ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಮಸ್ಯೆಗಳಿಗೆ ಜನಪರ ಚಳವಳಿ ಮದ್ದು: ಎಚ್.ಎನ್.ನಾಗಮೋಹನದಾಸ್ ಅಭಿಮತ

ಅಂಗನವಾಡಿ ನೌಕರರ ಸಂಘದ ಸಮ್ಮೇಳನದಲ್ಲಿ ನ್ಯಾಯಮೂರ್ತಿ ಹೇಳಿಕೆ
Last Updated 12 ಡಿಸೆಂಬರ್ 2018, 13:02 IST
ಅಕ್ಷರ ಗಾತ್ರ

ಶಿರಸಿ: ‘ಇಂದಿನ ಜನಸಮಸ್ಯೆಗಳಿಗೆ ಜನಪರ ಚಳವಳಿಯೇ ಪರಿಹಾರ ಮತ್ತು ಮದ್ದು. ಸಂಕಷ್ಟ, ಸಮಸ್ಯೆಗಳ ಪರಿಹಾರಕ್ಕೆ, ಬೇಡಿಕೆ ಈಡೇರಿಕೆಗೆ ಸಂಘಟನಾತ್ಮಕ ಹೋರಾಟಗಳೇ ಉತ್ತರ ನೀಡಬಲ್ಲವು’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟರು.

ಮಂಗಳವಾರ ಇಲ್ಲಿ ಆಯೋಜಿಸಿದ್ದ ಅಂಗನವಾಡಿ ನೌಕರರ ತಾಲ್ಲೂಕು ಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಜಗತ್ತಿನ ಎಲ್ಲ ದೇಶಗಳಲ್ಲೂ ಅರ್ಧದಷ್ಟು ಮಹಿಳೆಯರಿದ್ದಾರೆ. ಎಲ್ಲ ಕಡೆಗಳಲ್ಲಿಯೂ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡಲಾಗುತ್ತಿದೆ. ರಾಜಕೀಯ ಶಕ್ತಿ ನೀಡುವ, ಕಾನೂನು ಅನುಷ್ಠಾನಗೊಳಿಸುವ, ಅದನ್ನು ವ್ಯಾಖ್ಯಾನಿಸುವ, ಕಾನೂನು ಉಲ್ಲಂಘಿಸಿದರೆ ಶಿಕ್ಷೆ ನೀಡುವ ಇಂತಹ ಎಲ್ಲ ಪ್ರಕ್ರಿಯೆಗಳಿಂದ ಮಹಿಳೆಯರನ್ನು ಹೊರಗಿಡಲಾಗಿದೆ. ಎಲ್ಲ ಅಧಿಕಾರಗಳನ್ನು ಪುರುಷ ತನ್ನ ಕೈಯಲ್ಲೇ ಇಟ್ಟುಕೊಂಡಿರುವುದರಿಂದ ಮಹಿಳೆ ಶಕ್ತಿಹೀನಳಾಗಿದ್ದಾಳೆ ಎಂದರು.

ಇಡೀ ವಿಶ್ವದಲ್ಲಿ ಒಟ್ಟು ದುಡಿಮೆಯ 2/3ರಷ್ಟು ಶ್ರಮಶಕ್ತಿ ಮಹಿಳೆಯರದ್ದೇ ಆಗಿದೆ. ಆದರೆ, ಮಹಿಳೆ ದುಡಿದಿರುವ ಕಾರ್ಯ, ಮಾಡಿರುವ ಸಂಪತ್ತಿಗೆ ಸಮಾನವಾಗಿ ಈ ಸಮಾಜ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿಲ್ಲ. ಸಂಪತ್ತಿನ ಮೇಲೆ ಅಧಿಕಾರ ಚಲಾಯಿಸುವ ಹಕ್ಕು ಮಹಿಳೆಯರಿಗೆ ಸಿಕ್ಕಿಲ್ಲ. ಹೀಗಾಗಿ, ಕಡಿಮೆ ಶ್ರಮಪಡುವವರು ಹೆಚ್ಚು ಕೆಲಸ ಮಾಡುವವರ ಮೇಲೆ ಅಧಿಕಾರ ಚಲಾಯಿಸುವಂತಾಗಿದೆ. ಆರ್ಥಿಕ, ರಾಜಕೀಯವಾಗಿ ಶಕ್ತಿಹೀನರಾಗಿದ್ದರಿಂದ ಸಹಜವಾಗಿ ಮಹಿಳೆಯರು ಗುಲಾಮರಂತೆ ಬಾಳಬೇಕಾಗಿ ಬಂದಿದೆ ಎಂದು ವಿಷಾದಿಸಿದರು.

ಈ ಸಮಾಜದಲ್ಲಿ ಧರ್ಮ, ಶಾಸ್ತ್ರ, ಮಹಾಕಾವ್ಯ ಇತ್ಯಾದಿಗಳು ಮಹಿಳೆಯರನ್ನು ಎರಡನೇ ದರ್ಜೆಯಲ್ಲೇ ಉಳಿಸಿದವು. ಹಾಗಾಗಿ, ಮಹಿಳೆಯರು ಸ್ವತಂತ್ರವಾಗಿ ಮಾತಾಡುವಂತಿಲ್ಲ, ತಿರುಗಾಡುವಂತಿಲ್ಲ, ವ್ಯವಹರಿಸುವಂತಿಲ್ಲ, ಬದುಕುವಂತಿಲ್ಲದ ಪರಿಸ್ಥಿತಿ ಇದೆ. ಧಾರ್ಮಿಕವಾಗಿ ಬಂಧನದಲ್ಲಿ ಉಳಿಯುವಂತಾಗಿದೆ ಎಂದು ಹೇಳಿದರು.

ಇಂಥ ಪರಿಸ್ಥಿತಿಯ ವಿರುದ್ಧ ಜಗತ್ತಿನಾದ್ಯಂತ ಹೋರಾಟಗಳು ನಡೆದ ಫಲವಾಗಿ, ಅಲ್ಪಸ್ವಲ್ಪ ಹಕ್ಕುಗಳು ದೊರೆತಿವೆ. ಆದರೆ, ಗ್ರಾಮ ಪಂಚಾಯ್ತಿದಿಂದ ಜಿಲ್ಲಾ ಪಂಚಾಯ್ತಿ ತನಕದ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ಸೀಮಿತ ಮಾಡಿ, ಕಾನೂನು ನಿರ್ಮಿಸುವ ವಿಧಾನಸಭೆ ಮತ್ತು ಸಂಸತ್ತಿನ ಪ್ರಮುಖ ಜಾಗದಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ಜಾರಿಯಾಗದಂತೆ ತಡೆಯಲಾಗಿದೆ ಎಂದು ಆರೋಪಿಸಿದರು.

ಅಂಗನವಾಡಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಯಮುನಾ ಗಾಂವ್ಕರ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್. ಶಾನಭಾಗ, ಪ್ರಮುಖರಾದ ನಾಗಪ್ಪ ನಾಯ್ಕ, ಸುಮಂಗಲಾ ಹೇರೂರ್ಕರ್, ಸವಿತಾ ಬಾಗಡೆ, ತನುಜಾ ನೇತ್ರೇಕರ್, ರೋಹಿಣಿ ಪಾವುಸ್ಕರ್, ಜ್ಯೋತಿ ನಾಯ್ಕ, ನಾಗರತ್ನ ಡಿ, ನಾಗರತ್ನ ಹೆಗಡೆ, ವಾಣಿ ನಾಯ್ಕ, ದೇವಕಿ ನಾಯ್ಕ, ಪ್ರಭಾ ನಾಯ್ಕ, ವೇದಾವತಿ ಹೆಗಡೆ, ಶ್ರೀಲೇಖಾ ವೈದ್ಯ ಉಪಸ್ಥಿತರಿದ್ದರು. ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷೆ ವಿದ್ಯಾ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಲೀಲಾವತಿ ಹೆಗಡೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT