಗೆ ಸಚಿವೆ ಜೊಲ್ಲೆ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಅಂಕೋಲಾದ ಬಸ್ ನಿಲ್ದಾಣ ಕಾಮಗಾರಿಯ ನಕ್ಷೆ ಹಾಗೂ ಇತರ ಎಲ್ಲ ಮಾಹಿತಿಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಬನ್ನಿ. ಪದೇಪದೇ ನಕ್ಷೆ ಬದಲಾಗುತ್ತಿರುವ ಬಗ್ಗೆ ಮತ್ತು ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಇಲಾಖೆಯ ಮಾಹಿತಿ ಪಡೆದರು. 

ಇದಕ್ಕೂ ಮೊದಲು ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ‘ಬಸ್ ನಿಲ್ದಾಣ ಕಾಮಗಾರಿ ಕಳಪೆಯಾಗಿದ್ದು, ವಿಳಂಬವಾಗಿ ಜನರಿಗೆ ತೊಂದರೆಯಾಗಿದೆ’ ಎಂದು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ವಿವೇಕ್ ಹೆಗಡೆ, ‘ಬಸ್ ನಿಲ್ದಾಣದ ನಕ್ಷೆಯಲ್ಲಿ ಬದಲಾವಣೆಯಾಗಿದೆ. ಈ ಕಾಮಗಾರಿಯನ್ನು ಹುಬ್ಬಳ್ಳಿಯ ಕೇಂದ್ರ ಕಚೇರಿಯೇ ನಿರ್ವಹಿಸುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ತೋಟಗಾರಿಕೆ ಇಲಾಖೆಯ ಪ‍್ರಗತಿ ಪರಿಶೀಲಿಸಿದಾಗ ಶಾಸಕ ದಿನಕರ ಶೆಟ್ಟಿ, ‘ಇಲಾಖೆಯ ಅಧಿಕಾರಿಗಳು ತಮ್ಮ ಕಚೇರಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ. ಯೋಜನೆಗಳ ಬಗ್ಗೆ ಶಾಸಕರಿಗೆ ತಿಳಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಶಿಕಲಾ ಜೊಲ್ಲೆ ಮಾತನಾಡಿ, ‘ಇನ್ನುಮುಂದೆ ಹೀಗಾಗಬಾರದು. ಹಿರಿಯ ಅಧಿಕಾರಿಗಳು ಕಚೇರಿ ಬಿಟ್ಟು ಕ್ಷೇತ್ರ ಪ್ರವಾಸ ಮಾಡಬೇಕು’ ಎಂದು ಇಲಾಖೆಯ ಉಪ ನಿರ್ದೇಶಕ ಬಿ.ಪಿ.ಸತೀಶ್‌ಗೆ ತಾಕೀತು ಮಾಡಿದರು.

ಕುಮಟಾದಲ್ಲಿ ಸೀಗಡಿ ಕೃಷಿಯ ಪುನರುಜ್ಜೀವನದ ಬಗ್ಗೆ ಗಮನ ಸೆಳೆದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ‘ಕುಮಟಾದಲ್ಲಿ ವೈರಸ್ ಸಮಸ್ಯೆಯಿಂದ ಹಿನ್ನಡೆಯಾಗಿದೆ. ರಾಜಮಂಡ್ರಿಯಿಂದ ವಿಜ್ಞಾನಿಯೊಬ್ಬರು ಬಂದು ಅಧ್ಯಯನ ಮಾಡಿ ಪರಿಹಾರ ಸೂಚಿಸಲಿದ್ದಾರೆ’ ಎಂದರು.

ಬೀಡಾಡಿ ದನಗಳ ಸಮಸ್ಯೆ: ಜಿಲ್ಲೆಯಲ್ಲಿ ಬೀಡಾಡಿ ದನಗಳ ಸಮಸ್ಯೆ ಹೆಚ್ಚಿರುವ ಬಗ್ಗೆಯೂ ಚರ್ಚೆಯಾಯಿತು. ಅವುಗಳಿಂದ ಆಗುತ್ತಿರುವ ಅಪಘಾತ ಕಡಿಮೆ ಮಾಡಲು ಕ್ರಮ ಅಗತ್ಯ ಎಂದು ಸಚಿವರು, ಶಾಸಕರು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್.ಡಿ ಮಾತನಾಡಿ, ದನಗಳ ಕತ್ತಿಗೆ ರೇಡಿಯಮ್ ಪಟ್ಟಿ ಅಳವಡಿಸುವುದು ಸೂಕ್ತ ಎಂದು ಸಲಹೆ ನೀಡಿದರು. ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪಿ.ನಾಯಕ, ‘ಕಾರವಾರದಲ್ಲಿ ಬೀಡಾಡಿ ದನಗಳನ್ನು ಹಿಡಿಯಲು ಟೆಂಡರ್ ಕರೆಯಲಾಗಿದ್ದು, ಜ.9ರಂದು ಕೊನೆಯ ದಿನವಾಗಿದೆ. ಒಂದು ವಾರದ ನಂತರ ಅವುಗಳ ಮಾಲೀಕರು ಬಾರದಿದ್ದರೆ ಗೋಶಾಲೆಗೆ ಬಿಡಲಾಗುವುದು’ ಎಂದು ತಿಳಿಸಿದರು.

ಆಸ್ಪತ್ರೆಗೆ ಜಾಗ: ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಜಾಗದ ಕೊರತೆಯ ವಿಚಾರ ಮತ್ತೊಮ್ಮೆ ಸಭೆಯಲ್ಲಿ ಪ್ರಸ್ತಾಪವಾಯಿತು. ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿ, ‘ಜೈಲನ್ನು ಅಂಕೋಲಾಕ್ಕೆ ಸ್ಥಳಾಂತರಿಸಿದರೆ ವಿಚಾರಣೆಗೆ ತೊಂದರೆಯಾಗುತ್ತದೆ ಎಂದು ನ್ಯಾಯಾಂಗ ಇಲಾಖೆಯಿಂದ ಅಭಿಪ್ರಾಯ ಬಂದಿದೆ’ ಎಂದರು. ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ಮಾತನಾಡಿ, ‘ಜೈಲಿನ ಸಮೀಪದಲ್ಲೇ ಎರಡೂವರೆ ಎಕರೆ ಬಳಸದ ಜಾಗವಿದೆ. ಅದನ್ನು ಉಪಯೋಗ ಮಾಡಿಕೊಳ್ಳಬಹುದು’ ಎಂದರು.

ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನಿಸುವುದಾಗಿ ಶಶಿಕಲಾ ಜೊಲ್ಲೆ ಹೇಳಿದರು.

ಇದೇವೇಳೆ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು