ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಹಳ್ಳಿ ಮನೆ ಎದುರು ಬೈಕ್ ನಿಲ್ಲಿಸಿ ಪಾಠ ಮಾಡುವ ಶಿಕ್ಷಕ

ಮನೆ ಬಾಗಿಲಲ್ಲಿ ‘ಮೊಬೈಲ್ ಶಾಲೆ’
Last Updated 30 ಜುಲೈ 2020, 11:22 IST
ಅಕ್ಷರ ಗಾತ್ರ

ಶಿರಸಿ: ಮೊಬೈಲ್ ಇಲ್ಲದ, ನೆಟ್‌ವರ್ಕ್ ಸಿಗದ ಕುಗ್ರಾಮಗಳ ಮಕ್ಕಳು ಅಕ್ಷರದ ಹಿಡಿತದಿಂದ ಮಣ್ಣಿನ ಸೆಳೆತಕ್ಕೆ ಒಳಗಾಗಬಾರದೆಂಬ ಕಳಕಳಿಯಿಂದ ಶಿಕ್ಷಕರೊಬ್ಬರು ವಿನೂತನ ಮಾದರಿಯ ‘ಮೊಬೈಲ್ ಶಾಲೆ’ ಪ್ರಾರಂಭಿಸಿದ್ದಾರೆ.

ಕೋವಿಡ್ 19 ಹಿನ್ನೆಲೆಯಲ್ಲಿ, ಶಾಲೆಗಳು ಪ್ರಾರಂಭವಾಗದ ಕಾರಣಕ್ಕೆ, ತಾಲ್ಲೂಕಿನ ತಿಗಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಾರುತಿ ಉಪ್ಪಾರ ಅವರು, ಬೈಕ್‌ ಮೇಲೆ ‘ಮೊಬೈಲ್ ಶಿಕ್ಷಣ’ ಪೆಟ್ಟಿಗೆ ಏರಿಸಿಕೊಂಡು, ಮಕ್ಕಳ ಮನೆ ಬಾಗಿಲಿಗೇ ಹೋಗಿ ಪಾಠ ಮಾಡುತ್ತಿದ್ದಾರೆ. ನಲಿ–ಕಲಿ, ಕಲಿ–ನಲಿ ಪಠ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲ ಪರಿಕರಗಳು ಈ ಮೊಬೈಲ್ ಪೆಟ್ಟಿಗೆಯಲ್ಲಿ ಇರುತ್ತವೆ.

‘ಎಲ್ಲ ಕಡೆಗಳಂತೆ ನಾವು ಕೂಡ ಮಕ್ಕಳಿಗೆ ಮನೆಯಿಂದ ಪಾಠ, ಹೋಂವರ್ಕ್ ಮಾಡಿಸಲು ಶುರುಮಾಡಿದೆವು. ಕೂಲಿ ಕಾರ್ಮಿಕರೇ ಹೆಚ್ಚಿರುವ ಊರಿನಲ್ಲಿ ಬಹುತೇಕ ಮಕ್ಕಳಿಗೆ ಮನೆಪಾಠ ತಲುಪುತ್ತಿರಲಿಲ್ಲ. ನಮ್ಮ ಶಾಲೆಯ 86 ಮಕ್ಕಳಲ್ಲಿ 30ರಷ್ಟು ಮಕ್ಕಳಿಗೆ ಮಾತ್ರ ಎಂಡ್ರಾಯ್ಡ್ ಮೊಬೈಲ್ ಸೌಲಭ್ಯ ಇದೆ. ಅದರಲ್ಲೂ ಕೆಲವರು ಅಕ್ಕಪ‌ಕ್ಕದವರ ಮೊಬೈಲ್ ಬಳಸಿಕೊಂಡು ಹೋಂವರ್ಕ್ ಮಾಡುತ್ತಿದ್ದರು. ಹೀಗಾಗಿ, ಮೊಬೈಲ್ ಮೂಲಕ ಶಿಕ್ಷಣ ಸಾಧ್ಯವಾಗಲಿಲ್ಲ. ಮಕ್ಕಳ ಮನೆಗೆ ಭೇಟಿ ನೀಡಿದಾಗ, ಕೆಲವರು ಅಕ್ಷರವನ್ನೇ ಮರೆತಿದ್ದು ಅನುಭವಕ್ಕೆ ಬಂತು. ಇನ್ನು ಕೆಲವರು ಶಿಕ್ಷಣದಿಂದ ವಿಮುಖರಾಗಿ, ಪಾಲಕರೊಂದಿಗೆ ಕೂಲಿಗೆ ಹೋಗಲು ಆಸಕ್ತರಾಗಿದ್ದರು. ಇದನ್ನು ಗಮನಿಸಿ, ಶಿಕ್ಷಣದ ಹೊಸ ಮಾರ್ಗ ಕಂಡುಕೊಂಡೆ’ ಎನ್ನುತ್ತಾರೆ ಮಾರುತಿ ಉಪ್ಪಾರ.

‘ಆರಂಭದಲ್ಲಿ ಬರಿಗೈಯಲ್ಲಿ ಮಕ್ಕಳ ಮನೆಗೆ ಹೋಗುತ್ತಿದ್ದೆ. ಸಮಸ್ಯೆಗಳು ಬಂದಾಗ ಅವರಿಗೆ ತಿಳಿಸಿ ಹೇಳುವುದು ಕಷ್ಟವಾಯಿತು. ಆಗ, ಪಾಠೋಪಕರಣದ ಮೂಲಕ ಕಲಿಸುವ ಯೋಚನೆ ಹೊಳೆಯಿತು. ಕಲಿಕಾ ಸಾಮಗ್ರಿಗಳು, ರಟ್ಟಿನ ಚಾರ್ಟ್, ಲೆಕ್ಕ ಮಾಡಲು ಕಡ್ಡಿ, ಕಾಳು, ಮಣಿಗಳು, ಗಣಿತದ ಕಿಟ್ ಎಲ್ಲವನ್ನೂ ಜೊತೆ ಒಯ್ಯುತ್ತೇನೆ. ಆಟದೊಂದಿಗೆ ಪಾಠ ಆರಂಭಿಸಿದೆ. ಮೊದಲು ಬೈಕ್ ಬಂದಾಕ್ಷಣ ಓಡುತ್ತಿದ್ದ ಮಕ್ಕಳು, ಈಗ ಬೈಕ್ ಹಾರ್ನ್ ಕೇಳಿದರೆ, ಓಡೋಡಿ ಬರುತ್ತಾರೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT