ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದ ಬೇಗೆ: ಹಸುಗೂಸು ಮಾರಾಟ, ಅಧಿಕಾರಿಗಳ ಮೊರೆ ಹೋದ ತಾಯಿ

Last Updated 22 ಸೆಪ್ಟೆಂಬರ್ 2022, 15:48 IST
ಅಕ್ಷರ ಗಾತ್ರ

ಕಾರವಾರ: ಆ ತಾಯಿಗೆ ಮನೆಯಲ್ಲಿರುವ ಬಡತನವು, ತನ್ನದೇ ಹಸುಗೂಸನ್ನು ಮಾರಾಟ ಮಾಡುವಂತೆ ಮಾಡಿಸಿತು. ಮತ್ತೊಂದೆಡೆ,ಭಟ್ಕಳದ ನಿವಾಸಿಯೊಬ್ಬರಿಗೆ ‘ತಮಗೊಬ್ಬಳು ಮಗಳು ಬೇಕು’ ಎಂಬ ಬಯಕೆಯು ಆ ಶಿಶುವನ್ನು ₹1.70 ಲಕ್ಷಕ್ಕೆ ‘ಖರೀದಿ’ಸಲು ಪ್ರೇರೇಪಿಸಿತು.

10 ದಿನಗಳ ಕಂದ ತನ್ನಿಂದ ದೂರವಾದ ಬಳಿಕ ತಾಯಿಗೆ ತನ್ನ ಮಗು ಬೇಕು ಎನಿಸಿತು. ಕಂದನನ್ನು ವಾಪಸ್ ಕೊಡಿಸುವಂತೆ ಅಧಿಕಾರಿಗಳ ಮೊರೆ ಹೋದರು. ಈ ಪ್ರಕರಣವು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

‍ಪ್ರಕರಣದ ವಿವರ:ಅಂಕೋಲಾ ತಾಲ್ಲೂಕಿನ ಅಜ್ಜಿಕಟ್ಟಾದ ಪ್ರೇಮಾ ಆಗೇರ (35), ಸೆ.5ರಂದು ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ತಮಗೆ ಮನೆಯಲ್ಲಿ ತುಂಬ ಬಡತನವಿದೆ ಎಂದು ಬೇಸರಗೊಂಡಿದ್ದರು. ತಮಗೆ ಮಗುವನ್ನು ಸಾಕಲು ಸಾಧ್ಯವಿಲ್ಲ, ಯಾರಾದರೂ ಹಣ ಕೊಟ್ಟರೆ ಅವರಿಗೆ ಸಾಕಲು ಕೊಡುವುದಾಗಿ ಆಸ್ಪತ್ರೆಯ ನರ್ಸ್‌ ಬಳಿ ಹೇಳಿಕೊಂಡಿದ್ದರು.

ಸೆ.15ರಂದು ಪ್ರೇಮಾ ಅವರು ಶಿಶುವನ್ನು ಅಂಕೋಲಾದ ಬಸ್ ನಿಲ್ದಾಣದ ಬಳಿಯ ಜೈಹಿಂದ್ ಮೈದಾನಕ್ಕೆ ತೆಗೆದುಕೊಂಡು ಬಂದಿದ್ದರು. ಭಟ್ಕಳದ ಶ್ರೀಧರ ವೆಂಕಯ್ಯ ನಾಯ್ಕ ಎಂಬುವವರಿಂದ ₹ 1 ಲಕ್ಷ ನಗದು ಮತ್ತು ₹ 70 ಸಾವಿರದ ಚೆಕ್ ಪಡೆದುಕೊಂಡು ಕರುಳಕುಡಿಯನ್ನು ನೀಡಿದ್ದರು.

ಬಳಿಕ ಅಂಕೋಲಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಬಂದ ಪ್ರೇಮಾ, ನಡೆದ ಸಂಗತಿಯನ್ನು ಅಧಿಕಾರಿಗಳಿಗೆ ವಿವರಿಸಿದರು. ಮಗುವನ್ನು ವಾಪಸ್ ಕೊಡಿಸುವಂತೆ ಕೇಳಿಕೊಂಡರು. ಭಟ್ಕಳದಿಂದ ಮಗುವನ್ನು ಕರೆದುಕೊಂಡು ಬಂದ ಅಧಿಕಾರಿಗಳು, ಸದ್ಯ ಕಾರವಾರದ ಮಕ್ಕಳ ದತ್ತು ಸ್ವೀಕಾರ ಕೇಂದ್ರದಲ್ಲಿ ಆರೈಕೆ ಮಾಡುತ್ತಿದ್ದಾರೆ.

ಮಗುವಿನ ದತ್ತು ಸ್ವೀಕಾರ ಪ್ರಕ್ರಿಯೆಯಲ್ಲಿ ಕಾನೂನು ಪಾಲನೆಯಾಗದ ಕಾರಣ, ಕ್ರಮ ಕೈಗೊಳ್ಳುವಂತೆ ಅಂಕೋಲಾದ ಪ್ರಭಾರ ಸಿ.ಡಿ.ಪಿ.ಒ ಸವಿತಾ ಸಿದ್ದಯ್ಯ ಶಾಸ್ತ್ರಿಮಠ ಪೊಲೀಸರಿಗೆ ದೂರು ನೀಡಿದ್ದಾರೆ. ಮಗುವಿನ ತಾಯಿ ಪ್ರೇಮಾ, ಖರೀದಿಸಿದ ಶ್ರೀಧರ ನಾಯ್ಕ ಹಾಗೂ ನರ್ಸ್ ಅಶ್ವಿನಿ ವಿರುದ್ಧ ಅಂಕೋಲಾ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ದತ್ತು ಪಡೆಯಲು ನಿಯಮಗಳೇನು?:‘ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 56 ಅನ್ವಯ ಜೈವಿಕ ಪಾಲಕರಿಂದ ಬೇರೆಯಾದ ಮಗುವನ್ನು ದತ್ತು ಪಡೆಯಬಹುದು. ಆದರೆ, ಅದಕ್ಕೆ ಹಲವು ನಿಯಮಗಳನ್ನು ಪಾಲಿಸಬೇಕು’ ಎಂದು ಕಾರವಾರದ ಮಕ್ಕಳ ರಕ್ಷಣಾಧಿಕಾರಿ (ಸಾಂಸ್ಥಿಕ, ಪೋಷಣೆ) ಮಹೇಶ ಜಿ.ಮುಕ್ರಿ ತಿಳಿಸಿದ್ದಾರೆ.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ಈಗ ಮಗುವನ್ನು ದತ್ತು ಪಡೆಯಲು ಆನ್‌ಲೈನ್ ಮೂಲಕ ನೋಂದಣಿ ವ್ಯವಸ್ಥೆಯಿದೆ. ನಾಲ್ಕು ವರ್ಷದ ಒಳಗಿನ ಮಕ್ಕಳನ್ನು ದತ್ತು ಪಡೆಯುವ ದಂಪತಿಯ ಒಟ್ಟಾರೆ ವಯಸ್ಸು 90 (ಗಂಡ ಮತ್ತು ಹೆಂಡತಿಯ ವಯಸ್ಸನ್ನು ಕೂಡಿಸಿದಾಗ ಬರುವ ಸಂಖ್ಯೆ) ಮೀರಿರಬಾರದು. ಇವರಲ್ಲಿ ಒಬ್ಬರ ವಯಸ್ಸು 45 ಮೀರಿರಬಾರದು’ ಎಂದರು.

‘4ರಿಂದ 8 ವರ್ಷದ ಒಳಗಿನ ಮಕ್ಕಳನ್ನು ದತ್ತು ಪಡೆಯಲು ದಂಪತಿಯ ಒಟ್ಟು ವಯಸ್ಸು 100 ದಾಟಬಾರದು. ಇವರಲ್ಲಿ ಒಬ್ಬರ ವಯಸ್ಸು 50ಕ್ಕಿಂತ ಮೇಲಿರಬಾರದು. 8ರಿಂದ 18 ವರ್ಷದ ಮಕ್ಕಳನ್ನು ದತ್ತು ಪಡೆಯಲು ದಂಪತಿಯ ವಯಸ್ಸು 110ರ ಒಳಗಿರಬೇಕು’ ಎಂದು ವಿವರಿಸಿದರು.

‘ಅವಿವಾಹಿತ ಅಥವಾ ಏಕ ಪೋಷಕ ಪುರುಷರಿಗೆ ಹೆಣ್ಣು ಮಗುವನ್ನು ದತ್ತು ಪಡೆಯಲು ಅವಕಾಶವಿಲ್ಲ. ಮಗು ಮತ್ತು ದತ್ತು ಪಡೆಯುವ ಪಾಲಕರ ನಡುವೆ 21 ವರ್ಷಗಳ ಅಂತರವಿರಬೇಕು. ಈ ರೀತಿಯ ಹಲವು ನಿಬಂಧನೆಗಳಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT