ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತಷ್ಟು ಮಂದಿ ಕೋವಿಡ್-19ನಿಂದ ಗುಣಮುಖ

ವಿವಿಧ ಆಸ್ಪತ್ರೆಗಳಿಂದ 89 ಜನರ ಬಿಡುಗಡೆ: ಸೋಮವಾರ 32 ಮಂದಿಗೆ ಕೋವಿಡ್ ಖಚಿತ
Last Updated 27 ಜುಲೈ 2020, 13:31 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಕೋವಿಡ್‌ನಿಂದ ಗುಣಮುಖ ಆಗುತ್ತಿರುವವರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ವಿವಿಧ ತಾಲ್ಲೂಕುಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 89 ಮಂದಿ ಸೋಂಕುಮುಕ್ತರಾಗಿದ್ದು, ಸೋಮವಾರ ಬಿಡುಗಡೆಯಾದರು.

ಅಂಕೋಲಾ ಮತ್ತು ಕುಮಟಾದಲ್ಲಿ ತಲಾ 23 ಮಂದಿ, ಹಳಿಯಾಳ ಮತ್ತು ದಾಂಡೇಲಿಯಲ್ಲಿ ಒಟ್ಟು 14, ಯಲ್ಲಾಪುರದಲ್ಲಿ 11, ಶಿರಸಿಯಲ್ಲಿ ಒಂಬತ್ತು, ಮುಂಡಗೋಡದಲ್ಲಿ ನಾಲ್ವರು, ಕಾರವಾರದಲ್ಲಿ ಮೂವರು, ಹೊನ್ನಾವರದಲ್ಲಿ ಇಬ್ಬರು ಮನೆಗಳಿಗೆ ಮರಳಿದರು.

ಜಿಲ್ಲೆಯಲ್ಲಿ ಸೋಮವಾರದ ಮಾಹಿತಿಯ ಪ್ರಕಾರ ಒಟ್ಟು 1,785 ಮಂದಿ ಸೋಂಕಿತರಾಗಿದ್ದಾರೆ. ಅವರಲ್ಲಿ 1,025 ಜನ ಗುಣಮುಖರಾಗಿದ್ದು, 645 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 17 ಮಂದಿ ಮೃತಪಟ್ಟಿದ್ದಾರೆ.

32 ಮಂದಿ ಸೋಂಕಿತರು

ಜಿಲ್ಲೆಯಲ್ಲಿ 32 ಮಂದಿಗೆ ಕೋವಿಡ್ ಇರುವುದು ಸೋಮವಾರ ದೃಢಪಟ್ಟಿದೆ. ಈ ಪೈಕಿ ಹಳಿಯಾಳ ಮತ್ತ ದಾಂಡೇಲಿ ತಾಲ್ಲೂಕುಗಳಲ್ಲಿ ಒಟ್ಟ 21 ಮಂದಿಗೆ ಸೋಂಕು ಖಚಿತವಾಗಿದೆ. ಭಟ್ಕಳ ತಾಲ್ಲೂಕಿನಲ್ಲಿ ಆರು, ಹೊನ್ನಾವರ ಮತ್ತು ಶಿರಸಿ ತಾಲ್ಲೂಕುಗಳಲ್ಲಿ ತಲಾ ಇಬ್ಬರು ಹಾಗೂ ಜೊಯಿಡಾ ತಾಲ್ಲೂಕಿನಲ್ಲಿ ಒಬ್ಬರು ಸೋಂಕಿತರಾಗಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ 68 ಮಂದಿ ಮನೆಗಳಲ್ಲೇ ಐಸೋಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸೋಮವಾರ ಸೋಂಕು ಖಚಿತವಾದ 20 ಮಂದಿಗೆ ಕೋವಿಡ್ ಪೀಡಿತರ ಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕದಿಂದ ರೋಗ ಹರಡಿದೆ. ಐವರು ಜ್ವರದ ಲಕ್ಷಣ (ಐ.ಎಲ್.ಐ) ಹೊಂದಿದ್ದಾರೆ. ಐವರಿಗೆ ಸೋಂಕಿನ ಮೂಲ ತಿಳಿದುಬರಬೇಕಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ. ಒಬ್ಬರು ದೇಶದ ಒಳಗೆ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.

‘ಆಸ್ಪತ್ರೆಗೆ ಹೋಗದಿರುವುದು ತಪ್ಪು’

‘ಕೋವಿಡ್ ಪೀಡಿತರಲ್ಲಿ ರೋಗ ಲಕ್ಷಣ ಇಲ್ಲದವರೇ ಹೆಚ್ಚಿರುವುದು ಸಹಜವಾಗಿದೆ. ಹಾಗೆಂದ ಮಾತ್ರಕ್ಕೆ ಆಸ್ಪತ್ರೆ ಅಥವಾ ಕೋವಿಡ್ ಆರೈಕೆ ಕೇಂದ್ರಕ್ಕೆ ಹೋಗದಿರುವುದು ತಪ್ಪು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಕೋವಿಡ್ ಪೀಡಿತರಲ್ಲಿ ಕೆಲವರು ಆಸ್ಪತ್ರೆಗೆ ದಾಖಲಾಗಲು ಹಿಂದೇಟು ಹಾಕುತ್ತಿರುವ ಬಗ್ಗೆ ಕಾರವಾರದಲ್ಲಿ ಸೋಮವಾರ ಸುದ್ದಿಗಾರರು ಗಮನ ಸೆಳೆದಾಗ ಅವರು ಪ್ರತಿಕ್ರಿಯಿಸಿದರು.

‘ಜಿಲ್ಲೆಯಲ್ಲಿ ಕೋವಿಡ್ ಪೀಡಿತರಿಗೆ ಉತ್ತಮ‌ ವ್ಯವಸ್ಥೆಗಳಿವೆ. ರೋಗ ಲಕ್ಷಣ ಇಲ್ಲದಿರುವವರು ತಪ್ಪು ತಿಳಿದು ಸಮಾಜದ ಆರೋಗ್ಯ ಕೆಡಿಸುವ ಪ್ರಯತ್ನ ಮಾಡಬಾರದು. ಒಬ್ಬ ಸೋಂಕಿತನನ್ನು ಹೊರ ಬಿಟ್ಟರೆ ನೂರಾರು ಮಂದಿ ಸೋಂಕಿತರಾಗುತ್ತಾರೆ. ರೋಗ ಲಕ್ಷಣ ಇರಲಿ‌, ಇಲ್ಲದಿರಲಿ ಅವರನ್ನು ಆರೋಗ್ಯ‌ ಇಲಾಖೆಯ ನಿಯಂತ್ರಣಕ್ಕೆ ಪಡೆಯುವುದು ಅವರ ಕರ್ತವ್ಯ. ಇದಕ್ಕೆ ಸೋಂಕಿತರು ಸ್ಪಂದಿಸಬೇಕು’ ಎಂದು ಮನವಿ ಮಾಡಿದರು.

ಕರ್ತವ್ಯಕ್ಕೆ ಅಡ್ಡಿ, ದೂರು ದಾಖಲು

ಕಾರವಾರದ ಕೆ.ಇ.ಬಿ ರಸ್ತೆಯಲ್ಲಿ ಭಾನುವಾರ ಕೋವಿಡ್ ಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಡ್ಡಿಪಡಿಸಿದ ಪ್ರಕರಣ ಸಂಬಂಧ 60ರಿಂದ 70 ಮಂದಿ ವಿರುದ್ಧ ದೂರು ದಾಖಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಯ ಕರ್ತವ್ಯಕ್ಕೆ ತೊಂದರೆ ಮಾಡಿದ ಆರೋಪದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ, ಅಂತರ ಕಾಯ್ದುಕೊಳ್ಳದೇ ಸೋಂಕು ಹರಡುವ ರೀತಿಯಲ್ಲಿ ವರ್ತಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT