ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಧರಣಿ

7
ಸುರಿಯುತ್ತಿದ್ದ ಮಳೆಯಲ್ಲೇ ಐದು ಕಿ.ಮೀ ಸಾಗಿದ ಮೊಗೇರ ಸಮಾಜದವರ ಪ್ರತಿಭಟನಾ ಮೆರವಣಿಗೆ

ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಧರಣಿ

Published:
Updated:
Deccan Herald

ಭಟ್ಕಳ (ಉತ್ತರ ಕನ್ನಡ): ಪರಿಶಿಷ್ಟ ಜಾತಿಯ ಸಿಂಧುತ್ವ ಪ್ರಮಾಣ ಪತ್ರಕ್ಕೆ ಒತ್ತಾಯಿಸಿ, ಮೊಗೇರ ಸಮಾಜದವರು ಪಟ್ಟಣದಲ್ಲಿ ಸೋಮವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು. 

ಸುರಿಯುತ್ತಿದ್ದ ಭಾರಿ ಮಳೆಯನ್ನೂ ಲೆಕ್ಕಿಸದೇ ಐದು ಕಿ.ಮೀ ನಡೆದುಕೊಂಡು ಸಾಗಿ, ತಹಶೀಲ್ದಾರ್ ಕಚೇರಿ ಎದುರು ಧರಣಿ ಕುಳಿತರು. 

ಇಲ್ಲಿನ ವೆಂಕಟಾಪುರದ ಶ್ರೀನಿವಾಸ ಸಭಾಗೃಹದಿಂದ ಹೊರಟ 10 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು, ಮೆರವಣಿಗೆಯುದ್ದಕ್ಕೂ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಮೊಗೇರ ಸಮಾಜದ ಅಧ್ಯಕ್ಷ ಕೆ.ಎಂ.ಕರ್ಕಿ, ‘2008ಕ್ಕೂ ಮೊದಲು, ನಮ್ಮ ಸಮಾಜಕ್ಕೆ ಪರಿಶಿಷ್ಟ ಜಾತಿಯ ಸಿಂಧುತ್ವ ಪ್ರಮಾಣಪತ್ರ ನೀಡಲಾಗುತ್ತಿತ್ತು. ಆದರೆ, ಇದನ್ನು ಅಧಿಕಾರಿಗಳು ಮುಂದುವರಿಸಲಿಲ್ಲ. ಈ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಸಿಂಧುತ್ವ ಪ್ರಮಾಣಪತ್ರವನ್ನು ರದ್ದು ಮಾಡುವ ಅಧಿಕಾರ ಯಾವುದೇ ಅಧಿಕಾರಿಗಳಿಗಿಲ್ಲ ಎಂದು ಹೇಳಿತ್ತು’ ಎಂದು ತಿಳಿಸಿದರು.

‘ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಆಧಾರದ ಮೇಲೆ ಹೈಕೋರ್ಟ್ ಕೂಡ ಪರಿಶಿಷ್ಟ ಜಾತಿಯ ಸಿಂಧುತ್ವ ಪ್ರಮಾಣಪತ್ರ ನೀಡಲು ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ, ಸಮಾಜಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿ, ನ್ಯಾಯಾಲಯಗಳ ಆದೇಶವನ್ನು ಧಿಕ್ಕರಿಸಿದ್ದಾರೆ. ಪ್ರಮಾಣಪತ್ರ ನೀಡದೇ ಸಮಾಜಕ್ಕೆ ಅನ್ಯಾಯ ಎಸಗಿದ್ದಾರೆ’ ಎಂದು ದೂರಿದರು.

ವಕೀಲ ನಾಗರಾಜ ಈ.ಎಚ್ ಅವರೂ ಅಧಿಕಾರಿಗಳ ಧೋರಣೆ ಖಂಡಿಸಿದರು. ನಂತರ ತಹಶೀಲ್ದಾರ್ ವಿ.ಎನ್.ಬಾಡಕರ ಅವರಿಗೆ ಮನವಿ ಸಲ್ಲಿಸಲಾಯಿತು.

‘ಪರಿಶಿಷ್ಟ ಜಾತಿಯವರಾದ ಮೊಗೇರ ಸಮಾಜದ ಹೆಸರನ್ನು ಅಸಾಂವಿಧಾನಿಕವಾಗಿ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದನ್ನು ರದ್ದುಗೊಳಿಸಿ, ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಮಾಜದ ಪ್ರಮುಖರು, ಸಾವಿರಾರು ಮಹಿಳೆಯರು, ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !