ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ವಿಕೋಪ: ಈ ಸಂದರ್ಭದಲ್ಲಿ ಅಧಿಕಾರಿಗಳು ರಜೆ ಮಾಡುವಂತಿಲ್ಲ ಎಂದ ಸಚಿವ ಕೋಟ

ಪ್ರಕೃತಿ ವಿಕೋಪ ಪ್ರಗತಿ ಪರಿಶೀಲನಾ ಸಭೆ
Last Updated 20 ಜುಲೈ 2022, 15:44 IST
ಅಕ್ಷರ ಗಾತ್ರ

ಯಲ್ಲಾಪುರ: ‘ಈ ವರ್ಷ ಅತಿವೃಷ್ಟಿಯಿಂದಾದ ಹಾನಿ ಮತ್ತು ನಷ್ಟದ ಸಮಗ್ರ ಮಾಹಿತಿಯನ್ನು ಅಧಿಕಾರಿಗಳು ಸಿದ್ಧಪಡಿಸಿ ತಕ್ಷಣ ತಹಶೀಲ್ದಾರರಿಗೆ ಕಳಿಸಬೇಕು. ಈ ಪರಿಸ್ಥಿತಿಯಲ್ಲಿ ಯಾವುದೇ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಪ್ರಕೃತಿ ವಿಕೋಪ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಜೆ ಹಾಕಿದಾಗ ಏನಾದರೂ ಅನಾಹುತವಾದರೆ ನೋಡಲ್ ಅಧಿಕಾರಿಗಳು, ಪಿಡಿಒಗಳೇ ಹೊಣೆಯಾಗುತ್ತಾರೆ. ಈ ಸಭೆಗೆ ಬಾರದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ’ ಎಂದು ಸೂಚಿಸಿದರು.

ಪ್ರಕೃತಿ ವಿಕೋಪದಿಂದ ಹಾನಿಯಾದ ಶಾಲಾ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಸರ್ಕಾರ ₹ 2 ಲಕ್ಷ ನೀಡುತ್ತಿದ್ದು, ಕೂಡಲೇ ಸಮೀಕ್ಷೆ ನಡೆಸಿ ದುರಸ್ತಿ ಮಾಡಿ ಎಂದ ಅವರು, ಭಾಗಶಃ ಹಾನಿಯಾದ ಮನೆಗಳಿಗೆ ಕೂಡಲೇ ₹ 50 ಸಾವಿರ, ಜಾನುವಾರು ಕೊಟ್ಟಿಗೆ ಹಾನಿಯಾದವರಿಗೆ ₹ 10 ಸಾವಿರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ‘ಜಿ.ಪಿ.ಎಸ್ ಆಗಿರುವ ಮನೆಗಳಿಗೆ ಅರಣ್ಯ ಇಲಾಖೆಯವರು ನೋಟಿಸ್ ನೀಡಿದರೆ ಅಧಿಕಾರಿಗಳ ವಿರುದ್ಧ ಏನು ನೋಟಿಸ್ ಕೊಡಬೇಕು ಅದನ್ನು ಕೊಡುತ್ತೇವೆ. ಅಧಿಕಾರಿಗಳು ಮಲೆನಾಡಿನಲ್ಲಿ ಕೆಲಸ ಮಾಡುವ ಮನಸ್ಸಿದ್ದರೆ ಇಲ್ಲಿಯ ಜನ ಜೀವನವನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಬೆಂಗಳೂರಿನಲ್ಲಿ ಕುಳಿತವರಿಗೆ ಇಲ್ಲಿಯ ಜನರ ಕಷ್ಟ ಸುಖ ತಿಳಿಯುವುದಿಲ್ಲ’ ಎಂದರು.

ಯಲ್ಲಾಪುರ ತಾಲ್ಲೂಕಿನ ಕಂದಾಯ ಇಲಾಖೆಗೆ ಸಂಬಂಧಪಟ್ಟ ಹಾನಿಯ ಬಗ್ಗೆ ವಿವರಣೆ ನೀಡಿದ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ‘ವಾಡಿಕೆಗಿಂತ 5 ಸೆಂ.ಮೀ ಹೆಚ್ಚು ಮಳೆಯಾಗಿದೆ. 29 ಮನೆಗಳಿಗೆ ಹಾನಿಯಾಗಿದ್ದು, 24 ಮನೆಗಳು ಭಾಗಶಃ ಹಾನಿಯಾಗಿದೆ’ ಎಂದರು.

ಶಿಕ್ಷಣ ಇಲಾಖೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್‌.ಹೆಗಡೆ, ‘ಒಟ್ಟು 48 ಶಾಲೆಗಳಿಗೆ ಹಾನಿಯಾಗಿದೆ. ಕೆಲವು ಶಾಲೆಗಳ ಕಾಂಪೌಂಡ್ ಬಿದ್ದಿವೆ’ ಎಂದರು.

ಸಿ.ಡಿ.ಪಿ.ಒ ರಫೀಕಾ ಹಳ್ಳೂರು ಮಾಹಿತಿ ನೀಡಿ, ‘ಮಳೆಯಿಂದಾಗಿ 19 ಅಂಗನವಾಡಿಗಳಿಗೆ ಹಾನಿಯಾಗಿದೆ. ಕೆಲವು ಅಂಗನವಾಡಿಗಳನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ಕೆಲವು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ’ ಎಂದರು.

ಮಕ್ಕಳನ್ನು ಅಪಾಯಕಾರಿ ಕಟ್ಟಡದಲ್ಲಿ ಕುಳ್ಳರಿಸದಂತೆ ಸಚಿವ ಪೂಜಾರ ಹಾಗೂ ಹೆಬ್ಬಾರ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಎ.ಇ.ಇ ಅಶೋಕ್ ಬಂಟ್ ಮಾಹಿತಿ ನೀಡಿ, ‘ಒಟ್ಟು 52 ರಸ್ತೆಗಳು ಹಾನಿಯಾಗಿದ್ದು 8 ಮೋರಿ ಮತ್ತು ಸೇತುವೆ ಹಾನಿಯಾಗಿದೆ. ಅಂದಾಜು ₹ 12 ಕೋಟಿಗೂ ಹೆಚ್ಚು ಹಾನಿಯನ್ನು ಅಂದಾಜಿಸಲಾಗಿದೆ’ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಸಮರ್ಪಕವಾಗಿಲ್ಲ ಎಂಬ ದೂರು ಕೇಳಿ ಬಂತು.

ಲೋಕೋಪಯೋಗಿ ಇಲಾಖೆಯ ಎ.ಇ.ಇ ವಿ.ಎಂ.ಭಟ್, ಹೆಸ್ಕಾಂ ಎ.ಇ.ಇ ವಿನಾಯಕ ಪೆಟ್ನೇಕರ್, ತಾಲ್ಲೂಕು ಪಂಚಾಯಿತಿ ಇ.ಒ ಜಗದೀಶ ಕಮ್ಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುಬ್ರಾಯ ಭಟ್ಟ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಮುಂತಾದವರು ತಮ್ಮ ಇಲಾಖೆ ಕುರಿತು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೋಗವೀರ, ಶಿರಸಿ ಸಹಾಯಕ ಆಯುಕ್ತ ಆರ್.ದೇವರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶಾಮಿಲಿ ಪಾಟಣಕರ ಮುಂಡಗೋಡ ಹಾಗೂ ಯಲ್ಲಾಪುರ ತಹಶೀಲ್ದಾರ್‌ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT