ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500ಕ್ಕೂ ಅಧಿಕ ದೋಣಿಗಳಿಗೆ ಆಶ್ರಯ

ಪ್ರಕ್ಷುಬ್ಧ ಸಮುದ್ರಕ್ಕೆ ಬೆದರಿ ಕಾರವಾರಕ್ಕೆ ವಾಪಸಾದ ವಿವಿಧ ರಾಜ್ಯಗಳ ಮೀನುಗಾರರು
Last Updated 6 ಸೆಪ್ಟೆಂಬರ್ 2019, 11:43 IST
ಅಕ್ಷರ ಗಾತ್ರ

ಕಾರವಾರ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಮೀನುಗಾರಿಕೆಯ ಮೇಲೆ ಅತಿ ಹೆಚ್ಚು ಪರಿಣಾಮ ಬೀರಿದೆ.ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ನೂರಾರು ದೋಣಿಗಳು ಇಲ್ಲಿನ ಬೈತಖೋಲ್ ಮೀನುಗಾರಿಕಾ ಬಂದರಿನ ಸುತ್ತಮುತ್ತ ಲಂಗರು ಹಾಕಿವೆ.

ರಭಸದ ಗಾಳಿ ಮತ್ತು ಮೂರು ಮೀಟರ್‌ಗೂ ಅಧಿಕ ಎತ್ತರದ ಅಲೆಗಳು ಇನ್ನೂ ಎರಡು ದಿನ ಏಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಸಮುದ್ರದಲ್ಲಿದ್ದ ಮೀನುಗಾರರು ಕೂಡಲೇ ದಡದತ್ತ ಸಾಗಿ ಬಂದರು. ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಶುಕ್ರವಾರ ಸಾಲಾಗಿ ದೋಣಿಗಳು ನಿಂತಿರುವುದು ಕಂಡುಬಂತು.

‘ನಮ್ಮ ಜಿಲ್ಲೆಯವರು, ಮಂಗಳೂರು, ಮಲ್ಪೆ, ಉಡುಪಿ, ಗುಜರಾತ್ ಮತ್ತು ತಮಿಳುನಾಡಿನ 300ಕ್ಕೂ ಅಧಿಕ ಮೀನುಗಾರರು ಇಲ್ಲಿ ಎರಡು ದಿನಗಳಿಂದ ಆಶ್ರಯ ಪಡೆದಿದ್ದಾರೆ. ವಾತಾವರಣ ಸರಿಯಿಲ್ಲದ ಕಾರಣ ಮೀನುಗಾರಿಕೆಗೆ ಅವಕಾಶವೇ ಇಲ್ಲದಂತಾಗಿದೆ. ಈ ಬಾರಿಯ ಮೀನುಗಾರಿಕಾ ಋತುವಿನಲ್ಲಿ ಈವರೆಗೆ ಕೇವಲ ಐದು ದಿನ ಮೀನುಗಾರಿಕೆ ಮಾಡಿದ್ದೇವೆ. ಮೀನುಗಾರರಿಗೆ ಆಗಿರುವ ನಷ್ಟವನ್ನು ಹೇಗೆ ಭರ್ತಿ ಮಾಡಲು ಸಾಧ್ಯ’ ಎಂದು ಮೀನುಗಾರ ವಿನಾಯಕ ಹರಿಕಂತ್ರ ಪ್ರಶ್ನಿಸುತ್ತಾರೆ.

‘ಮಾರುಕಟ್ಟೆಯಲ್ಲಿ ಮೀನಿನ ಅಭಾವ ಕಾಣಿಸಿಕೊಂಡಿದ್ದು, ದರವೂದುಪ್ಪಟ್ಟಾಗಿದೆ. ಯಾವುದೇ ಪ್ರಭೇದದ ಒಂದು ಪಾಲು ಮೀನಿಗೆ ಮೊದಲು ₹ 100 ಇರುತ್ತಿತ್ತು. ಈಗ ₹ 200ರವರೆಗೆ ಏರಿಕೆ ಕಂಡಿದೆ. ಇದು ಗ್ರಾಹಕರಿಗೂ ಹೊರೆಯಾಗುತ್ತಿದೆ’ ಎಂದು ಅವರು ಬೇಸರಿಸಿದರು.

ದಾಖಲೆಗಳ ಪರಿಶೀಲನೆ:ಸೂಕ್ಷ್ಮ ಪ್ರದೇಶವಾಗಿರುವ ಕಾರವಾರಕ್ಕೆ ಹೊರ ರಾಜ್ಯಗಳ ದೋಣಿಗಳು ಬಂದಿರುವ ಕಾರಣ ಭದ್ರತೆಯ ಲೋಪವಾಗದಂತೆ ಮೀನುಗಾರಿಕಾ ಇಲಾಖೆ ಎಚ್ಚರಿಕೆ ವಹಿಸಿದೆ.

ಇಲಾಖೆಯ ಸಹಾಯಕ ನಿರ್ದೇಶಕ ಪ್ರತೀಕ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಶುಕ್ರವಾರ ದೋಣಿಗಳ ದಾಖಲೆಗಳನ್ನು ಪರಿಶೀಲನೆ ಮಾಡಿತು. ಅಲ್ಲದೇ ಭಾರತೀಯ ತಟರಕ್ಷಕ ಪಡೆಯ ದೋಣಿಗಳಿಗೆ ಸಂಚರಿಸಲು ದಾರಿ ಮಾಡಿಕೊಡುವಂತೆ ಮೀನುಗಾರಿಕಾ ದೋಣಿಗಳ ನಾವಿಕರಿಗೆ ನಿರ್ದೇಶನ ನೀಡಿತು.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಇಲಾಖೆಯ ಉಪ ನಿರ್ದೇಶಕ ನಾಗರಾಜು, ‘ದೋಣಿಗಳ ದಾಖಲೆಗಳನ್ನು, ಕಾರ್ಮಿಕರ ಗುರುತಿನ ಚೀಟಿಗಳನ್ನುಪರಿಶೀಲನೆಮಾಡಲಾಗಿದ್ದು, ಲೋಪ ಕಂಡುಬಂದಿಲ್ಲ. ಮಾನವೀಯ ದೃಷ್ಟಿಯಿಂದ ಅವರಿಗೆ ಕನಿಷ್ಠ ಮೂಲ ಸೌಕರ್ಯಗಳಾದ ನೀರು,ಆಹಾರ,ಆಶ್ರಯ ನೀಡಲುಮೀನುಗಾರರ ಸಂಘಟನೆಗಳ ಮೂಲಕ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

–––

ಅಂಕಿ ಅಂಶಗಳು

ಎಲ್ಲಿಂದ ಎಷ್ಟು ದೋಣಿಗಳು?

ಮಂಗಳೂರು, ಮಲ್ಪೆ - 425

ಗೋವಾ - 52

ಗುಜರಾತ್ - 25

ತಮಿಳುನಾಡು - 5

ಒಟ್ಟು - 507

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT