ಸೋಮವಾರ, ಆಗಸ್ಟ್ 2, 2021
28 °C
ಮೀನು ಮಾರುಕಟ್ಟೆಯ ಹೊಸ ಕಟ್ಟಡದಲ್ಲಿ ಸದ್ಯಕ್ಕೆ 180 ಮಹಿಳೆಯರಿಗೆ ಅವಕಾಶ

ಪ್ರಕರಣಗಳ ರಾಜಿ ಸಂಧಾನಕ್ಕೆ ಪ್ರಯತ್ನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ನಗರದ ಮೀನು ಮಾರುಕಟ್ಟೆಯ ಹೊಸ ಕಟ್ಟಡದಲ್ಲಿ ಸದ್ಯ ಜಾಗದ ಲಭ್ಯತೆಗೆ ಅನುಗುಣವಾಗಿ 180 ಮೀನುಗಾರ ಮಹಿಳೆಯರಿಗೆ ವ್ಯಾಪಾರ ನಡೆಸಲು ಅವಕಾಶವಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳ ರಾಜೀಸಂಧಾನ ಮಾಡಲು ಪ್ರಯತ್ನಿಸಲಾಗುವುದು’ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಮೀನು ಮಾರುಕಟ್ಟೆಯ ನೂತನ ಕಟ್ಟಡದ ಕಾಮಗಾರಿಯನ್ನು ಭಾನುವಾರ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘7 ಸಾವಿರ ಚದರ ಅಡಿಗಳಷ್ಟು ವಿಸ್ತೀರ್ಣದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ 400 ಮೀನುಗಾರ ಮಹಿಳೆಯರು ಕೂರುವಷ್ಟು ಅವಕಾಶ ಬೇಕೆಂಬ ಬೇಡಿಕೆಯಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳ ಇತ್ಯರ್ಥದ ಬಳಿಕ ಸ್ಥಳಾವಕಾಶದ ವಿಸ್ತರಣೆಯ ಬಗ್ಗೆ ಯೋಜಿಸಲಾಗುವುದು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಶಾಸಕಿ ರೂಪಾಲಿ ನಾಯ್ಕ, ಉಪ ವಿಭಾಗಧಿಕಾರಿ ಪ್ರಿಯಾಂಗಾ, ನಗರಸಭೆ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಆರ್.ಪಿ.ನಾಯಕ, ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಇದ್ದರು.

ಮೀನುಗಾರರ ವಿರೋಧ: ‘ಕಟ್ಟಡದ ಮೂಲ ನಕ್ಷೆಯಲ್ಲಿ 480 ಮಾರಾಟಗಾರರಿಗೆ ಕೂರಲು ಅವಕಾಶ ಇರುವಂತೆ ವಿನ್ಯಾಸ ಮಾಡಲಾಗಿತ್ತು. ಅದೇ ಪ್ರಕಾರವೇ ಎಲ್ಲರಿಗೂ ವ್ಯವಸ್ಥೆ ಮಾಡಬೇಕು’ ಎಂದು ಮೀನುಗಾರ ಮಹಿಳೆಯರು ಸಚಿವರಿಗೆ ಮನವಿ ಸಲ್ಲಿಸಿದರು.

‘ಈ ವ್ಯವಸ್ಥೆ ಆಗುವ ತನಕವೂ ಯಾವ ಮೀನುಗಾರ ಮಹಿಳೆಯೂ ಇಲ್ಲಿ ಕೂರುವುದಿಲ್ಲ. ಎಲ್ಲರಿಗೂ ಅವಕಾಶ ಕೊಡಲು ಸಾಧ್ಯವಿಲ್ಲ, ಹಾಗಾಗಿ ಪಾಳಿಯಲ್ಲಿ ಕುಳಿತು ವ್ಯಾಪಾರ ಮಾಡುವಂತೆ ಅಧಿಕಾರಿಗಳು ಹೇಳುತ್ತಾರೆ. ಇದನ್ನು ನಾವು ಒಪ್ಪುವುದಿಲ್ಲ’ ಎಂದು ಮೀನುಗಾರ ಮಹಿಳೆ ಸುಶೀಲಾ ಹರಿಕಂತ್ರ ಹೇಳಿದರು.

ಕಾಂಗ್ರೆಸ್ ಟಾಸ್ಕ್‌ಫೋರ್ಸ್ ಜಿಲ್ಲಾ ಸಮಿತಿ ಅಧ್ಯಕ್ಷ ಸತೀಶ ಸೈಲ್ ಸುದ್ದಿಗಾರರ ಜೊತೆ ಮಾತನಾಡಿ ಮೂಲ ನಕ್ಷೆಯಲ್ಲಿ ಬದಲಾವಣೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ‘ಆರಂಭದಲ್ಲಿ ನೆಲ ಅಂತಸ್ತಿನಲ್ಲಿ ವಾಹನಗಳ ನಿಲುಗಡೆಗೆ ಜಾಗ ಮೀಸಲಿಡಲಾಗಿತ್ತು. ಮೀನು ಮಾರುಕಟ್ಟೆಯ ನೀರನ್ನು ಶುದ್ಧೀಕರಿಸಿ ಅದನ್ನು ಕಟ್ಟಡದ ಸುತ್ತ ಉದ್ಯಾನಕ್ಕೆ ಬಳಸಲು ಯೋಜಿಸಲಾಗಿತ್ತು. ಇದೇ ರೀತಿ, ಹಲವು ಬದಲಾವಣೆಗಳನ್ನು ಮಾಡಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವರ ದರ್ಶನ ಇಂದಿನಿಂದ

‘ರಾಜ್ಯದಲ್ಲಿ ಜೂನ್ 8ರಿಂದ ದೇವಸ್ಥಾನಗಳನ್ನು ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಲವೆಡೆ ವಿನಾಯಿತಿ ನೀಡಲಾಗಿದೆ’ ಎಂದು ಮುಜರಾಯಿ ಸಚಿವರೂ ಆಗಿರುವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ದೇವಸ್ಥಾನಗಳಲ್ಲಿ ಭಕ್ತರ ನಡುವೆ ಅಂತರ ಕಾಯ್ದುಕೊಳ್ಳಲು ಅಗತ್ಯವಿರುವ ಕ್ರಮ ಕೈಗೊಳ್ಳಲಾಗಿದೆ. ಕೇವಲ ದೇವರ ದರ್ಶನಕ್ಕಷ್ಟೇ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಅಧಿಕಾರಿಗಳು ಸಭೆ ನಡೆಸಿದ್ದಾರೆ’ ಎಂದು ಮಾಹಿತಿ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು