ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ರಸ್ತೆ ನಿರ್ಮಾಣದ ಪ್ರಸ್ತಾವ: ರಾಜೇಂದ್ರ ಕುಮಾರ್ ಗುಪ್ತಾ

ಪ್ರವಾಹ ಸಂದರ್ಭದಲ್ಲಿ ರಕ್ಷಣೆ: ಎನ್.ಡಿ.ಆರ್.ಎಫ್‌.ನಿಂದ ಅಣಕು ಕಾರ್ಯಾಚರಣೆ
Last Updated 29 ಸೆಪ್ಟೆಂಬರ್ 2021, 14:40 IST
ಅಕ್ಷರ ಗಾತ್ರ

ಕಾರವಾರ: ‘ಮಲ್ಲಾಪುರ ಟೌನ್‌ಶಿಪ್‌ನಿಂದ ಕೈಗಾ ಅಣುವಿದ್ಯುತ್ ಸ್ಥಾವರಕ್ಕೆ ಪರ್ಯಾಯ ರಸ್ತೆ ನಿರ್ಮಿಸುವ ಪ್ರಸ್ತಾವವು ನಮ್ಮ ಮುಂದಿದೆ. ಆ ಕಾಮಗಾರಿ ಮಾಡುತ್ತೇವೆ’ ಎಂದು ಕೈಗಾದ ಅಣು ವಿದ್ಯುತ್ ಸ್ಥಾವರ ಸ್ಥಾನಿಕ ನಿರ್ದೇಶಕ ರಾಜೇಂದ್ರ ಕುಮಾರ್ ಗುಪ್ತಾ ಹೇಳಿದ್ದಾರೆ.

ತಾಲ್ಲೂಕಿನ ವಿರ್ಜೆಯಲ್ಲಿ ಬುಧವಾರ ಪ್ರವಾಹ ಸಂದರ್ಭದಲ್ಲಿ ರಕ್ಷಣೆಯ ಅಣಕು ಕಾರ್ಯಾಚರಣೆಯನ್ನು ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಎನ್.ಡಿ.ಆರ್.ಎಫ್, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಪೊಲೀಸ್ ಮತ್ತು ಗೃಹರಕ್ಷಕ ದಳದಿಂದ ಈ ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು.

‘ಎರಡು ವರ್ಷಗಳಿಂದ ಕದ್ರಾ, ಮಲ್ಲಾಪುರ ಭಾಗದಲ್ಲಿ ಪ್ರವಾಹವಾಗುತ್ತಿದೆ. ರಸ್ತೆಗಳು ಮುಳಗಡೆಯಾಗಿ ಅಣು ವಿದ್ಯುತ್ ಸ್ಥಾವರದ ಸಿಬ್ಬಂದಿಯ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆಯಲ್ಲ’ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ಎರಡು ವರ್ಷಗಳಿಂದ ಈ ಭಾಗದಲ್ಲಿ ಪ್ರವಾಹವಾಗುತ್ತಿದೆ. ಹಾಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್.ಡಿ.ಆರ್.ಎಫ್) ಬೆಟಾಲಿಯನ್ ಅನ್ನು ಜಿಲ್ಲೆಯಲ್ಲಿ ಸ್ಥಾಪಿಸುವ ವಿಚಾರವಾಗಿ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗುವುದು. ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದೂ ತಿಳಿಸಿದರು.

‘ಕೈಗಾದ ವ್ಯಾಪ್ತಿಯಲ್ಲಿ ಈ ವರ್ಷ ಭೂ ಕುಸಿತವಾಗಿದ್ದರೂ ವಿದ್ಯುತ್ ಸ್ಥಾವರಕ್ಕೆ ಹಾನಿಯಾಗಿಲ್ಲ. ಅದರಿಂದ ಏನೂ ತೊಂದರೆಯೂ ಇಲ್ಲ. ಈ ವರ್ಷ ಪ್ರವಾಹ ಬಂದಾಗಲೂ ಎಲ್ಲ ನಾಲ್ಕು ಘಟಕಗಳೂ ಕಾರ್ಯ ನಿರ್ವಹಿಸುತ್ತಿದ್ದವು. ಮುಂದಿನ ದಿನಗಳಲ್ಲಿ ನೆರೆ ಬರಬಾರದು. ಒಂದುವೇಳೆ ಬಂದರೆ ಏನು ಮಾಡಬೇಕು ಎಂಬ ಬಗ್ಗೆ ಕಾರ್ಯ ಯೋಜನೆ ಹೊಂದಿದ್ದೇವೆ. ಅವುಗಳ ಜಾರಿಯ ಬಗ್ಗೆ ಗಮನ ಹರಿಸುತ್ತೇವೆ’ ಎಂದು ತಿಳಿಸಿದರು.

‘ಕೈಗಾ ಸ್ಥಾವರಕ್ಕೆ ಸಂಬಂಧಿಸಿದ ಉದ್ಯೋಗಗಳಲ್ಲಿ ಸ್ಥಳೀಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪವಿದೆ’ ಎಂದು ಗಮನ ಸೆಳೆದಾಗ, ‘ಇದು ಸುಳ್ಳು ಆರೋಪವಾಗಿದೆ. ಉದ್ಯೋಗಗಳಲ್ಲಿ ಸ್ಥಳೀಯರಿಗೇ ಆದ್ಯತೆ ನೀಡಲಾಗುತ್ತಿದೆ. ಹೊರಗಿನವರು ಇಲ್ಲ’ ಎಂದು ಹೇಳಿದರು.

‘ಸ್ಥಳೀಯರಿಗೂ ತರಬೇತಿ’:ಅಣಕು ಕಾರ್ಯಾಚರಣೆಯಲ್ಲಿ ಆಂಧ್ರಪದೇಶದ ಗುಂಟೂರಿನ 10ನೇ ಎನ್.ಡಿ.ಆರ್.ಎಫ್ ಬೆಟಾಲಿಯನ್‌ನ 24 ಸದಸ್ಯರು ಭಾಗವಹಿಸಿದ್ದರು. ಕಾರ್ಯಾಚರಣೆಯ ಬಗ್ಗೆ ಬೆಟಾಲಿಯನ್ ಇನ್ಸ್‌ಪೆಕ್ಟರ್ ಜಿ.ಡಿ.ಸಂಜೀವಕುಮಾರ್ಮಾಹಿತಿ ನೀಡಿದರು.

‘ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಮಳೆಗಾಲದ ಅವಧಿಯಲ್ಲಿ ನಮ್ಮ ತಂಡಗಳು ಮೊದಲೇ ನಿಯುಕ್ತಿಯಾಗಿರುತ್ತವೆ. ಮಂಗಳೂರಿನಲ್ಲಿದ್ದ ನಮ್ಮ ತಂಡವು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಪ್ರಾತ್ಯಕ್ಷಿಕೆ ನೀಡಿದೆ. ತುರ್ತು ಸನ್ನಿವೇಶಗಳಲ್ಲಿ ರಕ್ಷಣೆಯ ಬಗ್ಗೆ ಸ್ಥಳೀಯರಿಗೂ ಅರಿವು ಮೂಡಿಸಿ ತರಬೇತಿ ನೀಡಲಾಗುತ್ತದೆ’ ಎಂದು ತಿಳಿಸಿದರು.

ವಿರ್ಜೆಯಲ್ಲಿ ಕದ್ರಾ ಜಲಾಶಯದ ಹಿನ್ನೀರಿನಲ್ಲಿ ನಡೆದ ಅಣಕು ಕಾರ್ಯಾಚರಣೆಯಲ್ಲಿ, ಪ್ರವಾಹದ ಸಂದರ್ಭದಲ್ಲಿ ಜನರ ರಕ್ಷಣೆಯ ವಿವಿಧ ವಿಧಾನಗಳನ್ನು ಪ್ರದರ್ಶಿಸಲಾಯಿತು.

ಅಣು ವಿದ್ಯುತ್ ಸ್ಥಾವರದ ಒಂದು ಮತ್ತು ಎರಡನೇ ಘಟಕಗಳ ನಿರ್ದೇಶಕ ಪಿ.ಜಿ.ರಾಯಚೂರು, ತಹಶೀಲ್ದಾರ್ ನಿಶ್ಚಲ್ ನರೋನಾ, ಡಿ.ವೈ.ಎಸ್.ಪಿ ಅರವಿಂದ ಕಲಗುಜ್ಜಿ, ಯಲ್ಲಾಪುರ ಅಗ್ನಿಶಾಮಕದ ದಳದ ಅಧಿಕಾರಿ ಶಂಕರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣಾ, ಗೃಹರಕ್ಷಕ ದಳದ ಸಿಬ್ಬಂದಿ ಇದ್ದರು.

***

ಕೈಗಾದ 5, 6ನೇ ಘಟಕಗಳ ಕಾಮಗಾರಿಯು ಮುಂದಿನ ವರ್ಷ ಆರಂಭವಾಗಬೇಕಿದೆ. ಇದರ ಪ್ರಸ್ತಾವವು ಭಾರತೀಯ ಅಣುಶಕ್ತಿ ನಿಯಂತ್ರಣ ಮಂಡಳಿಯ ಮುಂದಿದೆ.

- ರಾಜೇಂದ್ರ ಕುಮಾರ್ ಗುಪ್ತಾ, ಸ್ಥಾನಿಕ ನಿರ್ದೇಶಕ, ಕೈಗಾ ಅಣು ವಿದ್ಯುತ್ ಸ್ಥಾವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT