ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹನಿಗೆ ಕಾದು ಕುಳಿತ ಇಳೆ

ಜೂನ್ 7ರಂದು ಮುಂಗಾರು ಮಾರುತಗಳು ರಾಜ್ಯ ಪ್ರವೇಶಿಸುವ ನಿರೀಕ್ಷೆ
Last Updated 27 ಮೇ 2019, 12:11 IST
ಅಕ್ಷರ ಗಾತ್ರ

ಕಾರವಾರ:ಸೂರ್ಯೋದಯವಾಗಿ ಸ್ವಲ್ಪ ಹೊತ್ತಿಗೇಬೆವರು ಇಳಿಯಲು ಶುರುವಾಗುತ್ತದೆ. 11 ಗಂಟೆಯ ನಂತರ ಸಂಜೆ 5ರವರೆಗೂ ಮನೆಯಿಂದ ಹೊರಗೆ ಬರುವುದೇ ಬೇಡ ಎನ್ನುವಷ್ಟು ಬಿಸಿಲು ಇರುತ್ತದೆ. ಆದರೆ, ವಿದ್ಯುತ್ ಕೈಕೊಟ್ಟರೆ ತನ್ನಿಂತಾನೇ ಮನೆಯಿಂದ ಹೊರಗೆ ಬರಬೇಕಾದಂತಹ ಸ್ಥಿತಿ ಉಂಟಾಗುತ್ತದೆ!

ಜಿಲ್ಲೆಯ ಕರಾವಳಿಯಲ್ಲಿಸದ್ಯದ ವಾತಾವರಣವಿದು.ಮುಂಗಾರು ಮಾರುತಗಳು ರಾಜ್ಯದ ಕರಾವಳಿ ಪ್ರವೇಶಿಸಲು ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಅದರ ಮುಂಚಿತವಾಗಿ ಜಿಲ್ಲೆಯ ಕರಾವಳಿಯಲ್ಲಿ ಒಂದು ವಾರದಿಂದ ತಾಪಮಾನ ಮತ್ತಷ್ಟು ಏರಿಕೆಯಾಗಿದೆ. ಕರಾವಳಿಯಲ್ಲಿ ಮುಂಗಾರು ಪೂರ್ವದಲ್ಲಿ ಬೀಳುವ ಮಳೆ ಈ ವರ್ಷ ಇನ್ನೂ ಜೋರಾಗಿ ಆಗಿಲ್ಲ. ಬೆಳಿಗ್ಗೆ ಹಾಗೂ ಸಂಜೆ ಮೋಡಗಳು ಮೇಳೈಸುತ್ತವೆ. ಆದರೆ, ಗಾಳಿ ಬೀಸುತ್ತಲೇ ದೂರ ಸಾಗುತ್ತಿವೆ. ಒಂದೆರಡು ಉತ್ತಮ ಮಳೆಯಾಗಿವಾತಾವರಣ ತಂಪಾದರೆ ಸಾಕು ಎಂದು ಕರಾವಳಿಯ ಜನರು ಕಾಯುತ್ತಿದ್ದಾರೆ.

ಹವಾಮಾನ ಇಲಾಖೆ ಹೇಳಿರುವಂತೆ ಮುಂಗಾರು ಮಾರುತಗಳುಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ನಿಗದಿಯಂತೆ ಮೇ 18ರಂದೇ ಪ್ರವೇಶಿಸಿವೆ. ಆದರೆ, ಚಂಡಮಾರುತಗಳ ಕಾರಣದಿಂದಾಗಿ ಕೇರಳ ಪ್ರವೇಶಕ್ಕೆ ವಿಳಂಬವಾಗಿದ್ದು,ಜೂನ್ಒಂದು ಅಥವಾ ಎರಡನೇ ತಾರೀಕಿಗೆ ಬರಬಹುದು.ಜೂನ್ 7 ಅಥವಾ 8ರಂದು ಉತ್ತರ ಕನ್ನಡವೂ ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ಮಳೆಗಾಲ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳುಮಾಹಿತಿ ನೀಡಿದ್ದಾರೆ.

‘ಸದ್ಯ ಅರಬ್ಬಿ ಸಮುದ್ರದ ವಾಯವ್ಯ ಮೇಲ್ಮೈಯಲ್ಲಿ ಗಾಳಿ ಬಲವಾಗಿದೆ. ನೈಋತ್ಯ ಭಾಗದಿಂದ ಗಾಳಿ ಪ್ರಬಲವಾಗಿ ಬೀಸಿದಾಗ ಮುಂಗಾರು ಮಾರುತಗಳು ಉಂಟಾಗುತ್ತವೆ. ಈಗಿನ ಅಂದಾಜಿನ ಪ್ರಕಾರ ಮುಂಗಾರಿನಲ್ಲಿ ಶೇ 96ರಷ್ಟು ಮಳೆಯಾಗಲಿದೆ. ಇದರಲ್ಲಿ ಶೇ 10ರಷ್ಟು ಹೆಚ್ಚು ಕಡಿಮೆಆಗಬಹುದು. ವಾಡಿಕೆಯ ಮಳೆ ಬೀಳಲಿದೆ. ಉಳಿದಂತೆ ಹವಾಮಾನ ಬದಲಾವಣೆಯನ್ನು ಖಚಿತವಾಗಿ ಹೇಳುವುದು ಕಷ್ಟ’ಎನ್ನುತ್ತಾರೆಅಧಿಕಾರಿಯೊಬ್ಬರು.

‘ಮಳೆ ಯಾವಾಗ ಶುರುವಾಗುತ್ತದೆ ಎಂದು ಕಾಯುವಂತಾಗಿದೆ. ಮನೆಯಲ್ಲಿ ಕುಳಿತರೂನೆಮ್ಮದಿಯಿಲ್ಲ. ಸಂಜೆ ವಾಯು ವಿಹಾರಕ್ಕೆಂದು ಹೊರಗೆ ಬಂದರೂ ಬೆವರು, ಬಿಸಿ ಗಾಳಿಯಿಂದ ನಡೆಯಲಾಗುತ್ತಿಲ್ಲ. ತಂಪು ಪಾನೀಯಗಳು, ಎಳನೀರು, ಜ್ಯೂಸ್ ಕುಡಿದೇ ಹೊಟ್ಟೆ ತುಂಬಿ ಹೋಗುತ್ತಿದೆ. ಸಣ್ಣ ಮಕ್ಕಳಿಗೆ ಸೆಕೆ ತಡೆಯಲಾಗುತ್ತಿಲ್ಲ. ಸರಿಯಾಗಿ ಊಟವೂ ಮಾಡದೆ,ನೀರೂ ಕುಡಿಯದೇ ನೆಲದ ಮೇಲೆ ಕಂಡಕಂಡಲ್ಲಿ ಮಲಗುತ್ತವೆ’ ಎಂದು ಗೃಹಿಣಿಸುಮಾಅಸಹಾಯಕತೆ ವ್ಯಕ್ತಪಡಿಸಿದರು.

ಮಳೆಯಿಲ್ಲದೇ ಜಿಲ್ಲೆಯಾದ್ಯಂತ ನೀರಿನ ಮೂಲಗಳೂ ಬತ್ತಿವೆ. ಕುಡಿಯುವ ನೀರಿಗೆ, ಕೃಷಿಗೆ ಇದರಿಂದ ಸಮಸ್ಯೆಯಾಗಿದೆ. ಹಾಗಾಗಿ ಮಳೆಯ ಆರಂಭವನ್ನೇ ಜನ ಕಾಯುವಂತಾಗಿದೆ.

ಕನಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಷಿಯಸ್!:ಈ ತಿಂಗಳ 24ನೇ ತಾರೀಕಿನ ರಾತ್ರಿ ನಗರವೂ ಸೇರಿದಂತೆ ವಿವಿಧೆಡೆ 2.5 ಮಿಲಿಮೀಟರ್‌ಗಳಷ್ಟು ಮಳೆಯಾಗಿತ್ತು. ಅಂದು ಕನಿಷ್ಠ ಉಷ್ಣಾಂಶ 24.3 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು. ಉಳಿದಂತೆ ಕನಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಷಿಯಸ್‌ಗಿಂತ ಕೆಳಗೆ ಬಂದಿಲ್ಲ. ಇದರಿಂದ ರಾತ್ರಿಯೂ ನೆಮ್ಮದಿ ಇಲ್ಲದಂತಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT