ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕ: ಕೆಲವರಿಂದ ಅನಗತ್ಯ ಹುಯಿಲು– ಕೋಟ ಶ್ರೀನಿವಾಸ ಪೂಜಾರಿ

Last Updated 3 ಜೂನ್ 2022, 13:26 IST
ಅಕ್ಷರ ಗಾತ್ರ

ಕಾರವಾರ: ‘ಮಕ್ಕಳಿಗೆ ರಾಷ್ಟ್ರೀಯತೆಯ ಅರಿವು ಮೂಡಿಸಲು ಪಠ್ಯಪುಸ್ತಕವೂ ಒಂದು ಮಾಧ್ಯಮ. ಕೆಲವರು ಅನಗತ್ಯವಾಗಿ ಕೂಗೆಬ್ಬಿಸಿದ್ದಾರೆ. ಮಕ್ಕಳಿಗೆ ಪಠ್ಯಪುಸ್ತಕ ಸಿಗಬಾರದು, ಸರ್ಕಾರವನ್ನು ಮುಜುಗರಕ್ಕೆ ಗುರಿ ಮಾಡಬೇಕು ಎಂಬುದೇ ಅವರ ಉದ್ದೇಶ. ಆದರೆ, ಸರ್ಕಾರದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಂಟು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಚಿವರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಪಠ್ಯ ಪುಸ್ತಕದಲ್ಲಿ ತಮ್ಮ ಬರಹಗಳು ಇಲ್ಲದಿದ್ದರೂ ಕೆಲವರು ಪರಿಷ್ಕೃತ ಪುಸ್ತಕದಲ್ಲಿ ಮುದ್ರಿಸಲು ಒಪ್ಪಿಗೆಯಿಲ್ಲ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಕೆಲವು ಸಾಹಿತಿಗಳು ದೇಶದಲ್ಲಿ ಅಸಹಿಷ್ಣುತೆ ಇದೆಯೆಂದು ಹೇಳಿ ಪ್ರಶಸ್ತಿ ವಾಪಸ್ ಮಾಡಿದಾಗ ಕೇವಲ ಪ್ರಮಾಣಪತ್ರವನ್ನ ಹಿಂದಿರುಗಿಸಿದ್ದರು’ ಎಂದು ಟೀಕಿಸಿದರು.

‘ನಾನು ಶಾಲೆಗೆ ಹೋಗುವಾಗ ಒಂದನೇ ತರಗತಿಯ ಪಠ್ಯದಲ್ಲಿ ಈಶ್ವರ ದೇವರ ಚಿತ್ರವಿತ್ತು. ಗಣಪತಿಯ ಈಶ್ವರನ ಮಗ ಎಂದು ಕಲಿಸುವ ಚಿತ್ರವಿತ್ತು. ಅದನ್ನು ಬದಲಿಸಿದವರು ಯಾರು? ಬುದ್ಧಿಜೀವಿಗಳು ಕೈಯಾಡಿಸಿದರು’ ಎಂದು ಹೇಳಿದರು.

‘ಬಿ.ಜೆ.ಪಿ.ಯ ತತ್ವ ಸಿದ್ಧಾಂತಗಳು ಆಗಾಗ ಬದಲಾಗುತ್ತಿವೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ದೇಶದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಎಲ್ಲ ವರ್ಗಗಳ ಜನರೂ ಅಗತ್ಯ. ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವವರನ್ನು ಸ್ವಾಗತಿಸುತ್ತೇವೆ. ಒಪ್ಪದವರು ವಾಪಸ್ ಹೋಗಿದ್ದಾರೆ’ ಎಂದರು.

‘ವಿಧಾನಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರು ನಮ್ಮ ಸಿದ್ಧಾಂತವನ್ನು ಒಪ್ಪಿದ್ದಾರೆ. ಯಾವುದೇ ಪಕ್ಷದಿಂದ ನಮ್ಮ ಪಕ್ಷಕ್ಕೆ ಬಂದವರನ್ನು ಹಾಲಿಗೆ ಹಾಕಿದ ಸಕ್ಕರೆಯಂತೆ ಕರಗಿಸಿಕೊಳ್ಳುತ್ತೇವೆ’ ಎಂದು ಹೇಳಿದರು.

ಜೆ.ಡಿ.ಎಸ್ ಮುಖಂಡ ಆನಂದ ಅಸ್ನೋಟಿಕರ್ ತಮ್ಮನ್ನು ಭೇಟಿ ಮಾಡಿದ್ದಾಗ ಉಭಯ ಕುಶಲೋಪರಿ ವಿಚಾರಿಸಿದ್ದೇನೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವನ್ನು ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ನೋಡಿಕೊಳ್ಳುತ್ತಾರೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

‘ಕೇಂದ್ರದಲ್ಲಿ ನರೇಂದ್ರ ಮೋದಿ ನಾಯಕತ್ವದ ಸರ್ಕಾರದ ಸಾಧನೆಗಳನ್ನು ದೇಶವೇ ಹೊಗಳುತ್ತಿದೆ. ಸಾಮಾಜಿಕ ಭದ್ರತೆಯ ಕಾರ್ಯಕ್ರಮಗಳು, ಭ್ರಷ್ಟಾಚಾರ ರಹಿತ ಆಡಳಿತ, ಆತ್ಮನಿರ್ಭರ ಮುಂತಾದ ಯೋಜನೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಪಕ್ಷದ ಜಿಲ್ಲಾ ಘಟಕದ ವಕ್ತಾರ ನಾಗರಾಜ ನಾಯಕ, ಜಿಲ್ಲಾ ಘಟಕದ ಕಾರ್ಯದರ್ಶಿ ಆರತಿ ಗೌಡ ಇದ್ದರು.

––––

* ವನಿವರ್ಧಕ ಬಳಕೆಯ ನಿರ್ಬಂಧದಿಂದ ಯಕ್ಷಗಾನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸ್ಪೀಕರ್ ಬಳಕೆಗೆ ಜಿಲ್ಲಾಧಿಕಾರಿಯಿಂದ ಅನುಮತಿ ಕೊಡಲಾಗುತ್ತದೆ.

– ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT