ಸೋಮವಾರ, ಮೇ 17, 2021
28 °C
ಸಮುದ್ರ ಮಾಲಿನ್ಯದ ಹೆಚ್ಚಳ, ಮತ್ಸ್ಯಕ್ಷಾಮದಿಂದ ಕಂಗೆಟ್ಟ ಮೀನುಗಾರರು

ಬಲೆಯಲ್ಲಿ ಮೀನಿಗಿಂತ ಕಸವೇ ಹೆಚ್ಚು!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಸಮುದ್ರದಲ್ಲಿ ಮತ್ಸ್ಯಕ್ಷಾಮದಿಂದಾಗಿ ಮೀನುಗಾರರು ಎರಡು ತಿಂಗಳಿನಿಂದ ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ. ಆಸೆ ಕಂಗಳಿನಿಂದ ಒಂದೆರಡು ದೋಣಿಗಳು ಆಳಸಮುದ್ರಕ್ಕೆ ತೆರಳಿದರೂ ಬಲೆಯಲ್ಲಿ ಮೀನಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ವಸ್ತುಗಳು ಸಿಕ್ಕಿವೆ.

ಬೈತಖೋಲ ಬಂದರಿನಲ್ಲಿ ನೂರಾರು ದೋಣಿಗಳು ಲಂಗರು ಹಾಕಿ ನಿಂತಲ್ಲೇ ನಿಂತಿವೆ. ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಸಾವಿರಾರು ಮಂದಿ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ.

‘ಎರಡು ವರ್ಷಗಳಿಂದ ಇಷ್ಟೊಂದು ಪ್ರಮಾಣದಲ್ಲಿ ಮತ್ಸ್ಯಕ್ಷಾಮ ಕಾಣುತ್ತಿದ್ದೇವೆ. ಸಾಧಾರಣ ಮೇ ಕೊನೆಯ ತನಕವೂ ಸಾಕಷ್ಟು ಪ್ರಮಾಣದಲ್ಲಿ ಮೀನುಗಳು ಬಲೆಗೆ ಬೀಳುತ್ತಿದ್ದವು. ಆದರೆ, ಈಗ ಹಾಗಿಲ್ಲ. ಸಮುದ್ರಕ್ಕೆ ಹೋಗಿ ಬರಲು ದೋಣಿಗಳಿಗೆ ಖರ್ಚು ಮಾಡುವ ಡೀಸೆಲ್ ದರವೂ ಸಿಗುತ್ತಿಲ್ಲ’ ಎನ್ನುತ್ತಾರೆ ಮೀನುಗಾರ ವಿನಾಯಕ ಹರಿಕಂತ್ರ.

‘ಬಹಳ ದಿನಗಳ ನಂತರ ಬೈತಖೋಲ ಬಂದರಿನಿಂದ ಒಂದೇ ದೋಣಿ ಅದೃಷ್ಟ ಪರೀಕ್ಷೆಗೆ ಎಂಬಂತೆ ಸಮುದ್ರಕ್ಕೆ ತೆರಳಿತ್ತು. ಆದರೆ, ಒಂದೆರಡು ಬುಟ್ಟಿ ಸೆಟ್ಲೆ ಮೀನುಗಳು ಸಿಕ್ಕಿದವು. ಉಳಿದಂತೆ, ಬಲೆಯ ತುಂಬ ಪ್ಲಾಸ್ಟಿಕ್ ತ್ಯಾಜ್ಯ, ಎಲೆಗಳು, ಕಸ ಕಡ್ಡಿಗಳೇ ತುಂಬಿದ್ದವು’ ಎಂದು ಅವರು ಹೇಳುತ್ತಾರೆ.

‘ಕಳೆದ ವರ್ಷ ಸಮುದ್ರದಲ್ಲಿ ತಕ್ಕಮಟ್ಟಿಗೆ ಮೀನಿತ್ತು. ಆದರೆ, ಕೋವಿಡ್ ಕಾರಣದಿಂದ ದೋಣಿಗಳು ಸಮುದ್ರಕ್ಕೆ ಹೋಗಿರಲಿಲ್ಲ. ಈ ಹಿಂದಿನ ಹಲವು ವರ್ಷಗಳಲ್ಲಿ ಪ್ರತಿವರ್ಷವೂ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಒಂದೊಂದು ದೋಣಿಯೂ ದಿನವೊಂದಕ್ಕೆ ಸುಮಾರು ₹ 25 ಸಾವಿರಗಳಷ್ಟು ಮೌಲ್ಯದ ಮೀನುಗಳನ್ನು ಹೊತ್ತು ತರುತ್ತಿದ್ದವು. ಈಗ ಲೆಪ್ಪೆ ಮೀನು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹ 200 ದರವಿದೆ. ಆದರೆ, ಮೀನೇ ಸಿಗುತ್ತಿಲ್ಲ. ಹಾಗಾಗಿ ದರವಿದ್ದರೂ ಮೀನುಗಾರರಿಗೆ ಪ್ರಯೋಜನವಾಗುತ್ತಿಲ್ಲ’ ಎಂದು ವಿವರಿಸುತ್ತಾರೆ.

‘ಮೀನುಗಾರಿಕಾ ದೋಣಿಗಳನ್ನೇ ನೆಚ್ಚಿಕೊಂಡು ದುಡಿಮೆಗೆ ಬಂದ ಕಾರ್ಮಿಕರು ಮೀನಿಲ್ಲ ಎಂದು ಊರಿಗೆ ವಾಪಸ್ ಹೋಗಿದ್ದಾರೆ.  ಅನಧಿಕೃತ ಮೀನುಗಾರಿಕಗೆ, ಹೈಸ್ಪೀಡ್ ದೋಣಿಗಳಲ್ಲಿ ಮೀನುಗಾರಿಕೆ, ಅವೈಜ್ಞಾನಿಕ ರೀತಿಯ ಮೀನುಗಾರಿಕೆಯಿಂದ ಈ ರೀತಿಯಾಗುತ್ತಿದೆ’ ಎಂದು ಮೀನುಗಾರ ಮುಖಂಡರು ಅಭಿಪ್ರಾಯಪಡುತ್ತಾರೆ.

ಕಾಳಿ ನದಿಯಲ್ಲಿ ಡಾಲ್ಫಿನ್!:

ಕೆಲವು ದಿನಗಳ ಹಿಂದೆ ಕಾರವಾರದ ಸದಾಶಿವಗಡ ಸಮೀಪ ಕಾಳಿ ನದಿಯಲ್ಲಿ ಡಾಲ್ಫಿನ್ ಮೀನುಗಳು ಕಾಣಿಸಿಕೊಂಡಿದ್ದವು. ಸಾಧಾರಣ ಸಮುದ್ರದಲ್ಲೇ ಇರುವ ಅವು, ನದಿಯತ್ತ ಸಾಗಿದ್ದು ಅಚ್ಚರಿ ಮೂಡಿಸಿತ್ತು.‌ ಇದಕ್ಕೂ ಸಮುದ್ರದಲ್ಲಿ ಮೀನುಗಳ ಕೊರತೆಯೇ ಕಾರಣ ಎಂಬುದು ಮೀನುಗಾರರ ವಾದವಾಗಿದೆ.

‘ಜೀವಿಗಳ ವಾಸಸ್ಥಾನದಲ್ಲಿ ಆಹಾರದ ಕಡಿಮೆಯಾದಾಗ ಬೇರೆ ಕಡೆಗೆ ಹುಡುಕಿಕೊಂಡು ಹೋಗುವುದು ಸಹಜ ಪ್ರಕ್ರಿಯೆಯಾಗಿದೆ. ಅದೇರೀತಿ, ಡಾಲ್ಫಿನ್‌ಗಳೂ ಕಾಳಿ ನದಿಯಲ್ಲಿ ಮೀನು ಬೇಟೆಗೆ ಹೋಗಿವೆ’ ಎನ್ನುವುದು ಕಡಲಜೀವ ವಿಜ್ಞಾನದ ಪರಿಣತರ ಅನಿಸಿಕೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು