ಬುಧವಾರ, ಮೇ 25, 2022
22 °C
ಯಲ್ಲಾಪುರ ತಾಲ್ಲೂಕಿನ ಹೊಸಳ್ಳಿಯಲ್ಲಿ ಕಂದಾಯ ಸಚಿವ ಅಶೋಕ ಗ್ರಾಮ ಭೇಟಿ ಕಾರ್ಯಕ್ರಮ

ಒತ್ತುವರಿ ಜಮೀನು: ನಿಯಮ ಸಡಿಲಕ್ಕೆ ಕ್ರಮ ಎಂದ ಕಂದಾಯ ಸಚಿವ ಆರ್.ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ‘ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರ ಒತ್ತುವರಿ ಜಮೀನುಗಳ ಸಕ್ರಮಕ್ಕೆ ಕಾನೂನು ತೊಡಕಾಗಿದೆ. ಅದನ್ನು ಸರಳಗೊಳಿಸಿ, ಶೀಘ್ರವೇ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿಯ ವಿಠ್ಠಲ– ರುಕ್ಮಾಯಿ ದೇವಸ್ಥಾನದ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಗ್ರಾಮ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಉತ್ತರಕನ್ನಡ ಜಿಲ್ಲೆಯು ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ, ನೈಸರ್ಗಿಕವಾಗಿ, ಭೌಗೋಳಿಕವಾಗಿ ಉಳಿದೆಲ್ಲ ಜಿಲ್ಲೆಗಳಿಗಿಂತ ಸಮೃದ್ಧವಾಗಿದೆ. ಆದರೂ ಈ ಜಿಲ್ಲೆಯಲ್ಲಿ ಅತಿಕ್ರಮಣ ಜಮೀನುಗಳ ಸಕ್ರಮ ಸಮಸ್ಯೆ ಮಾತ್ರ ಬಗೆಹರಿಯದೇ ಕಗ್ಗಂಟಾಗಿರುವುದು ಉಳಿದಿರುವುದು ವಿಪರ್ಯಾಸ’ ಎಂದರು.

‘ಗ್ರಾಮ ವಾಸ್ತವ್ಯ ಎಂದರೆ ಕೇವಲ ಕಾಟಾಚಾರದ ಭೇಟಿಯಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಎಲ್ಲ ಸೌಲಭ್ಯಗಳು ದೊರೆಯಬೇಕು ಎಂಬ ಆಶಯ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಜನಕ್ಕೆ ಹತ್ತಿರವಾಗಬೇಕಾಗಿರುವ ಕಾನೂನು ಅನುಷ್ಠಾನಗೊಳಿಸಲು ‘ಪುಸ್ತಕದ ಬದನೆಕಾಯಿ’ಯನ್ನು ಅನುಸರಿಸದೇ ವಾಸ್ತವಿಕ ದೃಷ್ಟಿಕೋನವನ್ನು ಪಾಲಿಸಲಾಗುತ್ತಿದೆ’ ಎಂದರು.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಿಲ್ಲೆಯ ಅತಿಕ್ರಮಣ ಜಮೀನುಗಳ ಸಕ್ರಮಕ್ಕಾಗಿ ಅಗತ್ಯ ಕ್ರಮ ಕೈಗೊಂಡಿರುವ ಸಚಿವರು, ಆಮೂಲಾಗ್ರ ಬದಲಾವಣೆಯತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಆರೇಳು ದಶಕಗಳಿಂದ ರೈತರು ಎದುರಿಸುತ್ತಿರುವ ಸಮಸ್ಯೆ ಕುರಿತು ಮತ್ತಷ್ಟು ಗಂಭೀರವಾಗಿ ಗಮನಹರಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪ ವಿಭಾಗಾಧಿಕಾರಿ ದೇವರಾಜು, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಶಾಸಕರಾದ ರೂಪಾಲಿ ನಾಯ್ಕ, ಶಾಂತರಾಮ ಸಿದ್ದಿ, ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ವರದಾನಿ, ಸದಸ್ಯ ರೆಹಮತ್ ಅಬ್ಬಿಗೇರಿ, ಪ್ರಮುಖ ವಿಜಯ ಮಿರಾಶಿ ಇದ್ದರು.

ಕಿರವತ್ತಿ ಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಶಿಕ್ಷಕರಾದ ನಾರಾಯಣ ಕಾಂಬಳೆ ಮತ್ತು ಸಂಜೀವಕುಮಾರ ಹೊಸ್ಕೇರಿ ಕಾರ್ಯಕ್ರಮ ನಿರೂಪಿಸಿದರು.

ಅದ್ಧೂರಿ ಸ್ವಾಗತ:

ಸಚಿವ ಆರ್.ಅಶೋಕ ಅವರನ್ನು, ಗೌಳಿ ಸಮುದಾಯದ ಮಹಿಳೆಯರಿಂದ ಪೂರ್ಣಕುಂಭ, ಗೌಳಿ ಪುರುಷರ ‘ಗಜಾ ನೃತ್ಯ’ದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಇದಕ್ಕೂ ಮೊದಲು ಗ್ರಾಮದ ಹಿರಿಯ ವಿಠ್ಠು ದಾದು ಎಡಗೆ ಅವರ ಮನೆಯಲ್ಲಿ ಸಾಮೂಹಿಕವಾಗಿ ಉಪಾಹಾರ ಆಯೋಜಿಸಲಾಗಿತ್ತು. ಅಲ್ಲದೇ ಉಪಾಹಾರ ಸೇವಿಸಿದ ಸಚಿವರು, ಸ್ಥಳೀಯ ದೇವಾಲಯಕ್ಕೆ ಭೇಟಿ ನೀಡಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ 25 ಫಲಾನುಭವಿಗಳಿಗೆ ಪಿಂಚಣಿ ಪತ್ರಗಳನ್ನು ವಿತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು