ಶುಕ್ರವಾರ, ನವೆಂಬರ್ 27, 2020
19 °C
ಗೋಕರ್ಣ: ಸ್ಥಳೀಯರ ಮನವಿಗೆ ಸ್ಪಂದಿಸಿದ ಸಚಿವರಿಂದ ಸ್ಥಳ ಪರಿಶೀಲನೆ

ಕೋಟಿತೀರ್ಥ ಸ್ವಚ್ಛತೆಗೆ ಈಶ್ವರಪ್ಪ ಆದೇಶ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಪುರಾಣ ಪ್ರಸಿದ್ಧ ಕೋಟಿತೀರ್ಥ ಕಸ ಕಡ್ಡಿ, ಕಮಲದ ಪಾಚಿ ಹಾಗೂ ತ್ಯಾಜ್ಯಗಳಿಂದ ಕಲುಷಿತಗೊಂಡಿದೆ. ಇದು ಭಕ್ತರ ಭಾವನೆಗೆ ಧಕ್ಕೆ ತರುತ್ತಿದೆ. ಕೂಡಲೇ ನೀರನ್ನು ಸ್ವಚ್ಛಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಮೊಹಮ‌್ಮದ್ ರೋಶನ್ ಅವರಿಗೆ ಮೌಖಿಕವಾಗಿ ಸೋಮವಾರ ಆದೇಶಿಸಿದರು.

ಗೋಕರ್ಣಕ್ಕೆ ವೈಯಕ್ತಿಕ ಭೇಟಿ ನೀಡಿದ್ದ ಸಚಿವರಿಗೆ ಬ್ರಾಹ್ಮಣ ಪರಿಷತ್ತು ಅಧ್ಯಕ್ಷ ವೇದಮೂರ್ತಿ ಚಂದ್ರಶೇಖರ ಅಡಿ ಮೂಳೆ, ಆರ್.ಎಸ್.ಎಸ್. ಕಾರ್ಯಕರ್ತರಾದ ರವಿ ಗುನಗಾ, ಗಣಪತಿ ಅಡಿ ಹಾಗೂ ಪಟ್ಟವಿನಾಯಕ ಗೆಳೆಯರ ಬಳಗದ ಸದಸ್ಯರು ಮನವಿ ಸಲ್ಲಿಸಿದರು.

ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಈಶ್ವರಪ್ಪ, ಕೋಟಿತೀರ್ಥದ ಸ್ಥಿತಿ ನೋಡಿ ಬೇಸರಗೊಂಡರು. ಸ್ಥಳದಲ್ಲಿ ಉಪಸ್ಥಿತರಿದ್ದ ಶಾಸಕ ದಿನಕರ ಶೆಟ್ಟಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ನೀರನ್ನು ಸ್ವಚ್ಛಗೊಳಿಸುವಂತೆ ನಿರ್ದೇಶನ ನೀಡಿದರು.

ಸ್ಥಳದಲ್ಲಿದ್ದ ಅಧಿಕಾರಿಗಳು ಸಚಿವರಿಗೆ ತಾವು ರೂಪಿಸಿದ ಯೋಜನೆಯನ್ನು ತೋರಿಸಿದರು. ಸುಮಾರು ₹ 2 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಬಹುದೆಂದು ವಿವರಿಸಿದರು. ಅದಕ್ಕೆ ಒಪ್ಪಿಗೆ ಸೂಚಿಸಿದ ಸಚಿವರು ಒಂದು ತಿಂಗಳ ನಂತರ ಪುನಃ ಇಲ್ಲಿಗೆ ಬರುವುದಾಗಿ ತಿಳಿಸಿ, ಕಾಮಗಾರಿ ಪ್ರಾರಂಭಿಸುವಂತೆ ಮೌಖಿಕವಾಗಿ ಸೂಚಿಸಿದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಪರಿಷತ್ತಿನ ಪದಾಧಿಕಾರಿಗಳು, ಪಟ್ಟವಿನಾಯಕ ಗೆಳೆಯರ ಬಳಗದ ಸದಸ್ಯರು, ತಾಲ್ಲೂಕು ಪಂಚಾಯ್ತಿ ಸದಸ್ಯ ಮಹೇಶ ಶೆಟ್ಟಿ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಇದ್ದರು.

ಅಸಮರ್ಪಕ ಕಾಮಗಾರಿ: ಪೌರಾಣಿಕ ಹಿನ್ನೆಲೆಯಿರುವ ಕೋಟಿತೀರ್ಥವು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಸ್ಥಳವೆಂಬ ಪ್ರತೀತಿಯಿದೆ. ಇದರಲ್ಲಿರುವ ಕೆಸರನ್ನು ಕೆಲವು ವರ್ಷಗಳ ಹಿಂದೆ ತೆಗೆಯಲು ಕಾಮಗಾರಿ ನಡೆಸಲಾಯಿತು. ಆದರೆ, ಅಸಮರ್ಪಕ ಕಾಮಗಾರಿಯಿಂದ ನೀರಿನಲ್ಲಿ ಪಾಚಿ, ತ್ಯಾಜ್ಯಗಳು ಶೇಖರಣೆಯಾಯಿತು. ಹಾಗಾಗಿ ನೀರು ಬಳಕೆಗೆ ಅಸಾಧ್ಯವಾಯಿತು. ನೀರನ್ನು ಸ್ವಚ್ಛಗೊಳಿಸುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಎಷ್ಟೇ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.

ಇದರಿಂದ ಬೇಸತ್ತ ಸ್ಥಳೀಯ ಪಟ್ಟವಿನಾಯಕ ಗೆಳೆಯರ ಬಳಗ ಸಾರ್ವಜನಿಕ ಸಹಯೋಗದೊಂದಿಗೆ ವರ್ಷಕ್ಕೆ ಸುಮಾರು ₹ 5  ಲಕ್ಷ ಖರ್ಚು ಮಾಡಿ ಮೂರು ವರ್ಷಗಳಿಂದ ಸ್ವಚ್ಛಗೊಳಿಸಲಾಗುತ್ತಿದೆ. ಆದರೆ, ಆರ್ಥಿಕ ಮುಗ್ಗಟ್ಟು ಮತ್ತು ಲಾಕ್‌ಡೌನ್ ಕಾರಣದಿಂದ ಈ ವರ್ಷ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು