ಬಿತ್ತನೆ ಬೀಜ ಸಮರ್ಪಕವಾಗಿ ಪೂರೈಸಲು ಮನವಿ

ಕಾರವಾರ: ಮುಂಗಾರು ಹಂಗಾಮಿಗೆ ರಿಯಾಯಿತಿ ದರದಲ್ಲಿ ನೀಡುವ ಭತ್ತದ ಬಿತ್ತನೆ ಬೀಜಗಳನ್ನು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ರೈತರಿಗೆ ಸಮರ್ಪಕವಾಗಿ ಪೂರೈಸಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಮನವಿ ಮಾಡಿದ್ದಾರೆ.
ಸಚಿವರನ್ನು ಸೋಮವಾರ ಶಿರಸಿಯಲ್ಲಿ ಭೇಟಿ ಮಾಡಿದ ಅವರು, ‘ಕಳೆದ ವರ್ಷ ಆಗಸ್ಟ್ನಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ರೈತರು ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡಬೇಕು. ಸ್ಥಳೀಯ ತಳಿಗಳ ಭತ್ತವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ಮತ್ತೊಂದು ಪತ್ರದಲ್ಲಿ ರೈತರ ವಿವಿಧ ಬೇಡಿಕೆಗಳು ಹಾಗೂ ತೋಟಗಾರಿಕಾ ಬೆಳೆಗಳಿಗೆ ಮಾರುಕಟ್ಟೆ ಒದಗಿಸುವಂತೆ ಕೋರಿದ್ದಾರೆ. ಕ್ಷೇತ್ರದಲ್ಲಿ ಕಲ್ಲಂಗಡಿ ಹಾಗೂ ಮಾವಿನ ಬೆಳೆಗಳು ಪ್ರಮುಖವಾಗಿವೆ. ಲಾಕ್‌ಡೌನ್ ಇರುವುದರಿಂದ ಮಾರುಕಟ್ಟೆ ಸಮಸ್ಯೆ ಉಲ್ಬಣವಾಗಿದೆ ಎಂದು ಗಮನ ಸೆಳೆದಿದ್ದಾರೆ.
ಕೃಷಿ ಭೂಮಿಗಳಿಗೆ ಉಪ್ಪುನೀರು ನುಗ್ಗುವುದನ್ನು ತಡೆಯಲು ಬಾಂದಾರ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಗೆ ಶಿಫಾರಸು ಮಾಡಬೇಕು. ಕ್ಷೇತ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬಲವರ್ಧನೆ ಮಾಡಿ ರೈತಸ್ನೇಹಿಯಾಗಿ ಪರಿವರ್ತನೆ ಮಾಡಲೂ ಕೋರಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.