ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ತುಳಸಿ ಗೌಡರಿಗೆ 'ಮದರ್ ಥೆರೇಸಾ ಸ್ಮಾರಕ ಪ್ರಶಸ್ತಿ' ಪ್ರದಾನ ನಾಳೆ

Last Updated 12 ಡಿಸೆಂಬರ್ 2021, 5:19 IST
ಅಕ್ಷರ ಗಾತ್ರ

ಅಂಕೋಲಾ: ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರ ಸಾಮಾಜಿಕ ಸೇವೆ ಮತ್ತು ಸುಸ್ಥಿರ ಪರಿಸರದ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಪ್ರತಿಷ್ಠಿತ 'ಮದರ್ ಥೆರೇಸಾ ಸ್ಮಾರಕ ಪ್ರಶಸ್ತಿ 2021' ಪ್ರಕಟವಾಗಿದೆ.

ಸಾಮಾಜಿಕ ಸೇವೆ ಮತ್ತು ಪರಿಸರದ ಕುರಿತು ಜಾಗೃತಿ ಮೂಡಿಸುವ ಹಾರ್ಮೋನಿ ಫೌಂಡೇಷನ್, ಡಿ. 13ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ. ಇದು ಫೌಂಡೇಷನ್‌ನ 17ನೇ ವರ್ಷದ ಪ್ರಶಸ್ತಿಯಾಗಿದೆ.

'ವೃಕ್ಷ ಮಾತೆ'ಯೆಂದು ಗುರುತಾಗಿರುವ ತುಳಸಿ ಗೌಡ ಇತ್ತೀಚಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪುರಸ್ಕಾರ 'ಪದ್ಮಶ್ರೀ' ಸ್ವೀಕರಿಸಿದ್ದರು. ಔಪಚಾರಿಕ ಶಿಕ್ಷಣ ಪಡೆಯದೆ ಸಸ್ಯಗಳ ಪಾಲನೆ-ಪೋಷಣೆಯಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಅವರು ತೊಡಗಿಸಿಕೊಂಡಿದ್ದಾರೆ. ಗಿಡ-ಮರಗಳ ಕುರಿತಾದ ಅವರ ಜ್ಞಾನವು ಜೀವನಾನುಭವದಿಂದ ದೊರೆತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹಾರ್ಮೋನಿ ಫೌಂಡೇಷನ್ ಅಧ್ಯಕ್ಷ ಡಾ. ಅಬ್ರಾಹಂ ಮಥೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದರ್ ಥೆರೇಸಾ ಸ್ಮರಣಾರ್ಥವಾಗಿ ಸ್ಥಾಪನೆಯಾದ ಹಾರ್ಮೋನಿ ಫೌಂಡೇಷನ್ ಪ್ರತಿವರ್ಷ ಮಾನವೀಯ ಮೌಲ್ಯಗಳನ್ನು ಜಗತ್ತಿನಾದ್ಯಂತ ಪಸರಿಸುವ ಸಾಧಕರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ. ಬೌದ್ಧ ಧರ್ಮಗುರು ದಲೈಲಾಮಾ, ಮಾನವ ಹಕ್ಕುಗಳ ಹೋರಾಟಗಾರ್ತಿ ಮಲಾಲಾ, ಮಲೇಷ್ಯಾದ ಪ್ರಧಾನಿ ಮಹತಿರ್ ಮಹಮದ್, ಹೋರಾಟಗಾರ ಅಣ್ಣಾ ಹಜಾರೆ, ಇನ್ಫೋಸಿಸ್‌ ಫೌಂಡೇಷನ್‌ನ ಸುಧಾ ಮೂರ್ತಿ, ಹೋರಾಟಗಾರ್ತಿ ಮೇಧಾ ಪಾಟ್ಕರ್ ಸೇರಿದಂತೆ ಹಲವು ಗಣ್ಯರು ಈ ಹಿಂದೆ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ತುಳಸಿ ಗೌಡ, ಕರ್ನಾಟಕದಿಂದ ಈ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಮಹಿಳೆಯಾಗಿದ್ದಾರೆ.

ಎರಡನೇ ಬಾರಿ ವಿಮಾನ ಏರಲಿರುವ ತುಳಸಿ ಗೌಡ

ಮುಂಬೈನಲ್ಲಿ ನಡೆಯಲಿರುವ ಸಮಾರಂಭ ಕೋವಿಡ್ ಕಾರಣದಿಂದ ಸರಳವಾಗಿ ನಡೆಯಲಿದೆ. ತುಳಸಿ ಗೌಡ ಅವರು ಹುಬ್ಬಳ್ಳಿಯಿಂದ ಮುಂಬೈಗೆ ಡಿ.12ರಂದು ವಿಮಾನದ ಮೂಲಕ ಪ್ರಯಾಣಿಸಲಿದ್ದಾರೆ.

'ಪದ್ಮಶ್ರೀ ಪುರಸ್ಕಾರದ ನಂತರ ದೇಶದ ಇನ್ನೊಂದು ದೊಡ್ಡ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ವಿಮಾನದ ಮೂಲಕ ಪ್ರಯಾಣಿಸುವುದು ಹರ್ಷದಾಯಕ' ಎಂದು ತುಳಸಿ ಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT