ಶುಕ್ರವಾರ, ಆಗಸ್ಟ್ 12, 2022
23 °C
ಕೆಲವೆಡೆ ಭೂ ಕುಸಿತ, ಮನೆ ಮೇಲೆ ಮರ ಬಿದ್ದು ಹಾನಿ; ದಾಂಡೇಲಿಯಲ್ಲಿ ಕೊಚ್ಚಿ ಹೋದ ಸೇತುವೆ

ಮಲೆನಾಡಿನಲ್ಲಿ ಮಳೆ ಅಬ್ಬರ; ಕರಾವಳಿಯಲ್ಲಿ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಮೂರು ದಿನಗಳಿಂದ ಅಬ್ಬರಿಸುತ್ತಿದ್ದ ಮಳೆಯು, ಗುರುವಾರ ಸ್ವಲ್ಪ ಕಡಿಮೆಯಾಗಿತ್ತು. ನಗರದಲ್ಲಿ ಬೆಳಿಗ್ಗೆಯಿಂದಲೇ ಆಗಾಗ ರಭಸದ ಗಾಳಿ ಬೀಸುತ್ತಿತ್ತು. ಅದರೊಂದಿಗೆ ಕೆಲವೇ ನಿಮಿಷಗಳ ಅವಧಿಗೆ ಜೋರಾಗಿ ಮಳೆಯಾಯಿತು.

ಅರಬ್ಬಿ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತ್ತಿದ್ದು, ತೀರದಲ್ಲಿ ಸಾಕಷ್ಟು ಮುಂದಿನವರೆಗೆ ನೀರು ಬರುತ್ತಿದೆ. ಇದರಿಂದ ಕರಾವಳಿಯುದ್ದಕ್ಕೂ ವಿವಿಧೆಡೆ ಕಡಲ್ಕೊರೆತದ ಆತಂಕ ಎದುರಾಗಿದೆ. ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಸಾಕಷ್ಟು ಪ್ರಮಾಣದಲ್ಲಿ ಕಸವೂ ದಡದಲ್ಲಿ ಬಿದ್ದಿವೆ.

ಜಿಲ್ಲೆಯಲ್ಲಿ ಜೂನ್ 18ರಂದೂ ಜೋರಾಗಿ ವರ್ಷಧಾರೆಯಾಗುವ ಸಾಧ್ಯತೆಯಿದೆ. ನಂತರ ಮೂರು ದಿನ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಹೊನ್ನಾವರ ತಾಲ್ಲೂಕಿನ ಗುಂಡಬಾಳಾ ನದಿಯ ನೆರೆ ನೀರು ನದಿ ದಂಡೆಯಲ್ಲಿರುವ ತೋಟಕ್ಕೆ ನುಗ್ಗಿರುವುದು

ಮನೆಗಳಿಗೆ ಹಾನಿ (ಸಿದ್ದಾಪುರ):

ಮಳೆಯಿಂದಾಗಿ ತಾಲ್ಲೂಕಿನ ಮರಲಿಗೆಯ ಶಶಿಕಲಾ ಮಂಜುನಾಥ ಮಡಿವಾಳ ಅವರ ಮನೆಯ ಚಾವಣಿ ಮೇಲೆ ಮರ ಬಿದ್ದಿದ್ದರಿಂದ ₹10 ಸಾವಿರ ನಷ್ಟವಾಗಿದೆ.  ಕೋಡಿಗದ್ದೆಯ ಗಾಯತ್ರಿ ಚಂದ್ರು ನಾಯ್ಕ ಅವರ ಮನೆ ಮೇಲೆ ಮರ ಬಿದ್ದು ₹50 ಸಾವಿರ ನಷ್ಟವಾಗಿದೆ.

ಬೇಡ್ಕಣಿಯ ಕೋಟೆ ಆಂಜನೇಯ ಸ್ವಾಮಿ ದೇಗುಲದ ಕಾಂಪೌಂಡ್ ಕುಸಿದಿದೆ. ಗೊದ್ಲಮನೆಯ ಗಜಾನನ ಬಂಗಾರ್ಯಾ ಹಸ್ಲರ ಅವರ ವಾಸ್ತವ್ಯದ ಮನೆಯ ಮಣ್ಣಿನ ಗೋಡೆ ಬಿದ್ದಿದ್ದು, ₹30 ಸಾವಿರ ನಷ್ಟ ಸಂಭವಿಸಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.


ಮುಂಡಗೋಡ ತಾಲ್ಲೂಕಿನ ಗಣೇಶಪುರದಲ್ಲಿ ಮಳೆಗೆ ಕುಸಿದಿರುವ ಮನೆ ಗೋಡೆ

ವಿವಿಧೆಡೆ ಹಾನಿ (ಹೊನ್ನಾವರ):

ತಾಲ್ಲೂಕಿನ ಅಲ್ಲಲ್ಲಿ ಮಳೆಯಿಂದಾಗಿ ಹಾನಿಯಾಗಿದೆ. ಗುಂಡಬಾಳಾ ಹಾಗೂ ಬಡಗಣಿ ನದಿಗಳು ತುಂಬಿ ಹರಿಯುತ್ತಿದ್ದು ನದಿ ದಂಡೆಗಳಲ್ಲಿ ನೆರೆಯ ಆತಂಕ ತಲೆದೋರಿದೆ.

ಗಾಳಿ-ಮಳೆಗೆ ಕೆಳಗಿನ ಇಡಗುಂಜಿಯ ಲೋಕೇಶ ಬಿಳಿಯಾ ನಾಯ್ಕ, ಗಣಪತಿ ನಾರಾಯಣ ಶೆಟ್ಟಿ, ಮಂಜುನಾಥ ನಾರಾಯಣ ಶೆಟ್ಟಿ, ನಾಗರಾಜ ಗಣಪತಿ ಶೆಟ್ಟಿ, ಮೇಲಿನ ಇಡಗುಂಜಿಯ ಮಾದೇವ ಗಣಪ ನಾಯ್ಕ, ಮಾಳ್ಕೋಡಿನ ಮಾದೇವ ರಮೇಶ ಶಾನಭಾಗ ಹಾಗೂ ಲಕ್ಷ್ಮಣ ಅಣ್ಣಯ್ಯ ನಾಯ್ಕ ಅವರ ಮನೆಗಳಿಗೆ ಹಾನಿಯಾಗಿದೆ. ಸುಮಾರು ₹4 ಲಕ್ಷ ಹಾನಿಯಾಗಿದ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾಳಜಿ ಕೇಂದ್ರ ಆರಂಭ: ಗುಂಡಬಾಳಾ ನದಿಗೆ ನೆರೆ ಬಂದಿದ್ದು, ದಂಡೆಯ ತಗ್ಗು ಪ್ರದೇಶ ಜಲಾವೃತವಾಗಿದೆ. ಗುರುವಾರ ಸಂಜೆ ಮಳೆ ತಗ್ಗಿದ್ದರಿಂದ ನದಿಯಲ್ಲಿ ನೀರು ಕೂಡ ಇಳಿದಿದೆ.

‘ಮುಂಜಾಗೃತಾ ಕ್ರಮವಾಗಿ ಗುಂಡಿಬೈಲ್‌ನಲ್ಲಿ ಒಂದು ಕಾಳಜಿ ಕೇಂದ್ರ ತೆರೆಯಲಾಗಿದೆ. ಐವರು ಹಿರಿಯ ನಾಗರಿಕರು ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ’ ಎಂದು ತಹಶೀಲ್ದಾರ ವಿವೇಕ ಶೇಣ್ವಿ ತಿಳಿಸಿದ್ದಾರೆ.


ಯಲ್ಲಾಪುರ ತಾಲ್ಲೂಕಿನ ಭರತನಹಳ್ಳಿಯಿಂದ ಉಚಗೇರಿ ಹೋಗುವ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದಿರುವುದು

ವಾಹನದ ಮೇಲೆ ಬಿದ್ದ ಮರ (ಯಲ್ಲಾಪುರ):

ತಾಲ್ಲೂಕಿನ ಕುಂದರಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭರತನಹಳ್ಳಿಯಿಂದ ಉಚಗೇರಿಗೆ ತೆರಳುವ ಮಾರ್ಗದಲ್ಲಿ ಗುರುವಾರ ಸಂಜೆ ಸಂಚರಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದು ಹಾನಿಯಾಗಿದೆ. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. 

ಪಟ್ಟಣದ ಉದ್ಯಮನಗರ ಪ್ರದೇಶದಲ್ಲಿ ದಸ್ತಗಿರಿ ಗೋರಿ ಸಾಬ್ ಕಪಟಗಿರಿ ಅವರ ಮನೆ ಮೇಲೆ ತೆಂಗಿನ ಮರ ಮುರಿದು ಬಿದ್ದು, ಸುಮಾರು ₹10 ಸಾವಿರ ನಷ್ಟವಾಗಿದೆ. ಉಳಿದಂತೆ ಹಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಮರಗಳು ಹಾಗೂ ವಿದ್ಯುತ್ ಕಂಬಗಳು ಕೆಲವೆಡೆ ನೆಲಕ್ಕುರುಳಿವೆ.


ಅಂಕೋಲಾ ತಾಲ್ಲೂಕಿನ ಅಚವೆಯ ಮೋತಿಗುಡ್ದ ಮಳೆಗೆ ಕುಸಿದಿರುವುದು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು