ಗುರುವಾರ , ಜೂನ್ 24, 2021
28 °C
ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಆಡಳಿತ ಭವನ ಉದ್ಘಾಟಿಸಿದ ಸಚಿವ ಬಿ.ಸಿ.ಪಾಟೀಲ್

ಯುವಕರಿಗೆ ವೈಜ್ಞಾನಿಕ ಕೃಷಿ ಪರಿಚಯಿಸಿ: ಸಚಿವ ಬಿ.ಸಿ.ಪಾಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಉದ್ಯೋಗದ ನಿಮಿತ್ತ ಮಹಾನಗರಗಳಿಗೆ ವಲಸೆ ಹೋದ ಯುವಕರು ಹಳ್ಳಿಗಳತ್ತ ಮರಳಿ ಬರುತ್ತಿದ್ದಾರೆ. ಇದರಿಂದ ವೃದ್ಧಾಶ್ರಮದ ವಾತಾವರಣ ಕಡಿಮೆಯಾಗಿ, ಕೃಷಿ ಚಟುವಟಿಕೆಗಳೂ ಅಧಿಕಗೊಳ್ಳುತ್ತಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದ ನೂತನ ಆಡಳಿತ ಭವನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಕರು ಉದ್ಯೋಗ ಬಿಟ್ಟು ಕೃಷಿ ಚಟುವಟಿಕೆಯತ್ತ ಹೊರಳುತ್ತಿದ್ದಾರೆ. ಅವರಿಗೆ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಪರಿಚಯಿಸಬೇಕಿದೆ. ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಸಮನ್ವಯತೆಯೊಂದಿಗೆ ರೈತರಿಗೆ ನೆರವಾಗಬೇಕು. ಮುಂದಿನ ಕೆಲವು ವರ್ಷಗಳಲ್ಲಿ ದೇಶ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಇದು ನೆರವಾಗಲಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ‘ಕೃಷಿಕರೇ ದೇಶವನ್ನು ಬದುಕಿಸುವವರು. ಅನ್ನದಾತರಿಗೆ ವೈಜ್ಞಾನಿಕ ಕೃಷಿ ಪದ್ಧತಿಗಳ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕಿದೆ. ಸರ್ಕಾರ ಅದನ್ನು ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಕೃಷಿ ವಿಜ್ಞಾನ ಕೇಂದ್ರವು ರೈತರಿಂದ ದೂರವಾಗಿಲ್ಲ. ರೈತರ ಕೃಷಿಗೆ ಆಧುನಿಕತೆಯ ಸ್ಪರ್ಶ ನೀಡಲು ನೆರವಾಗುತ್ತಿದೆ. ಯುವ ಪೀಳಿಗೆಗೆ ಕೃಷಿ ಚಟುವಟಿಕೆಯತ್ತ ಮತ್ತಷ್ಟು ಹೆಚ್ಚು ಆಸಕ್ತಿ ವಹಿಸುವಂತೆ ಬದಲಾವಣೆ ತರಬೇಕು. ಅದರ ಜವಾಬ್ದಾರಿ ಕೃಷಿ ವಿಜ್ಞಾನ ಕೇಂದ್ರದ್ದು’ ಎಂದು ಹೇಳಿದರು.

‘ಗಡುವು ವಿಸ್ತರಣೆ ಪರಿಶೀಲನೆ’:

‘ಮೊಬೈಲ್ ಆಪ್ ಮುಖಾಂತರ ಬೆಳೆ ಸಮೀಕ್ಷೆ ನಡೆಸಲು ಆ.24ರವರೆಗೆ ನೀಡಲಾಗಿರುವ ಗಡುವನ್ನು ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಗುವುದು. ಉತ್ತರ ಕನ್ನಡ ಜಿಲ್ಲೆಗೆ ಬೇಡಿಕೆಗಿಂತಲೂ ಹೆಚ್ಚುವರಿ ಪ್ರಮಾಣದ ರಸಗೊಬ್ಬರ ವಿತರಿಸಲಾಗಿದ್ದು ಯಾವುದೇ ಕೊರತೆ ಇಲ್ಲ’ ಎಂದು ಬಿ.ಸಿ.ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಪ್ರಕಟಿಸಿದ ಕೃಷಿ ಕೈಪಿಡಿಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ಪ್ರಭಾವತಿ ಗೌಡ ಇದ್ದರು. ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಮಹಾದೇವ ಚೆಟ್ಟಿ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು