ಬುಧವಾರ, ಜೂನ್ 16, 2021
22 °C
ಜೊಯಿಡಾ ತಾಲ್ಲೂಕಿನಲ್ಲಿ ಸೋಂಕಿತರ ಮಾಹಿತಿ ಸಂಗ್ರಹಕ್ಕೆ ಸಮೀಕ್ಷೆ

ಕಾಡಿನೂರಿನಲ್ಲಿ ಎರಡನೇ ಅಲೆಯ ಕೇಕೆ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

ಕಾರವಾರ: ಕೊರೊನಾ ವೈರಸ್‌ನ ಮೊದಲ ಅಲೆಯ ಸುಳಿಯಿಂದ ಪಾರಾಗಿದ್ದ ಜೊಯಿಡಾ ತಾಲ್ಲೂಕು, ಎರಡನೇ ಅಲೆಯಲ್ಲಿ ತತ್ತರಿಸುತ್ತಿದೆ. ಮಹಾರಾಷ್ಟ್ರ, ಗೋವಾ, ಬೆಂಗಳೂರಿನಿಂದ ಬಂದವರ ಮೂಲಕ ಸೋಂಕು ಕುಗ್ರಾಮಗಳಿಗೂ ತಲುಪಿದೆ.

ದಟ್ಟವಾದ ಕಾಡಿನ ಮಧ್ಯೆ ಇರುವ ಈ ತಾಲ್ಲೂಕಿನಲ್ಲಿ ಮೇ 19ರ ವರದಿಯಂತೆ ಒಟ್ಟು 1,085 ಮಂದಿಗೆ ಸೋಂಕು ದೃಢಪಟ್ಟಿದೆ. 15 ಜನರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಹಲವು ಅತ್ಯಂತ ಕುಗ್ರಾಮಗಳಿಗೆ ಸಮರ್ಪಕ ರಸ್ತೆಯೂ ಇಲ್ಲ. ಮೊಬೈಲ್ ನೆಟ್‌ವರ್ಕ್, ದೂರವಾಣಿ ಸಂಪರ್ಕಗಳೂ ಲಭ್ಯವಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಊರಿಗೆ ಬಂದವರು ಅಂಥ ಪ್ರದೇಶಗಳಲ್ಲಿ ವಾಸವಿದ್ದಾರೆ. ಈಗ ಅವರನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತವು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಸಮೀಕ್ಷೆ ಮಾಡಿಸಿದೆ.

‘ಊರಿಗೆ ಬಂದವರು ಸಂಬಂಧಿಕರ ಮದುವೆಗಳಲ್ಲಿ, ವಿವಿಧ ಸಮಾರಂಭಗಳಲ್ಲಿ ಭಾಗವಹಿಸಿದರು. ಜ್ವರ, ನೆಗಡಿ, ತಲೆನೋವಿನಂಥ ಸಮಸ್ಯೆಗಳಿಗೆ ಸ್ಥಳೀಯ ವೈದ್ಯರು ಅಥವಾ ಮೆಡಿಕಲ್‌ಗಳಿಂದ ಔಷಧ ಪಡೆದು ಸೇವಿಸಿದರು. ತಮಗೆ ಕೋವಿಡ್ ಬರಲಾರದು ಎಂಬ ಅತಿಯಾದ ವಿಶ್ವಾಸದಿಂದ ಇದ್ದು, ತಾವೂ ಸೋಂಕಿತರಾಗಿ ಬೇರೆಯವರಿಗೂ ಹಬ್ಬಿಸಿದರು’ ಎಂದು ಗ್ರಾಮಸ್ಥರು ಬೇಸರಿಸುತ್ತಾರೆ.

ತಾಲ್ಲೂಕು ವೈದ್ಯಾಧಿಕಾರಿ ಡಾ.ವಿ.ಸುಜಾತಾ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಕೋವಿಡ್ ಲಕ್ಷಣಗಳಿದ್ದ ಬಹುತೇಕರು ಆರಂಭದಲ್ಲೇ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ. ತಮ್ಮನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಾರೆ ಎಂದು ಹೆದರಿದರು’ ಎಂದು ಹೇಳುತ್ತಾರೆ.

‘ಹತ್ತಿರದಲ್ಲಿರುವ, ಅರ್ಹತೆ ಇಲ್ಲದ ವೈದ್ಯರಿಗೆ ಕೋವಿಡ್‌ಗೆ ಏನು ಚಿಕಿತ್ಸೆ ಕೊಡಬೇಕು ಎಂಬ ಮಾಹಿತಿಯಿಲ್ಲ. ಹಣಕ್ಕಾಗಿ ಏನೋ ಒಂದು ಇಂಜೆಕ್ಷನ್, ಗುಳಿಗೆ ಕೊಟ್ಟರು. ಸೋಂಕಿತರೂ ಆಯುರ್ವೇದ ಔಷಧಿ, ಕಷಾಯ ಎಂದು ಮಾಡಿಕೊಂಡರು. ಅವುಗಳನ್ನು ಸೇವಿಸಿದರೂ ಆರೋಗ್ಯ ಸುಧಾರಿಸದಿದ್ದಾಗ ಮತ್ತೊಬ್ಬ ವೈದ್ಯರ ಬಳಿಗೆ ಹೋದರು. ಕೊನೆಗೆ, ಏಳೆಂಟು ದಿನಗಳಲ್ಲಿ ಪ‍ರಿಸ್ಥಿತಿ ಗಂಭೀರ ಆಗುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಗೆ ಬಂದರು’ ಎಂದು ವಿವರಿಸುತ್ತಾರೆ.

‘ನಿಯಮ ಬಾಹಿರವಾಗಿ ಚಿಕಿತ್ಸೆ ನೀಡುತ್ತಿದ್ದವರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. ಈಗ ಜನ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ. ಸೋಂಕು 10 ದಿನಗಳಲ್ಲಿ ನಿಯಂತ್ರಣಕ್ಕೆ ಬರುವ ನಿರೀಕ್ಷೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ಕೋವಿಡ್ ಬಂದರೆ ಬದುಕುವುದಿಲ್ಲ ಎಂಬ ತಪ್ಪು ಅಭಿಪ್ರಾಯ ಹಲವರಲ್ಲಿ ಇನ್ನೂ ಇದೆ. ಜ್ವರ ಬಂದವರೂ ಕೋವಿಡ್‌ ಪರೀಕ್ಷೆಗೆ ಬರುತ್ತಿಲ್ಲ. ಜೊಯಿಡಾ ಸರ್ಕಾರಿ ಆಸ್ಪತ್ರೆಯಲ್ಲಿ 24x7 ಸೇವೆಯಿದೆ. ಸೋಂಕಿತರನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಬರಲು ವ್ಯವಸ್ಥೆಯಿದೆ. ಆಂಬುಲೆನ್ಸ್‌ ಇದ್ದು, ಗ್ರಾಮಗಳಲ್ಲಿ ಸ್ವಯಂಸೇವಕರ ವಾಹನಗಳನ್ನು ಗುರುತಿಸಲಾಗಿದೆ. ಯಾರೂ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕಬಾರದು’ ಎಂದು ಮನವಿ ಮಾಡುತ್ತಾರೆ.

ಇತರ ಆರೋಗ್ಯ ಸೇವೆ:

ಕೋವಿಡ್ ನಡುವೆ ಇತರ ಆರೋಗ್ಯ ಸೇವೆಗಳನ್ನೂ ನಿಭಾಯಿಸಲು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.

‘ಆಶಾ ಕಾರ್ಯಕರ್ತರನ್ನು ಅವರವರ ಊರಿನಲ್ಲೇ ನಿಯೋಜಿಸಲಾಗಿದೆ. ವಾರದಲ್ಲಿ ನಿಗದಿತ ದಿನದಂದು ಎಲ್ಲರೂ ದೂರವಾಣಿ ಮೂಲಕ ಸಂಪರ್ಕಕ್ಕೆ ಬರುತ್ತಾರೆ. ಗ್ರಾಮೀಣ ಆರೋಗ್ಯ ಸಿಬ್ಬಂದಿಯಿಂದ ಅವರಿಗೆ ಸಂದೇಶ ಹೋಗುತ್ತದೆ. ಅವರ ನಂತರ ಸಾಮುದಾಯಿಕ ಆರೋಗ್ಯ ಅಧಿಕಾರಿಗಳ ಮೂಲಕ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ’ ಎಂದೂ ಡಾ.ವಿ.ಸುಜಾತಾ ಹೇಳುತ್ತಾರೆ.

****

ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವ ಕಾರಣ ಜೊಯಿಡಾದಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಇದು ಚಿಕಿತ್ಸೆಗೆ ಹೆಚ್ಚು ಸಹಕಾರಿಯಾಗಲಿದೆ.

- ಡಾ.ವಿ.ಸುಜಾತಾ, ಜೊಯಿಡಾ ಟಿ.ಎಚ್.ಒ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು