ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಸುಸಜ್ಜಿತ ಆಸ್ಪತ್ರೆಗೆ ಖಾಸಗಿ ಸಹಭಾಗಿತ್ವ- ಸಚಿವ ಕೋಟ

ಕುಮಟಾ ಸುತ್ತಮುತ್ತ 17 ಎಕರೆ ಗುರುತು; ಆಸಕ್ತ ಆಸ್ಪತ್ರೆಗಳಿಂದ ಪರಿಶೀಲನೆ
Last Updated 1 ಆಗಸ್ಟ್ 2022, 13:52 IST
ಅಕ್ಷರ ಗಾತ್ರ

ಕಾರವಾರ: ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಕುಮಟಾ ಆಸುಪಾಸಿನಲ್ಲಿ 17 ಎಕರೆ ಗುರುತಿಸಲಾಗಿದೆ. ಅದನ್ನು 25 ಎಕರೆಗೆ ವಿಸ್ತರಿಸಿ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಟ್ರಾಮಾ ಸೆಂಟರ್ ಸ್ಥಾಪನೆಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಹಟ್ಟಿಕೇರಿಯಲ್ಲಿ 16.5 ಎಕರೆ ಜಾಗ ಕಾಯ್ದಿರಿಸಲಾಗಿದೆ’ ಎಂದೂ ತಿಳಿಸಿದರು.

‘ಈ ವಾರದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಆ.15ರಿಂದ 17ರ ನಡುವೆ ಒಂದು ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿ, ಕರಾವಳಿಯ ಮೂರೂ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯಗಳ ಬಗ್ಗೆ ಆಗ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆಯಿದೆ’ ಎಂದು ಹೇಳಿದರು.

ಪ‍್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ‘ರೋಗಿಗಳಿಗೆ ಆಂಬುಲೆನ್ಸ್ ಸರಿಯಾಗಿ ಸಿಗುತ್ತಿಲ್ಲ’ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಪ್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ 45 ಆಂಬುಲೆನ್ಸ್ ಚಾಲನೆಯಲ್ಲಿವೆ. ಅವುಗಳಲ್ಲಿ ‘108’ ಅಡಿಯಲ್ಲಿ 20 ಕಾರ್ಯನಿರ್ವಹಿಸುತ್ತಿದ್ದು, ನಾಲ್ಕು ಮಾತ್ರ ಹೊಸದು. ಆಂಬುಲೆನ್ಸ್ 2012ಕ್ಕಿಂತ ಮೊದಲು ಖರೀದಿಸಿದ ಉಳಿದ 16 ಅನ್ನು ಬದಲಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ರೂಪಾಲಿ ನಾಯ್ಕ, ‘ಹೊಸದು ಏಕೆ ಸಂಚರಿಸುತ್ತಿಲ್ಲ? ಕಾಲ್ ಸೆಂಟರ್ ಮಾಡಲು ಉದ್ದೇಶಿಸಲಾಗಿತ್ತು. ಯಾಕಾಗಿಲ್ಲ’ ಎಂದು ಖಾರವಾಗಿ ಪ್ರಶ್ನಿಸಿದರು.

ಶಾಸಕರ ನಿಧಿಯಿಂದ ನೀಡಲಾದ ಆಂಬುಲೆನ್ಸ್‌ಗಳಿಂದ ತಮ್ಮ ಭಾವಚಿತ್ರಗಳನ್ನು ತೆರವು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ‘ಇಲ್ಲೇನು ರಾಜಕಾರಣ ಮಾಡಲು ಬಂದಿದ್ದೀರ? ಜಿಲ್ಲೆಯಲ್ಲಿ ರೂಪಾಲಿ ನಾಯ್ಕರಿಗೆ ಮಾತ್ರ ನಿಯಮ ಅನ್ವಯವಾಗುತ್ತದೆಯೇ? ಇವರನ್ನು ನಂಬಿ ಆರೋಗ್ಯ ಇಲಾಖೆಯೇ ಹಾಳಾಗಿ ಹೋಗಿದೆ. ಇವರನ್ನು ವರ್ಗಾವಣೆ ಮಾಡಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘10 ದಿನದಲ್ಲಿ ಟೋಲ್‌ ಫ್ರೀ ಸಂಖ್ಯೆಯನ್ನು ಆರಂಭಿಸಬೇಕು. ಇಲ್ಲದಿದ್ದರೆ ನಿಮ್ಮನ್ನೇ ಬದಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಕ್ರಿಮ್ಸ್ ಆವರಣದಲ್ಲಿ ₹ 160 ಕೋಟಿ‌ ವೆಚ್ಚದಲ್ಲಿ ನಡೆಯುತ್ತಿರುವ 450 ಹಾಸಿಗೆಗಳ ಕಟ್ಟಡ ಕಾಮಗಾರಿ ನಿಧಾನವಾಗಿ ಸಾಗಿದೆ’ ಎಂದರು.

ಆರೋಗ್ಯಾಧಿಕಾರಿ ಪ್ರತಿಕ್ರಿಯಿಸಿ, ‘ನರರೋಗ ತಜ್ಞರು ಹಾಗೂ ಹೃದ್ರೋಗ ಸರ್ಜನ್‌ ಬೇಕು. ಎಂ.ಆರ್.ಐ ಯಂತ್ರವೂ ಬೇಕಾಗಿದೆ. ಹೊಸ ಕಟ್ಟಡದಲ್ಲಿ ಟ್ರಾಮಾ‌ ಹಾಗೂ ಕ್ಯಾನ್ಸರ್ ಸೆಂಟರ್‌ಗಳೂ ಇವೆ. ಎಲ್ಲದಕ್ಕೂ ಸಿಬ್ಬಂದಿ ನೇಮಕವಾಗಬೇಕು’‍ ಎಂದರು. ಈ ಬಗ್ಗೆ ಆ.5ರಂದು ಪ್ರತ್ಯೇಕ ಸಭೆ ಕರೆಯಬೇಕು. ಆಸ್ಪತ್ರೆ ಕಟ್ಟಡದ ಎಂಜಿನಿಯರ್ ಕೂಡ ಭಾಗವಹಿಸಬೇಕು ಎಂದು ಸಚಿವರು ಸೂಚಿಸಿದರು.

ಅಕ್ಟೋಬರ್‌ನಲ್ಲಿ ಕಾಮಗಾರಿ:

ಅಣಶಿ ಘಟ್ಟದಲ್ಲಿ ರಸ್ತೆ ದುರಸ್ತಿಗೆ ₹ 3.92 ಕೋಟಿ ಟೆಂಡರ್‌ಗೆ ಅನುಮೋದನೆಯಾಗಿದೆ. ಕಾಮಗಾರಿಯು ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ. ಘಟ್ಟ ರಸ್ತೆಯಲ್ಲಿ ಒಟ್ಟು ಆರು ಕಡೆ ಕುಸಿಯಬಹುದಾದ ಸ್ಥಳಗಳನ್ನು ಗುರುತಿಸಲಾಗಿದೆ. ಅದರಲ್ಲಿ ಮೂರು ಕಡೆ ಈಗಾಗಲೇ ಕುಸಿದಿದೆ. ಪೂರ್ಣ ಪುನರ್ ನಿರ್ಮಾಣಕ್ಕೆ ₹ 82 ಕೋಟಿ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಈ ಬಗ್ಗೆ ಒಂದು ವಾರದಲ್ಲಿ ಪ್ರಸ್ತಾವ ಕಳುಹಿಸುವಂತೆ ಸಚಿವರು ನಿರ್ದೇಶನ ನೀಡಿದರು.

300 ಜನರಿಂದ ದೇಣಿಗೆ:

‘ಗೋಶಾಲೆಗಳಲ್ಲಿರುವ ಜಾನುವಾರಿನ ಆರೈಕೆ, ಮೇವಿಗೆಂದು‘ಪುಣ್ಯಕೋಟಿ’ ಯೋಜನೆಯಡಿ ಜಿಲ್ಲೆಯಲ್ಲಿ 300 ಜನ ದೇಣಿಗೆ ನೀಡಿದ್ದಾರೆ’ ಎಂದು ಪಶು ಸಂಗೋಪನೆ ಮತ್ತು ಪಶುವೈದ್ಯ ಇಲಾಖೆ ಉಪ ನಿರ್ದೇಶಕ ಡಾ.ರಾಕೇಶ ಬಂಗ್ಲೆ ತಿಳಿಸಿದರು.

‘ಇಬ್ಬರು ತಲಾ ₹ 11 ಸಾವಿರ ಪಾವತಿಸಿ ಜಾನುವಾರನ್ನು ಒಂದು ವರ್ಷಕ್ಕೆ ದತ್ತು ತೆಗೆದುಕೊಂಡಿದ್ದಾರೆ. ಆಸಕ್ತರು ದತ್ತು ತೆಗೆದುಕೊಳ್ಳಲು ಅವಕಾಶವಿದೆ’ ಎಂದರು.

ಕುಚಲಕ್ಕಿ ನೀಡಲು ಒತ್ತಾಯ:

ಪಡಿತರದಲ್ಲಿ ಕುಚ್ಚಲಕ್ಕಿಯನ್ನು ಉತ್ತರ ಕನ್ನಡ ಜಿಲ್ಲೆಗೂ ಕೊಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಸಚಿವ ಕೋಟ, ‘₹160ರಿಂದ ₹170 ಕೋಟಿ ಹೆಚ್ಚುವರಿ ಅನುದಾನ ಬೇಕಾಗಬಹುದು. ಈ ಬಗ್ಗೆ ಸಮೀಕ್ಷೆ ಕೈಗೊಂಡು ವರದಿ ಕೊಡಿ. ಉಡುಪಿಯೊಂದಿಗೆ ಸೇರಿಸಿಕೊಳ್ಳಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಚರ್ಚೆಯಾಗಿದ್ದು:

* ಸಣ್ಣ ನೀರಾವರಿ ಇಲಾಖೆ ಇ.ಇ ಕಚೇರಿ ಕಾರವಾರಕ್ಕೆ ಸ್ಥಳಾಂತರ

* ಪಶು ವೈದ್ಯರ ಕೊರತೆ ಚರ್ಚೆಗೆ ಆ.10ರೊಳಗೆ ಸಭೆ

* ಅಂಕೋಲಾದಲ್ಲಿ ಎಫ್.ಪಿ.ಒ ಮೂಲಕ ಕಲ್ಲಂಗಡಿ ಬೆಳೆ ಸಂಸ್ಕರಣೆ

* ಕುಮಟಾ ಸಿಹಿ ಈರುಳ್ಳಿ ಸಂರಕ್ಷಣೆಗೆ ಸಣ್ಣ ಸಂಗ್ರಹಾಗಾರಕ್ಕೆ ಪ್ರಸ್ತಾವ

* ‘ಹೆಂಜಾ ನಾಯ್ಕ ಸೈನಿಕ ತರಬೇತಿ ಶಾಲೆ’ಗೆ 518 ಅರ್ಜಿಗಳು ಸಲ್ಲಿಕೆ. ಸಿ.ಎಂ ಬಂದಾಗ ಉದ್ಘಾಟನೆ.

* ಹಣ್ಣು, ಆಹಾರೋತ್ಪನ್ನಕ್ಕೆ ರಾಸಾಯನಿಕ ಸೇರಿಸಿದರೆ ಪ್ರಕರಣ ದಾಖಲಿಸಲು ಸೂಚನೆ

* ಆಹಾರ ಸುರಕ್ಷತೆ ಬಗ್ಗೆ ತಾಲ್ಲೂಕು ಮಟ್ಟದಲ್ಲಿ ಆಂದೋಲನಕ್ಕೆ ನಿರ್ದೇಶನ

* ಸ್ವಾತಂತ್ರ್ಯೋತ್ಸವ: 4 ಲಕ್ಷ‌ ಮನೆಗಳಲ್ಲಿ ತ್ರಿವರ್ಣ ಧ್ವಜಾರೋಹಣಕ್ಕೆ ಸಿದ್ಧತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT