ಮಂಗಳವಾರ, ಡಿಸೆಂಬರ್ 1, 2020
22 °C
ಹುಬ್ಬಳ್ಳಿಯ ನಾಲ್ವರ ಬಂಧನ

ಆಸ್ತಿಗಾಗಿ ಏಳು ತಿಂಗಳ ಹಿಂದೆ ಕೃತ್ಯ: ಜಟಿಲ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ತಾಲ್ಲೂಕಿನ ಕಾತೂರ ಅರಣ್ಯ ಪ್ರದೇಶದಲ್ಲಿ ಏಳು ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದ ಪ್ರಕರಣವನ್ನು ಇಲ್ಲಿನ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೊಂದು ಕೊಲೆ ಎಂದು ಗೊತ್ತಾಗಿದ್ದು, ನಾಲ್ವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಹುಬ್ಬಳ್ಳಿ ನವನಗರದ ವರದರಾಜ ಶ್ರೀನಿವಾಸ ನಾಯಕ (32) ಕೊಲೆಯಾದವರು. ಹುಬ್ಬಳ್ಳಿ ಉಣಕಲ್ ಪ್ರದೇಶದ ಅಭಿಷೇಕ್ ಶೇಟ್, ತಾಜ್‌ ನಗರದ ಸುರೇಶ ನೂರಪ್ಪ ಲಮಾಣಿ, ರಾಮಕುಮಾರ ಕೃಷ್ಣ ತಾಟಿಸಮ್ಲಾ ಹಾಗೂ ಕಾತೂರ ಗ್ರಾಮದ ಬಸವರಾಜ ಬಂಧಿತ ಆರೋಪಿಗಳು.

ಯಾವ ಸುಳಿವೂ ಇರಲಿಲ್ಲ:‌

‘ಏಪ್ರಿಲ್ ತಿಂಗಳಲ್ಲಿ ಕಾತೂರ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ದೇಹದ ಭಾಗಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಕೊಲೆಯಾದವನ ಬಗ್ಗೆ ಯಾವುದೇ ಕುರುಹುಗಳು ಇದ್ದಿರಲಿಲ್ಲ. ಇದೊಂದು ಕ್ಲಿಷ್ಟಕರ ಪ್ರಕರಣವಾಗಿತ್ತು. ರಾಜ್ಯದೆಲ್ಲೆಡೆ ದಾಖಲಾಗಿರುವ ನಾಪತ್ತೆ ಪ್ರಕರಣಗಳೊಂದಿಗೆ ಪರಿಶೀಲಿಸಿದರೂ ಈ ಪ್ರಕರಣಕ್ಕೆ ಹೋಲುವಂತಹ ಲಕ್ಷಣಗಳು ಕಂಡುಬಂದಿರಲಿಲ್ಲ’ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಪ್ರಭುಗೌಡ ಕಿರೇದಳ್ಳಿ ಹೇಳಿದರು.

ಆಸ್ತಿಗಾಗಿ ಕೊಲೆ:

‘ಆರೋಪಿ ಅಭಿಷೇಕ್, ಕೊಲೆಯಾದ ಶ್ರೀನಿವಾಸನ ತಾಯಿಯ ತಂಗಿ ಮಗ. ಕೊಲೆ ಮಾಡಿದರೆ ಶ್ರೀನಿವಾಸ ಅವರ ಎಲ್ಲ ಆಸ್ತಿ ತನಗೇ ಸಿಗುತ್ತದೆ ಎಂಬ ದುರಾಸೆಯಿಂದ ಕೃತ್ಯ ರೂಪಿಸಿದ್ದ. ಇತರ ಆರೋಪಿಗಳ ಸಹಾಯದಿಂದ ಕೊಲೆ ಮಾಡಿದ್ದ. ಶಿರಸಿ ಕಡೆ ಪ್ರವಾಸಕ್ಕೆ ಹೋಗುವ ನೆಪ ಮಾಡಿ, ನಾಗನೂರು ಸನಿಹದ ಅರಣ್ಯ ಪ್ರದೇಶದಲ್ಲಿ ಕಾರು ನಿಲ್ಲಿಸಿದ್ದರು. ನಂತರ ಬೆಲ್ಟ್‌ನಿಂದ ಕುತ್ತಿಗೆಗೆ ಬಿಗಿದು ಸಾಯಿಸಿದ್ದರು’ ಎಂದು ಮಾಹಿತಿ ನೀಡಿದರು.

‘ಶವವನ್ನು ಬೈಕ್‌ನಲ್ಲಿ ಕಾಡಿನೊಳಗೆ ಒಯ್ದು, ಗುಂಡಿ ತೆಗೆದು ಮುಚ್ಚಿದ್ದರು. ಯಾರಿಗೂ ಸಂಶಯ ಬರದಿರಲಿ ಎಂದು, ಮೃತ ವ್ಯಕ್ತಿಯು ಸಂಬಂಧಿಕರ ಊರಿಗೆ ಹೋಗಿದ್ದಾನೆ ಎಂದು ಸುಳ್ಳು ಹೇಳಿದ್ದರು. ಅಲ್ಲದೇ, ಕಾಣೆಯಾದ ಬಗ್ಗೆ ಎಲ್ಲಿಯೂ ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದರು. ಮೃತ ವ್ಯಕ್ತಿಯ ಮೊಬೈಲ್‍ ಅನ್ನು ಗೋವಾದಲ್ಲಿ ಸಮುದ್ರಕ್ಕೆ ಎಸೆದಿದ್ದರು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಎಸ್.ಪಿ. ಎಸ್.ಬದರಿನಾಥ, ಶಿರಸಿ ಡಿ.ವೈ.ಎಸ್ಪಿ ಜಿ.ಟಿ.ನಾಯಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿತ್ತು. ಸರ್ಕಲ್ ಇನ್‌ಸ್ಪೆಕ್ಟರ್ ಪ್ರಭುಗೌಡ ಕಿರೇದಳ್ಳಿ, ಇನ್‌ಸ್ಪೆಕ್ಟರ್‌ಗಳಾದ ಬಸವರಾಜ ಮಬನೂರು, ಮೋಹಿನಿ ಶೆಟ್ಟಿ, ಎ.ಎಸ್.ಐ ಅಶೋಕ ರಾಠೋಡ, ಸಿಬ್ಬಂದಿ ಶರತ್ ದೇವಳ್ಳಿ, ಭಗವಾನ ಗಾಂವಕರ್, ವಿನೋದಕುಮಾರ.ಜಿ.ಬಿ, ರಾಘವೇಂದ್ರ ನಾಯ್ಕ, ಅರುಣ ಬಾಗೇವಾಡಿ, ಕುಮಾರ ಬಣಕಾರ, ವಿವೇಕ ಪಟಗಾರ, ತಿರುಪತಿ ಚೌಡಣ್ಣವರ, ರಾಘವೇಂದ್ರ ಪಟಗಾರ ತನಿಖಾ ತಂಡದಲ್ಲಿದ್ದರು. ಪ್ರಕರಣ ಬೇಧಿಸಿರುವ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಹುಮಾನ ಘೋಷಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು