ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತಾವ ಬಂದರೆ ಪ್ರತ್ಯೇಕ ಹಾಲು ಒಕ್ಕೂಟ: ಎಸ್.ಟಿ.ಸೋಮಶೇಖರ್

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭರವಸೆ
Last Updated 5 ಏಪ್ರಿಲ್ 2022, 15:49 IST
ಅಕ್ಷರ ಗಾತ್ರ

ಶಿರಸಿ: ‘ಉತ್ತರ ಕನ್ನಡಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸುವಂತೆ ಜಿಲ್ಲೆಯ ಜನಪ್ರತಿನಿಧಿಗಳಿಂದ ಪ್ರಸ್ತಾವ ಸಲ್ಲಿಕೆಯಾದರೆ, ವಾರದೊಳಗೆ ಒಕ್ಕೂಟ ರಚನೆಗೆ ಆದೇಶ ಹೊರಡಿಸಲಾಗುವುದು’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭರವಸೆ ನೀಡಿದರು.

ತಾಲ್ಲೂಕಿನ ಹನುಮಂತಿಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಹಾಲು ಪ್ಯಾಕಿಂಗ್ ಘಟಕವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಹೈನುಗಾರಿಕೆ, ಸಹಕಾರ ಕ್ಷೇತ್ರದಲ್ಲಿ ಈ ಜಿಲ್ಲೆ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಬೇಡಿಕೆ ಇಟ್ಟರೆ ಅದು ಸಮಂಜಸವೂ ಆಗಲಿದೆ’ ಎಂದರು.

‘ರಾಜ್ಯದಲ್ಲಿ ಹೈನುಗಾರಿಕಾ ಕ್ಷೇತ್ರ ಇನ್ನಷ್ಟು ಸದೃಢಗೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೈನುಗಾರರಿಗೆ ಪ್ರೋತ್ಸಾಹ ಹೆಚ್ಚಿಸಲಾಗುವುದು. ಹೈನುಗಾರ ಮಹಿಳೆಯರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು’ ಎಂದರು.

ಹಾಲು ಪ್ಯಾಕಿಂಗ್ ವಿಭಾಗ ಉದ್ಘಾಟಿಸಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ‘ಹೈನುಗಾರಿಕೆ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿಸಾಧಿಸಲಿಲ್ಲ ಎಂಬಕೊರಗೂ ಇದೆ. ಕರಾವಳಿ ಭಾಗದಲ್ಲಿ ಹಾಲು ಉತ್ಪಾದನೆ ಕೊರತೆ ಇದೆ. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಬೇಕಾದ ಸೌಲಭ್ಯ, ಹಾಲು ಉತ್ಪಾದನೆ ಪ್ರಮಾಣ ಏರಿಕೆಯಾಗಬೇಕಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಹಾಲಿಗೆ ಸಹಾಯಧನ ಲಭಿಸುತ್ತಿರುವ ಪರಿಣಾಮ ಉತ್ಪಾದನೆ ಪ್ರಮಾಣ ವೃದ್ಧಿಸಿದೆ. ಗುಣಮಟ್ಟದ ಹಾಲುನೀಡುವುದು ಆದ್ಯತೆಯಾಗಲಿ. ಸ್ವದೇಶಿ ತಳಿಯ ಗೋವುಗಳನ್ನು ಬೆಳೆಸಲು ಪ್ರೇರೇಪಿಸಿ’ ಎಂದರು.

ಧಾಮುಲ್ ಅಧ್ಯಕ್ಷ ಶಂಕರಪ್ಪ ಮುಗದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಸ್ವಾಗತಿಸಿದರು.

ಕೆ.ಎಂ.ಎಫ್. ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ಸಹಕಾರ ಸಂಘಗಳ ಜಂಟಿ ಆಯುಕ್ತ ಜಿ.ಎಂ.ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಂ.ಲೋಹಿತೇಶ್ವರ, ಧಾಮುಲ್ ನಿರ್ದೇಶಕರಾದ ನೀಲಕಂಠಪ್ಪ ಅಸೂಟಿ, ಶಂಕರ ಹೆಗಡೆ, ಪಿ.ವಿ.ನಾಯ್ಕ, ಸಹಕಾರ ಧುರೀಣರಾದ ಶ್ರೀಪಾದ ಹೆಗಡೆ, ಶಂಭುಲಿಂಗ ಹೆಗಡೆ, ಉಪವಿಭಾಗಾಧಿಕಾರಿ ದೇವರಾಜ ಆರ್., ಹುಣಸೆಕೊಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಶಾಂತ ಗೌಡರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT