ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟಲು ದ್ರವ ಪರೀಕ್ಷೆ ವರದಿ ವಿಳಂಬ: ಪರಿಹರಿಸಲು ಕ್ರಮದ ಭರವಸೆ ನೀಡಿದ ಬೊಮ್ಮಾಯಿ

ಕುಮಟಾಕ್ಕೆ ಭೇಟಿ ನೀಡಿದ ಗೃಹ ಸಚಿವ
Last Updated 1 ಮೇ 2021, 12:49 IST
ಅಕ್ಷರ ಗಾತ್ರ

ಕುಮಟಾ: ‘ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಪತ್ತೆ ಹಚ್ಚುವ ಗಂಟಲು ದ್ರವ ಪರೀಕ್ಷಾ (ಆರ್.ಟಿ.ಪಿ.ಸಿ.ಆರ್) ವರದಿ ತಡವಾಗಿ ಬರುತ್ತಿರುವ ದೂರುಗಳು ಬಂದಿವೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಗೃಹ ಸಚಿವ ಬಸವರಾಜ ‌ಬೊಮ್ಮಾಯಿ ಹೇಳಿದರು.

ಶನಿವಾರ‌ ಉಡುಪಿಗೆ ತೆರಳುವಾಗ ಮಾರ್ಗಮಧ್ಯೆ ಕುಮಟಾದಲ್ಲಿ ಶಾಸಕ ದಿನಕರ ಶೆಟ್ಟಿ ಅವರೊಂದಿಗೆ ಅವರು ಚರ್ಚಿಸಿದರು.

ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ಆಮ್ಲಜನಕ ಲಭ್ಯತೆಯ ‌ಬಗ್ಗೆ ಸಚಿವರು ಶಾಸಕರೊಂದಿಗೆ ಚರ್ಚಿಸಿದರು.

ಆಗ ಶಾಸಕರು, ‘ಕುಮಟಾ ತಾಲ್ಲೂಕಿನ‌ ಬೆಟ್ಕುಳಿ ಗ್ರಾಮದಲ್ಲಿ‌ ಹುಬ್ಬಳ್ಳಿ ‌ಮೂಲದ ಉದ್ಯಮಿ ಅನೀಶ್ ಎನ್ನುವವರು ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ‌ಪೂರೈಕೆ‌ ಕೊರತೆಯಾದರೆ ಬೆಟ್ಕುಳಿಯಿಂದ ತರಿಸಿ ಕೊಳ್ಳಬಹುದಾಗಿದೆ’ ಎಂದು ಹೇಳಿದರು.

ಆಸ್ಪತ್ರೆಗಳಿಗೆ ಆಮ್ಲಜನಕ: ತಾಲ್ಲೂಕಿನ ಬೆಟ್ಕುಳಿಯಲ್ಲಿ ‘ಭಾರತ್’ ಆಕ್ಸಿಜನ್ ಹಂಚಿಕೆದಾರರು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ‌ ಮಾಡುತ್ತಿದ್ದಾರೆ.

‘ಹುಬ್ಬಳ್ಳಿ ಮೂಲದ ಈ ಕಂಪನಿಯು ದ್ರವರೂಪದ‌ ಆಕ್ಸಿಜನ್ ತಂದು ಜಂಬೋ ಸಿಲಿಂಡರ್‌ಗಳಿಗೆ ಅದನ್ನು ತುಂಬಿ‌ ಆಸ್ಪತ್ರೆಗಳಿಗೆ‌ ಮಾರಾಟ ಮಾಡುತ್ತಿದೆ. ಹಿಂದೆ‌ ಅದನ್ನು ವಾಣಿಜ್ಯ ಉದ್ದೇಶಗಳಿಗೂ ಬಳಕೆ ಮಾಡಲಾಗುತ್ತಿತ್ತು’ ಎಂದು ಸಂಸ್ಥೆಯ ವ್ಯವಸ್ಥಾಪಕ ಭರತ್ ತಿಳಿಸಿದರು.

‘ಸರ್ಕಾರಿ ಆಸ್ಪತ್ರೆಗೆ‌‌ ಕುಂದಾಪುರದಿಂದ ಆಮ್ಲಜನಕ ತರಿಸಿಕೊಳ್ಳಲಾಗುತ್ತಿದೆ. ಅಲ್ಲಿಯ ಪೂರೈಕೆಯಲ್ಲಿ ವ್ಯತ್ಯಯವಾದರೆ ಬೆಟ್ಕುಳಿ ಭಾರತ್ ಆಕ್ಸಿಜನ್ ಸಂಸ್ಥೆಯಿಂದ ತರಿಸಿಕೊಳ್ಳಲಾಗುವುದು’ ಎಂದು ಉಪವಿಭಾಗಾಧಿಕಾರಿ ಎಂ.ಅಜಿತ್ ಮಾಹಿತಿ ನೀಡಿದರು.

ಬಿಜೆಪಿ ಮುಖಂಡರಾದ ವಿನೋದ ಪ್ರಭು, ಡಾ.ಜಿ.ಜಿ.ಹೆಗಡೆ ಇದ್ದರು.

ನಗರಸಭೆಯಿಂದ ಸಮೀಕ್ಷೆ
ಕಾರವಾರ:
ನಗರಸಭೆಯ ವ್ಯಾಪ್ತಿಗೆ ಕೆಲವು ದಿನಗಳಿಂದ ಬೇರೆ ರಾಜ್ಯಗಳು, ಜಿಲ್ಲೆಗಳು ಹಾಗೂ ಬೆಂಗಳೂರಿನಿಂದ ಬಂದವರ ಸಮೀಕ್ಷೆ ನಡೆಸಲಾಗುತ್ತಿದೆ. ಇದರ ಸಲುವಾಗಿ ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರು ಮೇ 5ರವರೆಗೆ ಮನೆಮನೆಗೆ ಭೇಟಿ ನೀಡಲಿದ್ದಾರೆ.

ಕೋವಿಡ್ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಈ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ರೋಗ ಲಕ್ಷಣ ಇರುವವರ ಮಾಹಿತಿಗಳನ್ನೂ ಇದೇ ವೇಳೆ ಸಂಗ್ರಹಿಸಲಾಗುತ್ತದೆ. ಈ ಕಾರ್ಯಕ್ಕಾಗಿ ನಗರದ ಎಲ್ಲ 31 ವಾರ್ಡ್‌ಗಳಿಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕರು ಅವರಿಗೂ ಮಾಹಿತಿ ನೀಡಬಹುದು ಎಂದು ನಗರಸಭೆಯ ಪ್ರಭಾರ ಆಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT