ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾನಕ್ಕೆ ಸ್ಥಳ, ಸಮಯ, ಸಂದರ್ಭ ಮುಖ್ಯ’

Last Updated 13 ಆಗಸ್ಟ್ 2022, 16:08 IST
ಅಕ್ಷರ ಗಾತ್ರ

ಕಾರವಾರ: ‘ದಾನವು ಲಕ್ಷ್ಮಿಯ ಶ್ರೇಷ್ಠ ರೂಪ. ಸತ್ಕಾರ್ಯಗಳಿಗೆ ನೀಡುವ ದಾನ ನಮಗೆ ಪುಣ್ಯಫಲ ನೀಡುತ್ತದೆ. ದಾನವು ದುರ್ವಿನಿಯೋಗವಾದರೆ ಅದರ ಪಾಪ ನಮಗೂ ತಟ್ಟುತ್ತದೆ. ಆದ್ದರಿಂದ ಸ್ಥಳ, ಸಮಯ, ಸಂದರ್ಭ ನೋಡಿ ಯೋಗ್ಯರಾದವರಿಗೆ ದಾನ ಮಾಡಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಜಿ ಹೇಳಿದರು.

ಗೋಕರ್ಣದ ಅಶೋಕೆಯಲ್ಲಿ ಹಮ್ಮಿಕೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ನಡೆದ ‘ದಾನ- ಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸತ್ಪಾತ್ರರಿಗೆ ದಾನ ಮಾಡಿದ ಬಳಿಕ ಉಳಿದದ್ದನ್ನು ಅನುಭವಿಸಬೇಕು ಎಂದು ಶಾಸ್ತ್ರ ಹೇಳುತ್ತದೆ. ಕೊಟ್ಟು ತಿನ್ನುವುದು ಭಾರತೀಯ ಸಂಸ್ಕೃತಿ’ ಎಂದು ಹೇಳಿದರು.

‘ನಮ್ಮದು ಎಂದು ಭಾವಿಸಿದ್ದನ್ನು ಬಿಟ್ಟುಕೊಡುವ ಕಾರ್ಯ ಸಣ್ಣದಲ್ಲ. ಆದ್ದರಿಂದ ದಾನ ಎಲ್ಲಕ್ಕಿಂತ ಕಠಿಣ. ದಾನದ ಮುಂದಿನ ಹೆಜ್ಜೆಯೇ ಮಾನ. ನಮಗೆ ಜೀವನವನ್ನು ಕೊಟ್ಟ ಭಗವಂತ ಸದಾ ನಮ್ಮನ್ನು ಅಳೆಯುತ್ತಾ ಇರುತ್ತಾನೆ. ಆತನ ಅಳತೆಯಲ್ಲಿ ನಾವೆಂದೂ ಕಡಿಮೆಯಾಗಬಾರದು’ ಎಂದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ‘ನಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜಕ್ಕೆ ನೀಡಬೇಕು. ದಾನವನ್ನು ಎಲ್ಲಿ ಕೊಡಬೇಕು, ಯಾವ ಕಾರ್ಯಕ್ಕೆ ಕೊಡಬೇಕು ಎಂಬ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳುವುದು ಅತ್ಯಂತ ಮುಖ್ಯ’ ಎಂದು ಹೇಳಿದರು.

ಈ ಪ್ರದೇಶದ ಖಾರ್ವಿ ಸಮಾಜದಿಂದ ಸ್ವಾಮೀಜಿ ಪಾದಪೂಜೆ ನೆರವೇರಿಸಲಾಯಿತು. ಮಠದ ಪಾರಂಪರಿಕ ಶಿಷ್ಯರಾದ 18 ಸಮುದಾಯದವರೂ ಚಾತುರ್ಮಾಸ್ಯ ಸಂದರ್ಭದಲ್ಲಿ ತಮ್ಮ ಸಮಾಜದ ಸೇವೆ ಸಮರ್ಪಣೆ ಮಾಡುತ್ತಿದ್ದಾರೆ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾರ್ಕೂರಿನ ತಾಮರಸ ಕೂಟದವರಿಂದ ‘ದಂಡಕ ದಮನ’ ಯಕ್ಷಗಾನ ತಾಳಮದ್ದಳೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT