ಬುಧವಾರ, ಸೆಪ್ಟೆಂಬರ್ 29, 2021
20 °C
ನರೇಗಾ ಯೋಜನೆಯ ಒಂಬುಡ್ಸಮನ್ ಆರ್.ಜಿ.ನಾಯಕ ಅಸಮಾಧಾನ

ಅಧಿಕಾರಿಗಳ ನಿರ್ಲಕ್ಷ್ಯ: ಯೋಜನೆ ಕುಂಠಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ‘ಅಧಿಕಾರಿಗಳ ನಿರ್ಲಕ್ಷ್ಯದಿಂದ ನರೇಗಾ ಯೋಜನೆ ನಿರೀಕ್ಷೆಗಿಂತ ಕಡಿಮೆ ಪ್ರಗತಿ ಸಾಧಿಸುತ್ತಿದೆ’ ಎಂದು ನರೇಗಾ ಒಂಬುಡ್ಸಮನ್ ಆರ್.ಜಿ.ನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನರೇಗಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಯೋಜನೆ ಜಾರಿಯಾಗಿ ಒಂದೂವರೆ ದಶಕ ಕಳೆದರೂ ಹೆಚ್ಚಿನವರು ನರೇಗಾ ಲಾಭ ಪಡೆಯುತ್ತಿಲ್ಲ. ಯೋಜನೆ ಕುರಿತು ಸಾರ್ವಜನಿಕರಿಗೆ ಇರುವ ಮಾಹಿತಿ ಕೊರತೆಯೂ ಇದಕ್ಕೆ ಕಾರಣ’ ಎಂದರು.

‘2020–21ನೇ ಸಾಲಿನಲ್ಲಿ ಶಿರಸಿ ತಾಲ್ಲೂಕಿನ 32 ಗ್ರಾಮ ಪಂಚಾಯ್ತಿ ಸೇರಿ ₹75 ಕೋಟಿ ಮೊತ್ತದ ಕ್ರಿಯಾಯೋಜನೆ ಸಿದ್ಧಪಡಿಸಿದ್ದರೂ ಕೇವಲ ₹7 ಕೋಟಿ ಮೊತ್ತದ ಕೆಲಸ ಆಗಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದೆ’ ಎಂದರು.

‘260 ಬಗೆಯ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಯೋಜನೆಯ ಬಗ್ಗೆ ಅನುಷ್ಠಾನಾಧಿಕಾರಿಗಳು ಮೊದಲು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಆಟದ ಮೈದಾನ, ಶಾಲೆಗಳ ಕಾಂಪೌಂಡ್‌ ನಿರ್ಮಾಣಕ್ಕೂ ಆದ್ಯತೆ ಕೊಡಬೇಕು’ ಎಂದರು.

ತಾಲ್ಲೂಕಿನ ಗ್ರಾಮೀಣ ಜನಸಂಖ್ಯೆಯ ಅರ್ಧದಷ್ಟು ಮಂದಿಗೂ ಉದ್ಯೋಗ ಚೀಟಿ ವಿತರಣೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ಗ್ರಾಮ ಪಂಚಾಯ್ತಿಮಟ್ಟದಲ್ಲಿ ನರೇಗಾ ಅಡಿ ಕೈಗೊಳ್ಳಬಹುದಾದ ಕೆಲಸಗಳ ಬಗ್ಗೆ ಅ.15ರ ಒಳಗೆ ಪಟ್ಟಿ ನೀಡಿ ಎಂದು ಕೃಷಿ, ತೋಟಗಾರಿಕೆ, ಶಿಕ್ಷಣ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಆರ್‌.ಜಿ.ನಾಯಕ ಅವರು ಸೂಚಿಸಿದರು.‌‌ ತಾಲ್ಲೂಕು ಪಂಚಾಯ್ತಿ ಇಒ ಎಫ್.ಜಿ.ಚೆನ್ನಣ್ಣನವರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು