ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶಯ ಮೂಡಿಸುವ ಅಭ್ಯರ್ಥಿ ಸಾಧನೆ: ಸಚಿವ ಆರ್.ವಿ.ದೇಶಪಾಂಡೆ ಟೀಕೆ

ಪ್ರಚಾರ ಸಭೆ
Last Updated 16 ಏಪ್ರಿಲ್ 2019, 14:50 IST
ಅಕ್ಷರ ಗಾತ್ರ

ಶಿರಸಿ: ಬಿಜೆಪಿ ಅಭ್ಯರ್ಥಿಗಳು ತಮ್ಮ ಸಾಧನೆ ಮೇಲೆ ಮತ ಕೇಳದೆ, ಮೋದಿಯವರ ಹೆಸರಿನಡಿ ಮತ ಕೇಳುತ್ತಿದ್ದಾರೆ. ಇದನ್ನು ನೋಡಿದಾಗ ಅಭ್ಯರ್ಥಿಗಳ ಸಾಧನೆಯ ಬಗ್ಗೆ ಮತದಾರರಿಗೆ ಸಂಶಯ ಮೂಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ಮಂಗಳವಾರ ಇಲ್ಲಿ ನಡೆದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಅಧಿಕಾರದಲ್ಲಿರುವಾಗ ದೇಶ ಪ್ರಗತಿ ಸಾಧಿಸಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗ ಹೆಚ್ಚಿದೆ. ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ, ಜನರನ್ನು ವಂಚಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಉತ್ತಮ ಕಾರ್ಯಕ್ರಮಗಳು ನಡೆದಿಲ್ಲ. ಆ ಕಾರಣಕ್ಕಾಗಿ ಎನ್‌ಡಿಎ ಸಾಧನೆ ಹೇಳಿಕೊಳ್ಳಲು ಬಿಜೆಪಿಗೆ ಏನೂ ಉಳಿದಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ಅತಿಕ್ರಮಣದಾರರ ಸಮಸ್ಯೆ ಬಗೆಹರಿಸಲಿದೆ. ಕೇಂದ್ರದ ಹಿಂದಿನ ಕಾಂಗ್ರೆಸ್ ಸರ್ಕಾರ, ಇಂದಿನ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರ ಹಾಗೂ ಇಂದಿನ ಮೈತ್ರಿ ಸರ್ಕಾರ ನೀಡಿರುವ ಕಾರ್ಯಕ್ರಮಗಳನ್ನು ತುಲನೆ ಮಾಡಿ ಮತಚಲಾಯಿಸಬೇಕು. ಏನೂ ತಿಳಿದುಕೊಳ್ಳದೇ ಅಂಧರಾಗಿ ಮತ ಹಾಕಬಾರದು ಎಂದು ಹೇಳಿದರು.

ಜೆಡಿಎಸ್‌ ಅಭ್ಯರ್ಥಿ ಆನಂದ ಅಸ್ನೋಟಿಕರ್ ಮಾತನಾಡಿ, ‘ಹಾಲಿ ಸಂಸದರು ಎರಡು ದಶಕಗಳ ಆಡಳಿತದಲ್ಲಿ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾರೆ. ಕ್ಷೇತ್ರಕ್ಕೆ ನ್ಯಾಯಸಿಗಲು ಬದಲಾವಣೆ ಅಗತ್ಯವಾಗಿದೆ. ನನಗೆ ರಾಜಕೀಯ ಹೊಸತಲ್ಲ. ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ರಾಜಕೀಯ ಹಿನ್ನೆಲೆಯೂ ಇದೆ’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವ, ಪ್ರಮುಖರಾದ ಶಾಂತಾರಾಮ ಹೆಗಡೆ, ಸಿ.ಎಫ್‌ನಾಯ್ಕ, ಬಿ.ಆರ್.ನಾಯ್ಕ, ರಾಮನಾಥ ಹೆಗಡೆ, ಅಬ್ಬಾಸ್ ತೋನ್ಸೆ ಇದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ ಸ್ವಾಗತಿಸಿದರು. ಶ್ರೀಪಾದ ಹೆಗಡೆ ನಿರೂಪಿಸಿದರು. ಪ್ರವೀಣ ಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT