ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭ ಶುಕ್ರವಾರ ಮಾರಿಕಾಂಬೆಗೆ ದೇಗುಲಕ್ಕೆ ಭಕ್ತರ ದಂಡು

ಮಾರಿಕಾಂಬೆಗೆ ಪೂಜೆ, ಉಡಿ, ಹರಕೆ ಸಲ್ಲಿಸಿದ ಭಕ್ತರು
Last Updated 6 ಮಾರ್ಚ್ 2020, 13:02 IST
ಅಕ್ಷರ ಗಾತ್ರ

ಶಿರಸಿ: ದೇವಿಗೆ ವಿಶೇಷ ದಿನವಾದ ಶುಕ್ರವಾರ ಸಹಸ್ರಾರು ಭಕ್ತರು, ಜಾತ್ರಾ ಚಪ್ಪರಕ್ಕೆ ಭೇಟಿ ನೀಡಿ, ಗದ್ದುಗೆಯಲ್ಲಿ ಕುಳಿತಿರುವ ದೇವಿಗೆ ಪೂಜೆ ಸಲ್ಲಿಸಿದರು.

ಬೆಳಗಿನ ಜಾವದಲ್ಲೇ ಒಂದೂವರೆ ಕಿಲೋ ಮೀಟರ್‌ಗೂ ದೂರದವರೆಗೆ ಭಕ್ತರು ಸರದಿಯಲ್ಲಿ ನಿಂತಿದ್ದರು. ಮಧ್ಯಾಹ್ನವಾಗುತ್ತಿದ್ದಂತೆ ಈ ಸರದಿ ಇನ್ನೂ ಉದ್ದ ಬೆಳೆಯಿತು. ದೇವಿಗೆ ಉಡಿ ಸಲ್ಲಿಕೆ ಶ್ರೇಷ್ಠ ಎಂಬ ನಂಬಿಕೆ ಭಕ್ತರದ್ದು. ಹೀಗಾಗಿ ಉಡಿ ಪಡೆಯಲು ತೀವ್ರ ಜನದಟ್ಟಣಿ ಉಂಟಾಗಿತ್ತು. ಗದ್ದುಗೆ ಸಮೀಪ ಪ್ರತ್ಯೇಕ ಕೌಂಟರ್ ತೆರೆದು ಭಕ್ತರಿಗೆ ಉಡಿಯನ್ನು ಪೂರೈಸಲಾಯಿತು.

ದೇವಾಲಯದ ಸಿಬ್ಬಂದಿ ಗದ್ದುಗೆಯ ಆವರಣದಲ್ಲಿ ದಿನವಿಡೀ ಉಡಿ ಸಿದ್ಧಪಡಿಸುವ ಕಾರ್ಯ ನಡೆಸುತ್ತಾರೆ. ಎರಡು ದಿನಗಳಲ್ಲಿ ಲಕ್ಷಾಂತರ ಉಡಿಗಳು ಖಾಲಿಯಾಗಿವೆ. ಹಲವರು ಮನೆಯಿಂದಲೇ ಉಡಿ ಸಿದ್ಧಪಡಿಸಿಕೊಂಡು ಬಂದರೆ, ಕೆಲವರು ಅಂಗಡಿಗಳಲ್ಲೂ ಖರೀದಿಸಿದರು. ತುಲಾಭಾರ, ಬೇವಿನ ಉಡುಗೆ ಸೇವೆ ಸಲ್ಲಿಸುವವರ ಸಂಖ್ಯೆಯೂ ಜಾಸ್ತಿಯಿತ್ತು. ಬೆಳಗಿನಿಂದಲೇ ಉದ್ದಂಡ ನಮಸ್ಕಾರ ಸೇವೆ ಸಲ್ಲಿಸುವವರು ಅಧಿಕ ಸಾಕಷ್ಟು ಸಂಖ್ಯೆಯಲ್ಲಿದ್ದರು. ಹರಕೆ ಹೊತ್ತವರು ಕೈಯ್ಯಲ್ಲಿ ಕೋಲು ಹಿಡಿದು, ಉದ್ದಂಡ ನಮಸ್ಕಾರ ಮಾಡುತ್ತ ಮಂಟಪದ ಸುತ್ತ ತಿರುಗಿದರು.

ಹೊರ ಊರುಗಳಿಂದ ಬರುವ ವಾಹನಗಳ ಸಂಖ್ಯೆ ಕೂಡ ಅಧಿಕವಾಗಿತ್ತು. ಹೀಗಾಗಿ, ಸ್ಥಳೀಯರು ಸಂಚಾರಕ್ಕೆ ಕೊಂಚ ತೊಂದರೆ ಅನುಭವಿಸಿದರು.

ಮಾರಿಕಾಂಬಾ ಜಾತ್ರೆಯಲ್ಲಿ ಬಹಿರಂಗವಾಗಿ ಪ್ರಾಣಿ ಬಲಿಯನ್ನು ನಿಷೇಧಿಸಲಾಗಿದೆ. ಹೀಗಾಗಿ, ಅನೇಕರು ಕೋಳಿ, ಕುರಿಗಳನ್ನು ಖರೀದಿಸಿ, ದೇವಿಯೆದುರು ತಂದು ಕುಂಕುಮ ಪ್ರಸಾದ ಹಾಕಿಸಿಕೊಂಡು ಹೋಗಿದ್ದು ಕಂಡುಬಂತು. ಗದ್ದುಗೆಯ ಅನತಿ ದೂರದಲ್ಲಿ ಕುರಿ ವ್ಯಾಪಾರ ಜೋರಾಗಿತ್ತು. ಸಣ್ಣ ಕುರಿಗೆ ₹ 6000 ದರವಿದ್ದರೆ, ದೊಡ್ಡ ಕುರಿ ₹ 15ಸಾವಿರಕ್ಕೆ ಮಾರಾಟವಾಯಿತು. ದಿನಕ್ಕೆ 100ಕ್ಕೂ ಹೆಚ್ಚು ಕುರಿಗಳು ಮಾರಾಟವಾಗುತ್ತಿವೆ.

ಲಡ್ಡುಗೆ ಹೆಚ್ಚಿದ ಬೇಡಿಕೆ:

ಹಿಂದಿನ ಜಾತ್ರೆಯ ವೇಳೆ ಭಕ್ತರಿಗೆ ತಿರುಪತಿ ಲಡ್ಡು ಮಾದರಿಯ ಪ್ರಸಾದ ವಿತರಿಸಿ ಯಶಸ್ವಿಯಾಗಿದ್ದ ದೇವಾಲಯದ ಆಡಳಿತ ಮಂಡಳಿ, ಈ ಬಾರಿಯೂ 3 ಲಕ್ಷಕ್ಕೂ ಅಧಿಕ ಲಡ್ಡು ಸಿದ್ಧಪಡಿಸಿದೆ. ಪ್ರತಿದಿನ 50ಸಾವಿರಕ್ಕೂ ಅಧಿಕ ಲಡ್ಡುಗಳು ಮಾರಾಟವಾಗುತ್ತಿವೆ. 70 ಗ್ರಾಂ ತೂಕದ ಎರಡು ಲಡ್ಡು ₹ 40ಕ್ಕೆ ದೊರೆಯುತ್ತಿದೆ. ಮೂರು ದಿನಗಳಲ್ಲಿ ಸುಮಾರು 1.5 ಲಕ್ಷ ಲಡ್ಡು ಮಾರಾಟವಾಗಿದೆ.

ಸೀರೆ ಹರಾಜು:

ದೇವಿಗೆ ಬಂದಿರುವ ಸೀರೆಗಳ ಹರಾಜು ಚಪ್ಪರದ ಮುಂಭಾಗದಲ್ಲಿ ನಿರಂತರವಾಗಿ ನಡೆಯುತ್ತಿದೆ. ಸೀರೆ ಖರೀದಿಸಲು ಭಕ್ತರು ಮುಗಿಬೀಳುತ್ತಿದ್ದಾರೆ. ಸೀರೆ ಜೊತೆಗೆ, ದೇವಿಗೆ ಬಂದಿರುವ ಹಣ್ಣು, ತಿನಿಸುಗಳು ಸಹ ಹರಾಜಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT