ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರ ಮಣಿಸಲು ಸರ್ಕಾರ ಕಾತರ: ಸಂಸದ ಅನಂತಕುಮಾರ ಹೆಗಡೆ

ಅಧಿಕಾರಿಗಳಿಗೆ ಕಟು ಎಚ್ಚರಿಕೆ
Last Updated 3 ಜುಲೈ 2021, 13:40 IST
ಅಕ್ಷರ ಗಾತ್ರ

ಕಾರವಾರ: ‘ಭ್ರಷ್ಟ ಅಧಿಕಾರಿಗಳನ್ನು ಮಣಿಸಲು ಕೇಂದ್ರ ಸರ್ಕಾರ ಕಾಯುತ್ತಿದೆ. ಎಲ್ಲರೂ ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಸಂಸದ ಅನಂತಕುಮಾರ ಹೆಗಡೆ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಂಜಿನಿಯರ್‌ಗೆ ಕಟುವಾಗಿ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ‘ದಿಶಾ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಲಜೀವನ ಮಿಷನ್ ಯೋಜನೆಯಡಿ ಜನಪ್ರತಿನಿಧಿಗಳನ್ನು ಹೊರಗಿಟ್ಟು ಕ್ರಿಯಾ ಯೋಜನೆ ರೂಪಿಸಲಾಗುತ್ತದೆ’ ಎಂಬ ಶಾಸಕಿ ರೂಪಾಲಿ ನಾಯ್ಕ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿದರು.

‘ಕಡತದಲ್ಲಿ ಪ್ರಗತಿ ತೋರಿಸಿದರೆ ಸಾಲದು. ನಿಮಗೆ ನಿವೃತ್ತಿಯ ನಂತರ ಪಿಂಚಣಿ ಹಣವೂ ಸಿಗದೇ ಹೋಗಬಹುದು. ನಿವೃತ್ತರಾಗಿ ಹೋದವರನ್ನು ಎಳೆತಂದು ಬಲಿ ಕೊಡಲಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಲ ಜೀವನ ಮಿಷನ್, ನರೇಗಾ, ವಸತಿ, ಆರೋಗ್ಯ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಟಾನಕ್ಕಾಗಿ ನೇರವಾಗಿ ನೀಡುತ್ತಿರುವ ವಿಶೇಷ ಅನುದಾನದ ಬಳಕೆ ಬಗ್ಗೆ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ, ಅಧಿಕಾರಶಾಹಿಯಲ್ಲ. ನೀವು ಮನಸ್ಸಿಗೆ ಬಂದಂತೆ ಮಾಡಲು ಸ್ವತಂತ್ರರಲ್ಲ. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು’ ಎಂದರು.

‘ಜಲ ಜೀವನ ಮಿಷನ್‍ನಲ್ಲಿ ನೀವು ಮಾಡಬೇಕಾದ ಕಾರ್ಯದ ಬಗ್ಗೆ ಕೇಂದ್ರ ಸರ್ಕಾರವೇ ವಿವರ ನೀಡಿದೆ. ನೀವು ಕ್ರಿಯಾ ಯೋಜನೆ ಸಲ್ಲಿಸುವುದು ಹೆಸರಿಗೆ ಮಾತ್ರ. ನಾವು ಹೊಳೆಯಲ್ಲಿ ಹೋಮ ಮಾಡುತ್ತಿಲ್ಲ. ಸಮುದ್ರದಲ್ಲಿ ಮನೆ ಕಟ್ಟುತ್ತಿಲ್ಲ. ಕೇಂದ್ರ ಸರ್ಕಾರ ಮಾಡುತ್ತಿರುವ ಕಾರ್ಯ ಜನರಿಗೆ ತಿಳಿಯಬೇಕು. ಎಲ್ಲ ಶಾಸಕರಿಗೆ ಮಾಹಿತಿ ನೀಡಬೇಕು’ ಎಂದು ತಾಕೀತು ಮಾಡಿದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸು ಜಲಜೀವನ ಮಿಷನ್ ಕ್ಷೇತ್ರದಲ್ಲಿ ಹಳ್ಳ ಹಿಡಿಯುತ್ತಿದೆ. ಈ ವರ್ಷ ಮಾಡಿದ ಕ್ರಿಯಾ ಯೋಜನೆಯ ಬಗ್ಗೆ ಯಾವುದೇ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ನೀರು ಇದ್ದ ಕಡೆಯೇ ಮತ್ತೊಂದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ದೂರಿದರು.

‘ಕಂಪ್ಯೂಟರ್ ಎದುರು ಕುಳಿತು ಕ್ರಿಯಾ ಯೋಜನೆ ಸಿದ್ಧ ಮಾಡಲಾಗಿದೆ. ಜನರಿಗೆ ನಾವು ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಬಗೆಹರಿಸಿ’ ಎಂದು ಆಗ್ರಹಿಸಿದರು.

‘ಜೇನು ಕೃಷಿಗೆ ಅವಕಾಶ’: ‘ಜಿಲ್ಲೆಯಲ್ಲಿ ಜೇನು ಕೃಷಿಗೆ ಉತ್ತಮ ಅವಕಾಶಗಳಿವೆ. ಜೇನು ಕೃಷಿಗೆ ಪೂರಕವಾಗುವಂಥ ಸುಮಾರು 10 ತಳಿಗಳ ಮರಗಳನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವುಗಳನ್ನು ಬೆಳೆಸಿ ಅರಣ್ಯ ಪ್ರದೇಶದಲ್ಲಿ ನೆಡಬೇಕು. ಇದರಿಂದ ಪರಿಸರ ವೃದ್ಧಿ ಜೊತೆಗೆ ಜೇನು ಕೃಷಿಕರಿಗೆ ಸಹಕಾರಿಯಾಗಲಿದೆ’ ಎಂದು ಅನಂತಕುಮರ ಹೆಗಡೆ ಅಭಿಪ್ರಾಯಪಟ್ಟರು.

ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT